ನಾಳೆ ಜೈಲಿನಿಂದ ಬಿಡುಗಡೆಯಾಗಲಿರುವ ನವಜೋತ್ ಸಿಂಗ್ ಸಿಧು

Update: 2023-03-31 11:44 GMT

ಹೊಸದಿಲ್ಲಿ: 34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ  ಸುಪ್ರೀಂ ಕೋರ್ಟ್‌ ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಪಂಜಾಬ್‌ನ ಪ್ರಮುಖ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು (Navjot Singh Sidhu)  ಅವರು ನಾಳೆ ಪಟಿಯಾಲ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿನ ಟ್ವೀಟ್ ಮೂಲಕ  ತಿಳಿಸಲಾಗಿದೆ.

“ಸಂಬಂಧಿತ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸರ್ದಾರ್ ನವಜೋತ್ ಸಿಂಗ್ ಸಿಧು ನಾಳೆ ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ’’ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ  59 ವರ್ಷದ ನವಜೋತ್ ಸಿಂಗ್ ಸಿಧುಗೆ  ಒಂದು ವರ್ಷದ "ಕಠಿಣ ಜೈಲು ಶಿಕ್ಷೆ" ವಿಧಿಸಿತ್ತು. ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಕಾರಣ ಅವರು ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು.

1988 ರಲ್ಲಿ ಸಿಧು ಅವರೊಂದಿಗಿನ  ಜಗಳದ ನಂತರ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಸುಪ್ರೀಂಕೋರ್ಟ್  ತೀರ್ಪು ನೀಡಿತು. ಸಿಧುಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ  ಕೊಲೆಯಿಂದ ಖುಲಾಸೆಗೊಳಿಸಿದ 2018ರ ಸುಪ್ರೀಂಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ಕುಟುಂಬ ಸದಸ್ಯರು ನ್ಯಾಯಾಲಯವನ್ನು ಕೋರಿದ್ದರು .

ಡಿಸೆಂಬರ್ 27, 1988 ರಂದು ಸಿಧು  ಅವರು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದ್ದರು. ಸಿಧು ಹಾಗೂ  ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಅವರ ಕಾರಿನಿಂದ ಹೊರಗೆ ಎಳೆದು ಥಳಿಸಿದ್ದರು. ಗುರ್ನಾಮ್ ಸಿಂಗ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Similar News