ಉರ್ದು ಪತ್ರಿಕಾರಂಗದ ಭೀಷ್ಮ ಜಮುನಾದಾಸ ಅಖ್ತರ್

Update: 2023-11-17 06:10 GMT

ಪತ್ರಕರ್ತನಾದವನು ಸೃಜನಶೀಲ ಸಾಹಿತಿಯಾಗ ಲಾರನೆನ್ನುವುದು ಕೆಲವರ ಅಭಿಪ್ರಾಯ. ಆದರೆ ಉರ್ದು ಸಾಹಿತಿಗಳ ಕಿರುಪರಿಚಯದ ಪಟ್ಟಿಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಉರ್ದು ಸಾಹಿತಿಯು ಪತ್ರಕರ್ತನೂ ಆಗಿರುತ್ತಾನೇನೋ ಅನ್ನಿಸುವುದು ಸಹಜ. ಸಾಹಿತ್ಯ ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎನ್ನುವುದರಲ್ಲಂತೂ ಸಂದೇಹವಿರಲಾರದು. ಹಾಗಾಗಿ ಸಾಹಿತಿಯಾದವನು ಪತ್ರಕರ್ತನಾದರೆ ಅವನ ಪತ್ರಿಕಾ ಬರವಣಿಗೆ ನಿಷ್ಪಕ್ಷವಾಗಿರಬಲ್ಲದು. ಈ ಉರ್ದು ಪತ್ರಿಕೋದ್ಯಮಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಉರ್ದು ಪತ್ರಿಕೋದ್ಯಮದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಖಂಡಿತವಾಗಿ ಪ್ರಯೋಜನವಾದೀತೇ ವಿನಾ ನಷ್ಟವೇನಾಗಲಾರದು. ಇತಿಹಾಸದಿಂದ ಪಾಠ ಕಲಿಯಬಯಸದವರಿಗೆ ಓದಿದರೂ ಅಷ್ಟೇ ಬಿಟ್ಟರೂ ಅಷ್ಟೇ.

27 ಮಾರ್ಚ್, 1822ರಂದು ಮೊದಲ ಉರ್ದು ಪತ್ರಿಕೆ ಪ್ರಕಟವಾಯಿತು. ಅದೂ ಆ ಭಾಷೆಯ ಓದುಗರು ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಕಲ್ಕತ್ತಾದಿಂದ ‘‘ಜಾಮೆ ಜಹಾಂನುಮಾ’ ಪತ್ರಿಕೆ ಹೊರಹೊಮ್ಮಿತ್ತು. ಅದರ ಪ್ರಕಾಶಕರು ಹರಿಹರ ದತ್ತ ಎನ್ನುವ ಬಂಗಾಲಿ ಬ್ರಾಹ್ಮಣ. ಅದರ ಸಂಪಾದಕರು ಲಾಲಾ ಸದಾಸುಖ ಲಾಲ್ ಎನ್ನುವ ಪಂಜಾಬಿ ವೈಶ್ಯ. ಪತ್ರಿಕೆಯ ಮುದ್ರಕ ವಿಲಿಯಮ್ ಹಾಪ್ಕಿನ್ಸ್ ಎನ್ನುವ ಬ್ರಿಟಿಷ್ ನಾಗರಿಕ. ಅವನು ಈಸ್ಟ್ ಇಂಡಿಯಾ ಕಂಪೆನಿಯ ನೌಕರನಾಗಿದ್ದ. ಪತ್ರಿಕೆಗೆ ಈಸ್ಟ್ ಇಂಡಿಯಾ ಕಂಪೆನಿಯ ಬೆಂಬಲವಿತ್ತು. ಒಟ್ಟಾರೆ ಉರ್ದು ಕೇವಲ ಮುಸಲ್ಮಾನರ ಭಾಷೆಯಾಗಿರಲಿಲ್ಲವೆನ್ನುವುದು ಇದರಿಂದ ಸ್ಪಷ್ಟವಾಗಲಾರದೆ?

ಜಮುನಾದಾಸ ಅಖ್ತರ್ (1916-2009)ಶ್ರೇಷ್ಠ ಉರ್ದು ಸಾಹಿತಿಯೆನಿಸಿಕೊಂಡವರು. ಸಾಹಿತಿಯಾಗಿ ಜಮುನಾದಾಸರು ಸಮಾಜದಲ್ಲಿನ ಕೇಡಿಗಳನ್ನು ಅವರ ಹೆಸರುಗಳಲ್ಲೇ ತಮ್ಮ ಕಾದಂಬರಿಗಳ ಪಾತ್ರಗಳಾಗಿ ಮೈದಾಳುವಂತೆ ಮಾಡಿದವರು. ಅವರು ಉರ್ದು ಪತ್ರಿಕಾರಂಗದ ಭೀಷ್ಮರೆನಿಸಿಕೊಂಡವರು. ಜಮುನಾದಾಸ ಸಂಶೋಧಕರಾಗಿಯೂ ಅಮೂಲ್ಯ ಕೊಡುಗೆ ಸಲ್ಲಿಸಿದರು. ಅವರು ಇತಿಹಾಸಕಾರರಾಗಿ ಇತಿಹಾಸ ರಚನೆಗೆ ಹೊಸ ದೃಷ್ಟಿಕೋನದ ಅಗತ್ಯತೆಯನ್ನು ತೋರಿಸಿಕೊಟ್ಟರು. ಅವರೊಬ್ಬ ನಿಸ್ಪೃಹ ಸಮಾಜ ಸುಧಾರಕರಾಗಿದ್ದರು. ಇಷ್ಟೇ ಅಲ್ಲದೇ ಅವರು ಕಾರ್ಮಿಕ ನಾಯಕರೂ ಆಗಿದ್ದರು. ಎಲ್ಲಕ್ಕೂ ಹೆಚ್ಚಾಗಿ ಅವರು ಅಗಾಧ ಮಾನವಪ್ರೇಮಿಯಾಗಿದ್ದರು.

ಜಮುನಾದಾಸರು ಕಾಂಗ್ರೆಸ್ನ ‘ಭಾರತ ಬಿಟ್ಟು ತೊಲಗಿರಿ’ ಚಳವಳಿಯಲ್ಲಿ ಪಾಲ್ಗೊಂಡಿದ್ದು ತನಗೆ ಹೆಮ್ಮೆಯ ವಿಷಯವಾಗಿದೆಯೆಂದು ಅವರು ಸದಾ ಹೇಳುತ್ತಿದ್ದರು. ಅಹರಾರ್ ಪಕ್ಷವು ಸಮಾನತೆ, ಜಾತ್ಯತೀತತೆ, ಪಾಳೇಗಾರಿಕೆ ವಿರೋಧಿ ಪಕ್ಷವಾಗಿತ್ತು. ಅವರು ಪ್ರಿನ್ಸಿಪಾಲ್ ಛಬೀಲದಾಸರಿಂದ ಪ್ರಭಾವಿತರಾಗಿದ್ದರು. ಛಬೀಲದಾಸರು ಭಗತ್ಸಿಂಗ್ರ ವಿದ್ಯಾಗುರು ಹಾಗೂ ಆಪ್ತ ಸಂಗಾತಿಯೂ ಆಗಿದ್ದವರು. ಅವರು ‘ನೌಜವಾನ್ ಭಾರತ ಸಭಾ’ದಲ್ಲಿ ಸಕ್ರಿಯರಾಗಿದ್ದರು. ಉರ್ದುವಿನಲ್ಲಿ ಅವರು ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜವಾದ ಕುರಿತು ಭಾಷಣ ಮೂಲಕ ಅರಿವು ಮೂಡಿಸಲೆತ್ನಿಸುತ್ತಿದ್ದರು.

ಜಮುನಾದಾಸರು ಛಬೀಲದಾಸರ ಮಾರ್ಗದರ್ಶನದಲ್ಲಿ ಮುನ್ನಡೆದರು. ಆನಂತರ ಅವರು ಲಾಲಾ ದೇಶಬಂಧು ಗುಪ್ತಾ, ಶ್ರೀವೀರೇಂದ್ರ, ಲಾಲಾ ಖುಶಹಾಲ್ ಚಂದ್ ಖುರಸಂದ್ ಮತ್ತು ಫ್ರೀ ಪ್ರೆಸ್ ಜರ್ನಲ್ನ ಸಂಪಾದಕ ಸದಾನಂದರ ವ್ಯಕ್ತಿತ್ವಗಳಿಂದ ಪ್ರಭಾವಿತರಾದರು. ಮೊದಲ ಮೂವರು ಜಮುನಾದಾಸರ ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.

ಅವರು ಬರೀ ಉರ್ದು ಪತ್ರಿಕೆಗಳಿಗೆ ಅಷ್ಟೇ ಅಲ್ಲ ಹಿಂದಿ, ಪಂಜಾಬಿ ಹಾಗೂ ಇಂಗ್ಲಿಷ್ ಪತ್ರಿಕೆಗಳಿಗೆ ಬದುಕಿನ ಕೊನೆ ತನಕ ಅಂಕಣಕಾರರಾಗಿ ನಿಯಮಿತವಾಗಿ ಬರೆಯುತ್ತಿದ್ದರು. ಪತ್ರಕರ್ತ ಎಂದೂ ನಿವೃತ್ತನಾಗುವುದಿಲ್ಲವೆನ್ನುವುದಕ್ಕೆ ಅವರೇ ನಿದರ್ಶನವೆನಿಸಿದರು. ದೇಶ ವಿಭಜನೆ ನಂತರ ಭುಗಿಲೆದ್ದ ಕೋಮು ಗಲಭೆಗಳಿಂದಾಗಿ ಲಾಹೋರ್ನ ಹಿಂದೂಗಳೆಲ್ಲ ದಿಲ್ಲಿಗೆ ಧಾವಿಸಿ ಬಂದು ಅಲ್ಲೇ ನೆಲೆ ನಿಂತರು. ಜಮುನಾದಾಸರು ಜಗನ್ನಾಥ ಆಝಾದ್, ರಮಾನಂದ ಸಾಗರ್, ಮಾಲಿಕ್ ರಾಂ, ಗೋಪಾಲ ಮಿತ್ತಲ್, ರಾಜದಾಂ, ದೀನಾನಾಥ ವರ್ಮಾ ಮುಂತಾದವರನ್ನು ಪತ್ರಿಕಾರಂಗಕ್ಕೆ ಪರಿಚಯಿಸಿದರು. ಅವರೆಲ್ಲ ಪ್ರಸಿದ್ಧ ಪತ್ರಕರ್ತರೆನಿಸಿಕೊಂಡರು.

ಎರಡನೇ ಮಹಾಯುದ್ಧದ ಕಾಲದಲ್ಲಿ ಒಂದು ದಿನ ಕೊನೆಯ ಸುದ್ದಿಯನ್ನು ಬರೆದು ಮುಗಿಸಿ ಮನೆಗೆ ಹೊರಟಿದ್ದರು ಜಮುನಾದಾಸ. ಆಗ ಆಕಸ್ಮಾತ್ತಾಗಿ ಅವರು ವಿದೇಶಿ ರೇಡಿಯೊದಿಂದ ಪ್ರಸಾರವಾದ ಒಂದು ಸುದ್ದಿ ಕೇಳಿದರು. ತಕ್ಷಣ ಅವರು ಆ ಸುದ್ದಿಯನ್ನು ಬರೆದವರೇ ತಾವೇ ಮುದ್ರಣಾಲಯಕ್ಕೆ ಧಾವಿಸಿದರು. ಮುಖಪುಟದ ಒಂದು ಸುದ್ದಿಯನ್ನು ಕತ್ತರಿಸಿ ಆ ಸ್ಥಳದಲ್ಲಿ ತಮ್ಮ ಸುದ್ದಿ ಬರಹವನ್ನು ಸೇರಿಸಿದರು. ಮಾರನೇ ದಿನ ಅವರ ಪತ್ರಿಕೆಯಲ್ಲಿ ಮಾತ್ರ ‘ರಶ್ಯದ ಮೇಲೆ ಜರ್ಮನಿಯು ಆಕ್ರಮಣ ಮಾಡಿತು’ ಎನ್ನುವ ಆ ಸುದ್ದಿ ಪ್ರಕಟವಾಯಿತು. ಇಂದಿನ ಸುದ್ದಿ ಇಂದೇ, ಇಂದಿನ ಸುದ್ದಿ ಈಗಲೇ ಲಭ್ಯವಾಗುತ್ತಿರುವ ಕಾಲವಿದು. ಆದರೂ ಅದು ಅಂದಿನ ಓದುಗರಿಗೆ ಅಚ್ಚರಿಯ ವಿಷಯವಾಗಿತ್ತು.

ರಮಾನಂದ ಸಾಗರ್ ಆಗ ತಾನೇ ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದ್ದರು. ಅವರು ‘ಮಿಲಾಪ್’ ಪತ್ರಿಕೆಯಲ್ಲಿ ಜಮುನಾದಾಸರ ಉಸ್ತುವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಶ್ವಯುದ್ಧದ ಕಾಲವದು. ಸಾಗರ್ ಒಂದು ಸುದ್ದಿಯನ್ನು ಬರೆದು ತಂದರು. ಆ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಲಾಯಿತು. ‘ವಾಶಿಂಗ್ಟನ್ದಲ್ಲಿ ಬ್ರಿಟನ್ ರಾಯಭಾರಿ ಲಾರ್ಡ್ ಲೊಥಿಯಾನ್ ಅವರು ರಕ್ತದಲ್ಲಿ ಕಂಡು ಬಂದ ವಿಷಕಾರಿ ವಸ್ತುವಿನಿಂದ ನಿಧನರಾದರು’ ಎನ್ನುವ ಸುದ್ದಿ ಅದು. ಸಾಗರ್ ಅವರು ‘sceptic wound’ ಎನ್ನುವ ಒಂದು ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು. ‘‘ಲಾರ್ಡ್ ಲುಥಿಯಾನ್ರಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಲಾಯಿತು’’ ಎಂದು ಸುದ್ದಿ ಮಾಡಿದರು. ಬಲೂಚಿಸ್ತಾನ್ ಪತ್ರಿಕೆಯೊಂದು ಈ ವಿಷಯವಾಗಿ ಸಂಪಾದಕೀಯವನ್ನೇ ಬರೆಯಿತು.

‘‘ಅಮೆರಿಕ ಮತ್ತು ಬ್ರಿಟನ್ ಮಿತ್ರ ರಾಷ್ಟ್ರಗಳೇ ಆದರೂ ಅವು ಪರಸ್ಪರ ಶತ್ರುಗಳೇ’’ ಎಂದು ಬರೆಯಲಾಯಿತು. ಪತ್ರಿಕೆಯ ಆಡಳಿತ ಮಂಡಳಿ ಸಭೆ ಸೇರಿ ರಮಾನಂದರಿಗೆ ಛೀಮಾರಿ ಹಾಕಿತು. ಬಲೂಚಿಸ್ತಾನ್ ಸರಕಾರವು ಈ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರನ್ನು ಬಂಧಿಸಿತು. ಸಾಗರ್ರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆಗ ‘‘ತಪ್ಪು ನನ್ನದು ಹಾಗೂ ನೀವು ನನ್ನ ವಿರುದ್ಧ ಕ್ರಮ ಕೈಕೊಳ್ಳಬೇಕು ಸರ್.’’ ಎಂದು ಜಮುನಾದಾಸರು ಮಾಲಕರಲ್ಲಿ ಮನವಿ ಮಾಡಿಕೊಂಡರು. ‘‘ತಪ್ಪು ಯಾರದೆಂದು ನನಗೆ ಗೊತ್ತು. ನೀವು ಆತನನ್ನು ರಕ್ಷಿಸಬೇಕೆಂದಿದ್ದೀರಿ, ಅಲ್ಲವೇ?’’ ಎಂದು ಕೇಳಿದರು.

ಹೌದೆಂದು ತಲೆಯಲ್ಲಾಡಿಸಿದ ಜಮುನಾದಾಸರು ‘‘ಮುಂದೆ ಹೀಗಾಗದಂತೆ ನಾನು ನೋಡಿಕೊಳ್ಳುವೆ. ನಾನು ಈ ವಿಷಯವಾಗಿ ಭರವಸೆ ಕೋಡುತ್ತೇನೆ,’’ ಎಂದರು. ಸಾಗರ್ ಕೆಲವೇ ವರ್ಷಗಳಲ್ಲಿ ದಕ್ಷ ಪತ್ರಕರ್ತರೆಂದು ಹೆಸರು ಮಾಡಿದರು. ಅದಕ್ಕೆ ಅವರ ಸಾಮರ್ಥ್ಯವೇ ಕಾರಣವೆಂದು ಜಮುನಾದಾಸ ಹೇಳಿದರು. ಸಾಗರ್ ಅದೇಕೋ ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಮುಂಬೈಗೆ ಬಂದು ಚಿತ್ರಜಗತ್ತಿನಲ್ಲಿ ಹೆಸರು ಮಾಡಿದರು. ಕಿರುತೆರೆಯ ಇತಿಹಾಸದಲ್ಲಿ ಅವರ ‘ರಾಮಾಯಣ’ ಧಾರಾವಾಹಿ ದಾಖಲೆ ನಿರ್ಮಿಸಿತು.

ಪತ್ರಕರ್ತನಾದವನು ನಿಷ್ಪಕ್ಷವಾಗಿರಬೇಕು ಎಂದರೆ ಕಣ್ಣ ಮುಂದೆ ನಡೆಯುವ ಅನ್ಯಾಯ ಅತ್ಯಾಚಾರಗಳಿಗೆ ಕುರುಡಾಗಿರಬೇಕೆಂದಲ್ಲವೆಂದು ಜಮುನಾದಾಸರು ಹೇಳುತ್ತಿದ್ದರು. ಯುದ್ಧದ ಕಾಲದಲ್ಲಿ ಒಮ್ಮೆ ಶಿಮ್ಲಾದ ಪರ್ವತ ಪ್ರದೇಶದಲ್ಲಿ ಒಬ್ಬ ಬುರ್ಖಾಧಾರಿ ಮುಸ್ಲಿಮ್ ಯುವತಿಯನ್ನು ಬಿಳಿಯ ಯೋಧನೊಬ್ಬ ಚುಡಾಯಿಸತೊಡಗಿದ್ದ. ಆಗ ಯುವತಿ ಬೊಬ್ಬೆ ಹಾಕಿದಳು. ಅಷ್ಟರಲ್ಲಿ ‘ಮಿಲಾಪ್’ ಪತ್ರಿಕೆಯ ಗೂರ್ಖಾ ಕಾವಲುಗಾರ ಅಲ್ಲಿಗೆ ಧಾವಿಸಿದ. ಒಬ್ಬ ಯುವಕನ ಕೈಯಲ್ಲಿದ್ದ ಹಾಕಿ ಸ್ಟಿಕ್ಅನ್ನು ಕಸಿದುಕೊಂಡು ಬಿಳಿಯ ಯೋಧನನ್ನು ಹಿಗ್ಗಾ ಮುಗ್ಗಾ ಥಳಿಸಿದ. ಅವನ ಎಲುಬು ಪುಡಿಪುಡಿಯಾದವು. ಅಂದು ಸಾಯಂಕಾಲ ಸರಕಾರದ ಮಾಧ್ಯಮ ಸಲಹೆಗಾರ ಚೌಧರಿ ಮುಹಮ್ಮದ್ ಹುಸೇನ್ ಸುದ್ದಿಯನ್ನು ಪ್ರಕಟಿಸಕೂಡದೆಂದು ಎಲ್ಲ ಪತ್ರಿಕೆಗಳ ಸಂಪಾದಕರಿಗೆ ದೂರವಾಣಿಯಲ್ಲಿ ತಿಳಿಸಿದರು.

ಆಗ ‘ಜೈ ಹಿಂದ್’ ಪತ್ರಿಕೆಯ ಸಂಪಾದಕರಾಗಿದ್ದ ಜಮುನಾದಾಸರು ಇತರ ಪತ್ರಿಕೆಗಳ ಸಂಪಾದಕರೊಂದಿಗೆ ಸಮಾಲೋಚನೆ ಮಾಡಿದರು. ಸುದ್ದಿಯನ್ನು ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟಿಸಬೇಕೆಂದು ಒಮ್ಮತದಿಂದ ತೀರ್ಮಾನಿಸಲಾಯಿತು. ಸಾಯಂಕಾಲ ಚೌಧರಿಯವರು ಕೆರಳಿ ಕೆಂಡವಾಗಿದ್ದರು. ಎಲ್ಲ ಪತ್ರಿಕೆಗಳ ಮೇಲೆ ಅವರು ಕ್ರಮ ಕೈಕೊಳ್ಳಬಹುದಿತ್ತು. ಆದರೆ ಕಾಶ್ಮೀರದ ಅಂದಿನ ಪ್ರಧಾನ ಮಂತ್ರಿ ಸಿಕಂದರ್ ಹಯಾತ್ರ ಮಧ್ಯ ಪ್ರವೇಶದಿಂದಾಗಿ ಲಾಹೋರ್ ನಗರದಲ್ಲಿ ಬಿಳಿಯ ಯೋಧರ ಪ್ರವೇಶಕ್ಕೆ ನಿಷೇಧ ವಿಧಿಸಲಾಯಿತು.

ಭಾರತ ವಿಭಜನೆ ಮನುಷ್ಯಕುಲ ಕಂಡರಿಯದ ಘೋರ ಹತ್ಯಾಕಾಂಡವೆನಿಸಿತು. ಭಾರತೀಯರೆನಿಸಿಕೊಂಡವರು ರಾತ್ರೋರಾತ್ರಿ ಹಿಂದೂ-ಮುಸಲ್ಮಾನರಾಗಿಬಿಟ್ಟರು. ಶತಶತಮಾನಗಳಿಂದ ಜೊತೆಯಾಗಿ ಬದುಕಿದವರು ತಮ್ಮ ನೆರೆಹೊರೆಯವರ ಆಸ್ತಿಪಾಸ್ತಿಯನ್ನೆಲ್ಲ ಸುಟ್ಟು ಭಸ್ಮ ಮಾಡಿದರು. ಗಲ್ಲಿ-ಬೀದಿಗಳಲ್ಲಿ ಹೆಣದ ರಾಶಿಗಳು. ಸಂದಿಗೊಂದಿಗಳಿಂದ ಹರಿದ ರಕ್ತದ ಹೊಳೆ. ರಕ್ಕಸರು ಮತ್ತೆ ಕಾನೂನಿನ ಹಿಡಿತಕ್ಕೆ ಬಂದರೆಂಬುದೇನೋ ನಿಜ. ಇಂತಹ ಹತ್ಯಾಕಾಂಡಗಳ ಸಂದರ್ಭದಲ್ಲಿ ಆಗುವಂತೆ ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಸಹಜವಾಗಿಯೇ ಘೋರ ಅನ್ಯಾಯ, ಅತ್ಯಾಚಾರಕ್ಕೀಡಾದರು. ಗಡಿಯಾಚೆಯ ಮಹಿಳೆಯರನ್ನು ಅಪಹರಿಸಿ ಈಚೆ ತಂದು ವೇಶ್ಯಾವಾಟಿಕೆಗಳಲ್ಲಿ ಮಾರಲಾಯಿತು. ಗಡಿಯೀಚೆಯ ಮಹಿಳೆಯರನ್ನು ಅಪಹರಿಸಿಕೊಂಡು ಹೋಗಿ ಆಚೆ ವೇಶ್ಯಾವಾಟಿಕೆಗಳಲ್ಲಿ ಮಾರಲಾಯಿತು.

ಈ ಅಪಹೃತ ಮಹಿಳೆಯರನ್ನು ಪತ್ತೆ ಹಚ್ಚಿ ಅವರಿಗೆ ಪುನರ್ವಸತಿ ಕಲ್ಪಿಸುವ ಮಹಾನ್ ಕಾರ್ಯವನ್ನು ಮಾಡಲು ಜಮುನಾದಾಸರು ಮುಂದಾದರು. ಅಷ್ಟೊತ್ತಿಗೆ ಅವರು ಲಾಹೋರ್ನಿಂದ ಜೀವ ಉಳಿಸಿಕೊಂಡು ದಿಲ್ಲಿಗೆ ಧಾವಿಸಿ ಬಂದದ್ದೇ ಒಂದು ಪವಾಡವೆನಿಸಿತ್ತು. ಕಾರಣ ಬರಹಗಾರರಾಗಿ ಅವರ ಲೇಖನಿಗೆ ಸಿಕ್ಕ ದುಷ್ಕರ್ಮಿಗಳ ಜಾಲ ತುಂಬ ಪ್ರಭಾವಶಾಲಿಯಾಗಿತ್ತು. ಎಂದೂ ಯಾರಿಗೂ ಬಗ್ಗದ, ಜಗ್ಗದ ಜಮುನಾದಾಸರು ‘ಪ್ರೇಮಸಭಾ’ ಎನ್ನುವ ಸಮಾನಮನಸ್ಕರ ಪಡೆ ಕಟ್ಟಿದರು. ಸುಮಾರು 2,000ಕ್ಕೂ ಹೆಚ್ಚು ಅಪಹೃತ ಮಹಿಳೆಯರನ್ನು ಪತ್ತೆ ಹಚ್ಚಿ ಅವರಿಗೆ ಪುನರ್ವಸತಿ ಕಲ್ಪಿಸಿದರು.

15ನೇ ವರ್ಷದ ಪೋರನಾಗಿದ್ದ ಜಮುನಾದಾಸರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಹುಟ್ಟೂರು ರಾವಲಪಿಂಡಿಯಲ್ಲಿ ಲಾಲಾ ಲಾಜಪತ್ರಾಯ್ರ ‘ಬಂದೇ ಮಾತರಮ್’ ಪತ್ರಿಕೆಯ ವರದಿಗಾರರಾಗಿದ್ದವರು. ಮುಂದೆ ಎರಡು ವರ್ಷಗಳಲ್ಲೇ ಅವರು ಪತ್ರಿಕೆಯ ಸಹಾಯಕ ಸಂಪಾದಕರಾದವರು. ನಂತರ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದವರು. 93 ವರ್ಷಗಳ ಅರ್ಥಪೂರ್ಣ ಬದುಕು ಸಾಗಿಸಿ ಈ ಲೋಕಕ್ಕೆ ವಿದಾಯ ಹೇಳಿದ ಜಮುನಾದಾಸರು ಹೆಚ್ಚು ಕಡಿಮೆ ಕೊನೆಯುಸಿರಿನವರೆಗೆ ಪತ್ರಕರ್ತರಾಗಿ ಸಕ್ರಿಯರಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ‘‘ಉರ್ದು ಪತ್ರಿಕೋದ್ಯಮಕ್ಕೆ ತಮ್ಮ ಕೊಡುಗೆಯೇನು?’’ ಎಂದು ಕೇಳುವುದು ಸಹಜವೇ. ‘‘ನಾನು ಇನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ನನ್ನಿಂದ ಅದೆಂತಹ ಕೊಡುಗೆ ನಿರೀಕ್ಷಿಸುತ್ತೀರಿ?’’ ಎನ್ನುವ ಅವರ ಉತ್ತರ ಆದರ್ಶಪ್ರಾಯವಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಹಸನ್ ನಯೀಂ ಸುರಕೋಡ

contributor

Similar News