×
Ad

ಹೋಮ್‌ಬೌಂಡ್: ಗೆಳೆಯರಿಬ್ಬರ ಬದುಕು, ಬವಣೆ

Update: 2025-10-12 13:08 IST

‘‘ಅಮ್ಮಾ.. ನಿನ್ನ ಪಾದ ಒಡೆದೋಗಿದೆ. ನೀನ್ಯಾಕೆ ಚಪ್ಪಲಿ ಹಾಕಲ್ಲ’’ ಮಗ ಕೇಳುತ್ತಾನೆ. ‘‘ಅಲ್ಲ ಮಗನೇ, ನನ್ನ ಪಾದವೇನು? ನನ್ನ ತಾಯಿನೂ ಚಪ್ಪಲಿ ಹಾಕುತ್ತಿರಲಿಲ್ಲ’’. ‘‘ಅಲ್ಲಮ್ಮ ನಿನ್ನ ಪಾದದ ಹಿಂಭಾಗ ಒಡೆದೋಗಿರೋದು ಕಾಣುತ್ತಿದೆ. ಅದರ ನೋವಿಗಾದರೂ ಚಪ್ಪಲಿ ಹಾಕೊಳ್ಳು’’ ಮಗ ತಾಯಿಯನ್ನು ಒತ್ತಾಯಿಸುತ್ತಾನೆ. ‘‘ಇಲ್ಲ ಕಣೋ, ನನ್ ತಾಯಿ ಪಾದ ಇದಕ್ಕಿಂತಲೂ ದೊಡ್ಡದಾಗಿ ಒಡೆದು ಹೋಗಿತ್ತು. ನನ್ನ ಪಾದವೇನು ಮಹಾ?’’. ಈ ತಾಯಿ, ತನ್ನ ಮಗನ ಚಪ್ಪಲಿ ಹಾಕುವ ಒತ್ತಾಯವನ್ನು ತನ್ನ ತಾಯಿಯ ಕಥೆ ಹೇಳಿ ನಯವಾಗಿ ನಿರಾಕರಿಸುತ್ತಾಳೆ. ಇದು ತಾಯಿ ಮಗನ ಅನೂಹ್ಯ ಬಂಧವನ್ನು ತೆರೆದಿಡುವ ‘ಹೋಮ್‌ಬೌಂಡ್’ ಅನ್ನುವ ಹಿಂದಿ ಚಿತ್ರದ ದೃಶ್ಯ. ಈ ಚಿತ್ರದ ಕೊನೆ ಭಾಗದಲ್ಲಿ ಈ ತಾಯಿ ಪಾಡು ನೋಡುತ್ತಾ ನಿಮ್ಮ ಕಣ್ಣು ತುಂಬದೇ ಇದ್ದರೆ, ನೀವು ಮನುಷ್ಯರೇ ಅಲ್ಲ. ಈ ಎರಡು ಗಂಟೆಯ ಸಿನೆಮಾ ನೋಡಿದವರ ಕಣ್ಣನ್ನು ಹಲವು ಬಾರಿ ತೇವಗೊಳಿಸುತ್ತದೆ.

ಇದು ಕೇವಲ ತಾಯಿ ಮಗನ ಬಂಧದ ಸುಗಂಧ ಕಟ್ಟಿಕೊಡುವ ಚಿತ್ರವಲ್ಲ. ಸ್ನೇಹ, ಗೆಳೆತನ, ಬಾಂಧವ್ಯ ಅಂದರೆ ಏನು? brother from another mother ಅಂತಾರಲ್ಲ, ಅದು ಬರೀ ಬಾಯಿ ಮಾತಿಗೆ ಹೇಳುವ ಮಾತಲ್ಲ. ನಿಜವಾಗಿಯೂ ಅದನ್ನು ಅನುಭವಿಸಬೇಕು. ಕಣ್ಣಾರೆ ಕಣ್ತುಂಬಿಕೊಳ್ಳಬೇಕೆಂದರೆ ಈ ಸಿನೆಮಾ ನೋಡಲೇಬೇಕು. ಪ್ರತೀ ಫ್ರೇಮ್‌ನಲ್ಲೂ ದೇಶದ ಸಾಮಾನ್ಯ ಮನುಷ್ಯನ ಬದುಕನ್ನು ಕಟ್ಟಿಕೊಡುವ ಈ ಚಿತ್ರದಲ್ಲಿ ಸಾಮಾನ್ಯ ಯುವಕರಿಬ್ಬರ ದೊಡ್ಡ ಕಥೆಯಿದೆ. ಕನಸು ಕಾಣಲು ಬಡತನ ಅಡ್ಡಿ ಅಲ್ಲ. ಆದರೆ, ಪುಟ್ಟ ಪುಟ್ಟ ಕನಸು ಕಾಣುವ ಜೀವ, ಆಸರೆಯ ಕೈಗಳಿಲ್ಲದೆ ಕಣ್ಣುಮುಚ್ಚುತ್ತದೆ. ಜಾತಿಯ ಪಜೀತಿ, ಧರ್ಮದ ದಬ್ಬಾಳಿಕೆ, ದಾರ್ಷ್ಟ್ಯ, ಕಾಪಟ್ಯದಿಂದ ಬಸವಳಿಯುವ ಎರಡು ಕುಟುಂಬದ ಎರಡು ಯುವ ಜೀವಗಳ ಸತ್ಯ ಕಥೆ ಇದು. ಈ ದೇಶದ ಮಣ್ಣಿನಲ್ಲಿ 5 ವರ್ಷಗಳ ಹಿಂದೆ ನಡೆದ ಸುದ್ದಿಯ ಪತ್ರಿಕಾ ವರದಿ ತೆರೆಯ ಮೇಲೆ ಮೂಡಿ ಬಂದಿದೆ. ನೈಜತೆಯೇ ಈ ಚಿತ್ರದ ಜೀವಾಳ.

ಮುಖ್ಯ ಪಾತ್ರಧಾರಿಯ ತಾಯಿಗೆ ಶಾಲೆಯಲ್ಲಿ ಅಡುಗೆ ಕೆಲಸ ಸಿಗುತ್ತದೆ. ಆದರೆ, ಒಂದು ದಿನ ದಿಢೀರ್ ಗಲಾಟೆ. ‘‘ಈಕೆ ಬಡಿಸಿದ ಅಡುಗೆಯನ್ನು ನಮ್ಮ ಮಕ್ಕಳು ತಿನ್ನಲ್ಲ. ಅದು ಹೇಗೆ ಅವಳು ಮಾಡಿದ ಅನ್ನ ನಮ್ಮ ಮಕ್ಕಳು ತಿನ್ನೋದು? ಅವರೇನು ಕೆಲ್ಸ ಮಾಡ್ಕೊಂಡು ಬಂದಿದ್ದಾರೋ ಅದನ್ನೇ ಮಾಡಲಿ’’ ಇದು ವಿದ್ಯಾರ್ಥಿಯ ಹೆತ್ತಾಕೆಯ ಪ್ರಶ್ನೆ. ಈ ಪ್ರಶ್ನೆಗೆ ಮುಖ್ಯೋಪಾಧ್ಯಾಯ ತಿರುಗೇಟು ನೀಡಲು ಯತ್ನಿಸುತ್ತಾನೆ. ಆದರೆ, ಒಬ್ಬಾಕೆಯ ಮಾತಿಗೆ ಉಳಿದ ವಿದ್ಯಾರ್ಥಿಗಳ ಹೆತ್ತವರು ಧ್ವನಿಗೂಡಿಸಿದಾಗ ಈ ವಿಚಾರ ಉತ್ತರವಿಲ್ಲದ ಪ್ರಶ್ನೆಯಾಗುತ್ತದೆ. ಈ ಹೆಣ್ಣು ಹೆಂಗಸು ನೇರವಾಗಿ ಒಂದು ಪ್ರಶ್ನೆ ಕೇಳುತ್ತಾಳೆ. ‘‘ನಿಮ್ಮ ಮಗು ಅಳುವಾಗ ನಾನು ಸಂತೈಸಬಹುದು. ನಿಮ್ಮ ಮಗು ಗಲೀಜು ಮಾಡಿದಾಗ ನಾನು ಶುಚಿಗೊಳಿಸಬಹುದು. ಆದರೆ, ನಾನು ಮಾಡಿದ ಅನ್ನ ಮಾತ್ರ ನಿಮ್ಮ ಮಗು ತಿನ್ನ ಬಾರದೇಕೆ? ಇದ್ಯಾವ ನ್ಯಾಯ?’’ ಈ ತಾಯಿ ಹೃದಯ ಬಾಯಿ ಬಿಟ್ಟು ನೆರೆದವರನ್ನು ಕೇಳುತ್ತದೆ. ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

ಇದು ನೈಜ ಕಥೆ. ನಮ್ಮ ಸುತ್ತಮುತ್ತ ಪ್ರತೀ ಬಾರಿ ವರದಿಯಾಗುವ ಸುದ್ದಿ. ಇದುವೇ ದೊಡ್ಡ ತೆರೆ ಮೇಲೆ, ಅದರಲ್ಲೂ ಬಾಲಿವುಡ್ ಚಿತ್ರದಲ್ಲಿ ಮೂಡಿ ಬಂದಿದೆ. ಯುವಕರಿಬ್ಬರನ್ನು ಪ್ರಧಾನ ಪಾತ್ರಗಳಲ್ಲಿ ತೋರಿಸುವ ಈ ಚಿತ್ರದಲ್ಲಿ ಜೀವ ಇದೆ. ಜೀವನ ಇದೆ. ಜನ ಸಾಮಾನ್ಯನ ಬದುಕಿನ ಬವಣೆ ಹಾಸಹೊಕ್ಕಾಗಿದೆ. ಇಲ್ಲಿ ತೆರೆ ಮೇಲಿನ ದೃಶ್ಯ ನೋಡುತ್ತಾ, ಕಥೆಯನ್ನು ಅನುಭವಿಸುತ್ತಾ, ನೀವು ಥಿಯೇಟರಿನಲ್ಲಿ ಕೂರುವ ಪ್ರತೀ ಕ್ಷಣವೂ ಎದೆಗೆ ಚುಚ್ಚುತ್ತದೆ. ನಮ್ಮ ಸುತ್ತಮುತ್ತಲ ಬದುಕಿನ ಕ್ರೌರ್ಯದ ಕಥೆ ಚಿವುಟುತ್ತದೆ. ಸಮಾಜದಲ್ಲಿ ಅಂತರ್‌ಗಂಗೆಯಂತಾಗಿರುವ ಅಂತರ ಸೃಷ್ಟಿಸುವ ವಿಚಾರಗಳು ಕುಟುಕುತ್ತದೆ. ಹಾಸ್ಯದ ಲೇಪನದೊಂದಿಗೆ ಬದುಕಿನ ಸತ್ಯವನ್ನು ತೆರೆದಿಟ್ಟಿರೋದೇ ಈ ಚಿತ್ರದ ವಿಶೇಷ.

ಜಾತಿ, ಧರ್ಮ, ಭೇದ ಭಾವ, ಪ್ರತಿಯೊಂದನ್ನು ಟಚ್ ಮಾಡುವ ಸಿನೆಮಾ ಎಲ್ಲೂ ಪಾಠ ಮಾಡುವುದಿಲ್ಲ. ಸೆನ್ಸರ್ ಮಂಡಳಿ 11 ಸೀನ್ ಕಟ್ ಮಾಡಿಸಿದರೂ ಸಿನೆಮಾದ ಪ್ರಾಣ ಹಾರಿಹೋಗಿಲ್ಲ. ಪ್ರತೀ ಭಾಷೆ, ಭಾವನೆ, ಹಾಸ್ಯ, ಲಾಸ್ಯ ಪ್ರತಿಯೊಂದು ಕೂಡಾ ಕಾಡುತ್ತದೆ. ಹಿಂದೂ-ಮುಸ್ಲಿಮ್ ಗೆಳೆಯರಿಬ್ಬರ ಬದುಕು ಬವಣೆ ಈ ಚಿತ್ರದಲ್ಲಿದೆ. ಸೆಪ್ಟಂಬರ್ 26ರಂದು ತೆರೆಕಂಡ ಈ ಚಿತ್ರ ಎರಡನೇ ವಾರ ತುಂಬಿ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಈ ಕಾಲದಲ್ಲಿ ಈ ತರದ ಸಿನೆಮಾ ರಿಲೀಸ್ ಮಾಡಲು ಚಿತ್ರ ತಂಡ ಪಟ್ಟ ಪಾಡು ಊಹಿಸಿಕೊಳ್ಳಬಹುದು. 98ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಚಿತ್ರವಾಗಿ ಆಯ್ಕೆ ಮಾಡಲಾಗಿದೆ. ‘ಮಸಾನ್’ ಎಂಬ ಮಾಸ್ಟರ್ ಪೀಸ್ ನಿರ್ದೇಶಿಸಿದ್ದ ನೀರಜ್ ಗೇವಾನ್ ಈ ಸಿನೆಮಾದ ನಿರ್ದೇಶಕ. ಇಶಾನ್ ಕಟ್ಟರ್, ಜಾನ್ವಿ ಕಪೂರ್ ಮತ್ತು ವಿಶಾಲ್ ಜಿತ್ವಾ ನಿಜವಾಗಿಯೂ ಕ್ಯಾಮರಾ ಮುಂದೆ ಬದುಕಿದ್ದಾರೆ. ವಿಶೇಷವಾಗಿ ಹಿಂದಿಯಲ್ಲಿ ಕಂಟೆಂಟ್ ಇರೋ ಸಿನೆಮಾ ಬರ್ತಾ ಇಲ್ಲ, ಬರೀ ಠೊಳ್ಳು ರೊಮಾನ್ಸ್ ಮಾತ್ರ ಅಂತ ಹೇಳುವವರು ಇದನ್ನೊಮ್ಮೆ ನೋಡಲೇಬೇಕು. ಅತಿದೊಡ್ಡ ವಿಶೇಷ ಅಂದರೆ ಈ ಸಿನೆಮಾ ನಿರ್ಮಿಸಿರುವುದು ಕರಣ್ ಜೋಹರ್. ಇದೊಂದು ಪಕ್ಕಾ ‘ಬಾಲಿವುಡ್’ ಚಿತ್ರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕಬೀರ್ ಕಾಂತಿಲ

contributor

Similar News