ನಗೆಯ ಹಾಯಿದೋಣಿಯ ‘ಸಕ್ಕರೆ ತಿಂದ ಶಾಣ್ಯಾ’

Update: 2023-06-30 10:49 GMT

ಮದುವೆಗೆ ಮುನ್ನವೇ ಗರ್ಭಿಣಿಯಾದ ಕುರಿತು ಮಗಳು ಹೇಳಿದಾಗ ಆಕೆಯ ಅಪ್ಪ ವಿಲಾಸ ದೇಶಪಾಂಡೆ ಗಾಬರಿಯಾಗುತ್ತಾನೆ. ಆದರೆ ಬಸಿರಾಗಿದ್ದು ನಾಟಕ ಎನ್ನುವುದು ತಿಳಿದಾಗ ನಿರಾಳರಾಗುತ್ತಾನೆ. ಇದಕ್ಕೂ ಮೊದಲು ಆಗಾಗ ಪಾರ್ಟಿಗಳಲ್ಲಿ ಬೀರು ಕುಡಿಯುತ್ತಿದ್ದ ಮಗಳ ವಿಷಯ ಕಂಡು ಆತಂಕಪಡುವ ಸರದಿ ಅಪ್ಪನದು. ಆನಂತರ ಡಾಕ್ಟರ್ ಓಂಕಾರ ದೇಸಾಯಿಯನ್ನು ಪ್ರೀತಿಸುವ ವಿಷಯ ಕೇಳಿದ ಅಪ್ಪಬಿ.ಪಿ. ಹೆಚ್ಚು ಮಾಡಿಕೊಳ್ಳುತ್ತಲೇ, ಶುಗರ್ (ಮಧುಮೇಹ) ಅನ್ನೂ ಅಪ್ಪಿಕೊಳ್ಳಬೇಕಾಗುತ್ತದೆ. ಮಗಳ ಪ್ರೀತಿಯನ್ನು ಒಪ್ಪದ, ಈ ಮೂಲಕ ಓಂಕಾರ ದೇಸಾಯಿಯನ್ನು ಅಳಿಯನನ್ನಾಗಿ ಒಪ್ಪಿಕೊಳ್ಳದ ವಿಲಾಸ, ಮದುವೆಯಾಗುವುದನ್ನು ತಪ್ಪಿಸಲು ಉಪಾಯಗಳನ್ನು ಹುಡುಕುತ್ತಾನೆ.

 ನಾಲ್ಕೇ ಪಾತ್ರಗಳ ಈ ನಾಟಕದಲ್ಲಿ ಗಂಡ-ಹೆಂಡಿರ ಜಗಳದ ಅನಾವರಣವಿದೆ. ಖಾಸಗಿ ಕಂಪೆನಿಗಳಲ್ಲಿರುವ ಹಾಗೆ ಇಲ್ಲಿಯ ವಿಲಾಸನಿಗೆ ಟಾರ್ಗೆಟ್ ಮುಟ್ಟಬೇಕಾದ ಅನಿವಾರ್ಯತೆ, ಇದರಿಂದ ಒತ್ತಡಕ್ಕೆ ಒಳಗಾಗುವನು. ಈ ಮೂಲಕ ಬಿ.ಪಿ. ಹೆಚ್ಚಾಗುವುದು. ಜೊತೆಗೆ ಮಗಳ ವಿಷಯಕ್ಕೂ ಒತ್ತಡಕ್ಕೆ ಒಳಗಾಗುವ ದೃಶ್ಯಗಳೂ ಇವೆ. ಕೊನೆಗೆ ಮಗಳ ಪ್ರೀತಿ ಒಪ್ಪುವ ಮೂಲಕ ಡಾಕ್ಟರ್ ಓಂಕಾರನನ್ನು ಅಳಿಯನಾಗಿ ಒಪ್ಪಿರುವುದಾಗಿ ಹೇಳಿದಾಗ ನಾಟಕ ಸುಖಾಂತ್ಯಗೊಳ್ಳುತ್ತದೆ. ಮಧ್ಯಮ, ಸಣ್ಣಮಧ್ಯಮ ಕುಟುಂಬಗಳ ಕಷ್ಟಸುಖಗಳು. ಅವುಗಳ ನಡುವೆಯೇ ಖುಷಿಯಾಗಿರುವುದು ಹೇಗೆ? ಒತ್ತಡದ ಬದುಕಿನಿಂದ ಬರುವ ಬಿ.ಪಿ., ಶುಗರ್ ಅನ್ನು ನಿಯಂತ್ರಿಸುವ ಕ್ರಮ ಹೇಗೆ, ಆರಂಭದಲ್ಲಿ ತನ್ನ ಮಗಳನ್ನು ಪ್ರೀತಿಸುವ ಡಾಕ್ಟರ್ ಓಂಕಾರನನ್ನು ಮನೆಯಿಂದ ಓಡಿಸಿದ್ದ ಅಪ್ಪ, ಆಮೇಲೆ ಉಲ್ಟಾ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಬ ಓಂಕಾರನ ಸಲಹೆಗೆ ಒಪ್ಪಿಕೊಳ್ಳುತ್ತಾನೆ. ಹಾಗೆ ಉಲ್ಟಾ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವ ಮೂಲಕ ಆದ ಲಾಭಗಳನ್ನು ಅಪ್ಪಕಂಡುಕೊಳ್ಳುತ್ತಾನೆ.

ಹೀಗೆ ಈ ನಾಟಕ ಪ್ರಸಕ್ತ ವಿದ್ಯಮಾನಗಳನ್ನು ಚರ್ಚಿಸುತ್ತದೆ. ಜೊತೆಗೆ ತಾನಿಷ್ಟಪಟ್ಟ ಓಂಕಾರನನ್ನು ಪ್ರೀತಿಸುವ ಮಗಳ ಧೈರ್ಯ, ಅವಳು ತೆಗೆದುಕೊಳ್ಳುವ ನಿರ್ಧಾರದಿಂದ ತಲೆಕೆಡಿಸಿಕೊಳ್ಳುವ ಅಪ್ಪ, ಅವನನ್ನು ಸಮಾಧಾನಪಡಿಸಲು ಆತನ ಹೆಂಡತಿ ಮಾಧವಿ ದೀರ್ಘಶ್ವಾಸ ತೆಗೆದುಕೊಳ್ಳಿ ಎಂದ ಕೂಡಲೇ ಕೂತು ದೀರ್ಘಶ್ವಾಸ ಶುರು ಮಾಡುವ ದೃಶ್ಯಗಳು ನಗಿಸುತ್ತವೆ. ಇಡೀ ನಾಟಕ ನಗುವಿನ ಹಾಯಿದೋಣಿಯಲ್ಲಿ ಕರೆದೊಯ್ಯುತ್ತದೆ. ಇದು ಎಲ್ಲ ವರ್ಗದ, ಎಲ್ಲ ವಯೋಮಾನದವರನ್ನು ಹಿಡಿದಿಡುವ ನಾಟಕ. ಆಸಕ್ತಿ ಹುಟ್ಟಿಸುವ ತಿರುವಿನ ದೃಶ್ಯಗಳು, ಕಚಗುಳಿಯಿಡುವ ಹಾಸ್ಯ ಸಂಭಾಷಣೆ, ಇದಕ್ಕೆ ಪೂರಕವಾಗಿ ಅಪ್ಪನ ಪಾತ್ರದಲ್ಲಿ ಕೃಷ್ಣಮೂರ್ತಿ (ಕಿಟ್ಟಿ) ಗಾಂವ್ಕರ್, ಇವರಿಗೆ ಪೂರಕವಾಗಿ ಅವರ ಹೆಂಡತಿ ಮಾಧವಿಯ ಪಾತ್ರಧಾರಿಯಾಗಿ ಪೂಜಾ ಜಹಗೀರದಾರ, ಮಗಳಾಗಿ ಬಿ.ಅರ್ಪಿತಾ, ಡಾಕ್ಟರ್ ಓಂಕಾರ ಪಾತ್ರದಲ್ಲಿ ಪ್ರದೀಪ ಮುಧೋಳ ಮಿಂಚುತ್ತಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ಅಪಾರ ಯಶಸ್ಸು ಕಂಡ ಮರಾಠಿ ನಾಟಕ ‘ಸಾಖರ್ ಖಾಲಲೇಲ ಮಾಣೂಸ್’. ಇದು ಸೊಲ್ಲಾಪುರದ ವಿದ್ಯಾಸಾಗರ ಅಧ್ಯಾಪಕ ಅವರ ನಾಟಕ. ಪುಣೆ, ಮುಂಬೈನಲ್ಲಿ ಮಾತ್ರ ಮರಾಠಿಯ ಉತ್ತಮ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎನ್ನುವ ಮಾತನ್ನು ಮೀರುವಂತೆ ಸೊಲ್ಲಾಪುರದಲ್ಲಿ ಉತ್ತಮ ನಾಟಕಗಳನ್ನು ಕೊಟ್ಟ ಹೆಗ್ಗಳಿಕೆ ವಿದ್ಯಾಸಾಗರ ಅಧ್ಯಾಪಕ ಅವರದು. ಇಂಥ ನಾಟಕವನ್ನು ಕನ್ನಡದ ನೆಲಕ್ಕೆ ಒಗ್ಗಿಸಿ ಅನುವಾದಗೊಳಿಸಿದವರು ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕ ಯಶವಂತ ಸರದೇಶಪಾಂಡೆ. ಉತ್ತರ ಕರ್ನಾಟಕ ಸಂಭಾಷಣೆಯ ಈ ನಾಟಕವು ಹಾಸ್ಯ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಅಲ್ಲಲ್ಲಿ ಹೇಗೆ ಜೀವಿಸಬೇಕೆಂಬ ಟಿಪ್ಸ್‌ಗಳನ್ನೂ ನೀಡುತ್ತದೆ. ಹೀಗಾಗಿ ಇದು ‘ಸಿಹಿ ಕಾಮಿಡಿ ಅಲ್ಲ, ಕಹಿ ಕಾಮಿಡಿ’ ಎನ್ನುವ ಟ್ಯಾಗ್‌ಲೈನ್ ಈ ನಾಟಕದ್ದು. ಅಂದರೆ ಗುಳಿಗೆ (ಮಾತ್ರೆ) ಕಹಿಯಾಗಿದ್ದು, ಔಷಧಿಯಾಗಿ ಕೆಲಸ ನಿರ್ವಹಿಸುತ್ತದೆ. ಇಂಥ ಔಷಧಿಯ ಗುಣವನ್ನು ಈ ನಾಟಕ ನೀಡುತ್ತದೆ.

ನಾಟಕದ ಕೊನೆಗೆ ಅಪ್ಪನ ಪಾತ್ರಧಾರಿ ಕಿಟ್ಟಿ ಗಾಂವ್ಕರ್ ಹೇಳುವ ಮಾತುಗಳಿವು; ‘‘ನಾ ಹುಟ್ಟಿದಾಗ ನನಗೇನೂ ಟಾರ್ಗೆಟ್ ಇರಲಿಲ್ಲ. ಮುಂದ ಬೇಕಾದಷ್ಟು ಟಾರ್ಗೆಟ್ ಬಂದವು. ಸುಖವಾಗಿ ಬಾಳೋದಕ್ಕಿಂತ ಟಾರ್ಗೆಟ್ ಮುಖ್ಯ ಅಂತ ಅನ್ನಿಸ್ತು. ಆಮ್ಯಾಲೆ ಕ್ರಮೇಣ ಲಕ್ಷ್ಯಕ್ಕೆ ಬಂತು. ಈ ಚಕ್ರದಿಂದ ನಾ ಹೊರಗ ಬರಬೇಕಂದ್ರ ಹಿಂದ ನೋಡು, ಹಿಂಬರಕಿ ಅಂದ್ರ ಉಲ್ಟಾ ನಡಿಬೇಕು.’’

‘‘ಈ ಡಯಾಬಿಟಿಸ್ ರೋಗ ಹೌದು ಅಂದ್ರ ಹೌದು. ಅಲ್ಲ ಅಂದ್ರ ಅಲ್ಲ. ಡಯಾಬಿಟಿಸ್ ಆದವರು ನಾರ್ಮಲ್ ಅಂದ್ರ ನಾರ್ಮಲ್. ಅಬ್‌ನಾರ್ಮಲ್ ಅಂದ್ರ ಅಬ್‌ನಾರ್ಮಲ್. ಯಾವ ಡಯಾಬಿಟಿಸ್ ನನಗ ಶಾಪ ಅನಿಸಿತ್ತೊ ಅದ ನಂಗ ವರವಾಗಿ ಪರಿಣಮಿಸೇದ. ಬದುಕು ನೋಡೋ ದೃಷ್ಟಿಕೋನ ಬದಲಿಸೇದ (ಮಗಳನ್ನು ನೋಡುತ್ತ) ಇನ್ನೊಬ್ಬರನ್ನ ಇನ್ನೊಬ್ಬರ ವಿಚಾರನ, ಇನ್ನೊಬ್ಬರ ಮತಾನ ಸ್ವೀಕಾರ ಮಾಡೋದನ್ನ ಕಲಿಸೇದ, ನಾ ಸಣ್ಣವ ಇದ್ದಾಗ ಊರು ಹೊರಗಿನ ಕೆರಿಗೆ ಈಜಲಿಕ್ಕೆ ಹೋಗತಿದ್ದೆ. ಆ ಈಜೋದನ್ನ, ನೀರಾಗ ಆಡೋದನ್ನ ಭಾಳ ಭಾಳ ಎಂಜಾಯ್ ಮಾಡ್ತಿದ್ದೆ. ಮುಂದಿನ ಭವಿಷ್ಯದ ವಿಚಾರ ಮಾಡದ ಆರಾಮವಾಗಿದ್ದೆ. ಈಗ ಎರಡು ತಿಂಗಳಿಂದ ಉಲ್ಟಾ ನಡಿಯೋ ಮುಂದ ಆ ನೆನಪುಗಳೆಲ್ಲ ಮರುಕಳಿಸಿದವು. ಮತ್ತ ಅನಿಸಿತು; ಈಗ ಹಂಗ ಬದುಕಬಾರದ್ಯಾಕ ನಾನು. ಅಷ್ಟ ಉತ್ಸಾಹ, ಅಷ್ಟ ಆನಂದದಿಂದ ಯಾಕ ಇರಬಾರದು ಅಂತ. ಬೇಕಾದಂತ ದೊಡ್ಡ ಪ್ರಾಬ್ಲೆಮ್ ಇರ್ಲಿ, ಅದನ್ನ ಫೇಸ್ ಮಾಡೋ ಶಕ್ತಿ ಬಂತು ನಂಗ ಈ ಉಲ್ಟಾ ನಡಿಯೋದರಿಂದ. ಥ್ಯಾಂಕ್ಯೂ ಓಂಕಾರ ಥ್ಯಾಂಕ್ಸ್ ಲಾಟ್. ನನ್ನ ಲೈಫ್ ಸ್ಟೈಲ್ ಕಡೆ ನೋಡೋ ದೃಷ್ಟಿಕೋನನ ಬದಲಿಸಿದೆ ನೀ...’’ 

ಹೀಗೆ ಸಮಸ್ಯೆಗಳ ನಡುವೆ, ದೈಹಿಕ ಕಾಯಿಲೆಗಳೊಂದಿಗೆ ಧನಾತ್ಮಕ, ಗುಣಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕೆಂದು ಸಾರುವ ಈ ನಾಟಕದ ಸೆಟ್ ಚೆನ್ನಾಗಿತ್ತು. ಆದರೆ ಕಲಾವಿದರು ಉಡುಪು ಬದಲಿಸುವ ಅವಧಿ ಕೊಂಚ ದೀರ್ಘವಾದುದರಿಂದ ಪ್ರೇಕ್ಷಕರ ಲಕ್ಷ್ಯ ಅತ್ತಿತ್ತ ಸುಳಿಯುವಂತಾಯಿತು. ಜೊತೆಗೆ ಪಂಚ್ ಸಂಭಾಷಣೆಗೆ ಪ್ರೇಕ್ಷಕರ ಚಪ್ಪಾಳೆ ಸಿಕ್ಕಾಗ ಕೊಂಚ ನಿಧಾನಿಸಿ ಮುಂದಿನ ಸಂಭಾಷಣೆಯನ್ನು ಕಲಾವಿದರು ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಚಪ್ಪಾಳೆ ಸದ್ದಿನಲ್ಲಿ ಸಂಭಾಷಣೆ ಹೇಳಿದರೆ ಕೇಳಿಸುವುದಿಲ್ಲ. ಎಲ್ಲರನ್ನೂ ಹಿಂದಿಕ್ಕಿ ಮಿಂಚಿದವರು ಈ ನಾಟಕ ನಿರ್ದೇಶಿಸಿದ ಕಿಟ್ಟಿ ಗಾಂವ್ಕರ್. ಕೃಷಿಯೊಂದಿಗೆ ಬಿಡುವಾದಾಗ ರಂಗಕೃಷಿ ಕೈಗೊಳ್ಳುವ ಅವರ ಬದ್ಧತೆ ಗಮನಾರ್ಹ. ಪ್ರೇಕ್ಷಕರನ್ನು ಸೆಳೆವ ಅವರ ಧ್ವನಿ ಜೊತೆಗೆ ಅಭಿನಯವು ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಇವರಿಗೆ ಪೂರಕವಾಗಿ ಉಳಿದ ಕಲಾವಿದರು ಅಭಿನಯಿಸಿದರೆ ನಾಟಕವು ಇನ್ನಷ್ಟು ಪರಿಣಾಮಕಾರಿಯಾಗಲಿದೆ.

ಯಶವಂತ ಸರದೇಶಪಾಂಡೆ ಅವರ ನಾಟಕಗಳು ಎಂದಿನಂತೆ ಹಾಸ್ಯ ಪ್ರಸಂಗಗಳಿಂದ ಗಮನ ಸೆಳೆಯುತ್ತವೆ ಎನ್ನುವುದು ಈ ನಾಟಕದ ಮೂಲಕ ಮತ್ತೊಮ್ಮೆ ಸಾಬೀತಾಯಿತು. ಅವರ ‘ಆಲ್ ದಿ ಬೆಸ್ಟ್’, ‘ಸಹಿ ರಿ ಸಹಿ’, ‘ರಾಶಿಚಕ್ರ’ ನಾಟಕಗಳ ಹಾಗೆ ಈ ನಾಟಕವೂ ನಗೆಗಡಲಲ್ಲಿ ತೇಲಿಸುತ್ತದೆ.

ನಾಟಕ: ಸಕ್ಕರೆ ತಿಂದ ಶಾಣ್ಯಾ

ಮೂಲ ಮರಾಠಿ: ವಿದ್ಯಾಸಾಗರ ಅಧ್ಯಾಪಕ

ಅನುವಾದ: ಯಶವಂತ ಸರದೇಶಪಾಂಡೆ

ನಿರ್ದೇಶನ: ಕೃಷ್ಣಮೂರ್ತಿ ಗಾಂವ್ಕರ್

ಸಹ ನಿರ್ದೇಶನ: ಅರುಣ್ ಹರಪನಹಳ್ಳಿ

Similar News

ಓ ಮೆಣಸೇ...
ಓ ಮೆಣಸೇ...