ಅಭಿವೃದ್ಧಿಯ ಅಮಲು ಮತ್ತು ದುಡಿವವರ ಸಾವುಗಳು

Update: 2023-05-04 06:58 GMT

ದೇಶದ ಬೆಳವಣಿಗೆಯನ್ನು ಹರಿದು ಬಂದ ಸಂಪತ್ತು, ಹೂಡಿಕೆಯಾದ ಬಂಡವಾಳ, ಧನಿಕರು ಅಥವಾ ಮೇಲ್ಮಧ್ಯಮ ವರ್ಗದ ಜನರಿಂದ ಅಳೆಯುವುದು ಎಷ್ಟು ತಪ್ಪು ಎಂಬುದನ್ನು ಕೈಗಾರಿಕಾ ಕ್ರಾಂತಿಯ ದಿನಗಳ ಇಂಗ್ಲೆಂಡ್ ನಮಗೆ ತೋರಿಸುತ್ತದೆ. ದೇಶಕ್ಕೆ ಎಷ್ಟೇ ಹಣ ಹರಿದು ಬಂದರೂ ಬಡವರ ಶೋಷಣೆ ತಡೆಯಿಲ್ಲದೆ ಸಾಗಿರುತ್ತದೆ, ಚಿಮ್ನಿ ಸ್ವೀಪಿಂಗ್‌ನಂತಹ ಅನಿಷ್ಟ ವೃತ್ತಿಗೆ ಮುಗ್ಧ ಬಡ ಬಾಲಕರು ಬಲಿಯಾಗುತ್ತಲೇ ಇರುತ್ತಾರೆ. ಈಗಿನ ಧನಿಕರು ತೊಡುವ ಹೊಳೆಯುವ ವಜ್ರಗಳ ಮೇಲೆ ಆಫ್ರಿಕಾ ಮಕ್ಕಳ ನೆತ್ತರು ಹರಿಯುತ್ತಿಲ್ಲವೆ, ಹಾಗೆ.

ಹದಿನೆಂಟನೇ ಶತಮಾನದಲ್ಲಾಗಲೇ ಇಂಗ್ಲೆಂಡ್ ಸೂರ್ಯ ಮುಳುಗದ ನಾಡೆಂದು ಪ್ರಸಿದ್ಧವಾಗಿತ್ತು. ಬ್ರಿಟಿಷ್ ಸಾಮ್ರಾಜ್ಯ ವಿಶ್ವದೆಲ್ಲೆಡೆ ವ್ಯಾಪಿಸಿತ್ತು. ವಸಾಹತುಗಳಿಂದ ಯಥೇಚ್ಛವಾಗಿ ಹರಿದು ಬರುತ್ತಿದ್ದ ಕಚ್ಚಾ ಸಾಮಗ್ರಿಗಳು, ಅಪಾರ ಖನಿಜ ಸಂಪತ್ತು ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದ್ದವು. ಕೈಗಾರಿಕೆಗಳು ಶುರುವಾದಂತೆ ಜನ ಲಂಡನ್‌ನಂತಹ ಮಹಾನಗರಗಳಿಗೆ ವಲಸೆ ಹೋಗಿದ್ದರಿಂದ, ಮಹಾನಗರಗಳು ಇನ್ನಷ್ಟು ವೇಗವಾಗಿ ವಿಸ್ತಾರಗೊಂಡವು. ನಗರೀಕರಣದಿಂದ ಹಳ್ಳಿಗಳ ಅವಿಭಕ್ತ ಕುಟುಂಬಗಳು ಹರಿದು ಹಂಚಿ ಹೋದರೆ, ಕಾರ್ಖಾನೆಗಳ ತೀರದ ಹಸಿವಿಗೆ ಬಲಿಯಾದದ್ದು ಸಣ್ಣ ಪಟ್ಟಣಗಳು. ಪಟ್ಟಣಗಳು ಕಲ್ಲಿದ್ದಲ ಗಣಿಗಾರಿಕೆಗೆ ನಲುಗಿ ಹೋದವು. (೧೯೪೧ರಲ್ಲಿ ಬಿಡುಗಡೆಯಾದ How green was my Valley ಎಂಬ ಸಿನೆಮಾ, ಗಣಿಗಾರಿಕೆಯ ಕರಾಳ ಚಹರೆಯನ್ನು ನಮ್ಮ ಮುಂದಿಡುತ್ತದೆ.)

ದೇಶಕ್ಕೆ ಇಷ್ಟೆಲ್ಲಾ ಸಂಪತ್ತು ಹರಿದು ಬಂದು, ಕೈಗಾರಿಕಾ ಕ್ರಾಂತಿಯಾಗಿ, ನಗರೀಕರಣ ವೇಗಗೊಂಡರೂ, ಇಂಗ್ಲೆಂಡಿನ ಬಡವರ ಬಾಳೇನೂ ಬದಲಾಗಲಿಲ್ಲ. ಬ್ರಿಟಿಷರು ತಮ್ಮ ವಸಾಹತುಗಳಲ್ಲಿ ಸ್ಥಳೀಯರನ್ನು ಯಾವ ರೀತಿ ಶೋಷಣೆಗೆ ಒಳಪಡಿಸುತ್ತಿದ್ದರೋ ಅದೇ ರೀತಿ ಇಂಗ್ಲೆಂಡಿನ ಉಳ್ಳವರು, ಧನಿಕ ಉದ್ಯಮಿಗಳು ಬಡವರ ರಕ್ತ ಹೀರುತ್ತಿದ್ದರು. ಆಗಿನ ಕಾಲಕ್ಕೆ ಇಂಗ್ಲೆಂಡಿನ ಭಯಾನಕ ಚಳಿ ಎದುರಿಸಲು ಉಳ್ಳವರು ತಮ್ಮ ಮನೆಗಳಲ್ಲಿ ಅಗ್ಗಿಷ್ಟಿಕೆ ಉರಿಸುವುದು ಸರ್ವೇ ಸಾಮಾನ್ಯವಾಗಿತ್ತು. ಕಟ್ಟಿಗೆ, ಇದ್ದಿಲು ಬಳಕೆಯಲ್ಲಿತ್ತು. ಪ್ರತೀ ಬಂಗಲೆಗಳಲ್ಲೂ ಸದಾಕಾಲ ಆಗಿಷ್ಟಿಕೆ ಉರಿಯಲು ಅನುಕೂಲವಾಗುವಂತೆ ಚಿಮ್ನಿ ಅಥವಾ ಕೊಳವೆಗಳಿರುತ್ತಿದ್ದವು. ಇಂತಹ ಕಿರಿದಾದ ಕೊಳವೆಗಳಲ್ಲಿ ಆಗಾಗ ಬೂದಿ, ಮಸಿ ಕಟ್ಟಿಕೊಂಡಾಗ ಅದನ್ನು ತೆರವುಗೊಳಿಸಲು ಬಡವರ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿತ್ತು. ವಯಸ್ಕರು ತೂರಲಾಗದ ಕೊಳವೆಗಳಲ್ಲಿ ಸರಾಗವಾಗಿ ತೂರಿಬಿಡುತ್ತಿದ್ದರು ಈ ಪುಟ್ಟ ಪೋರರು. ಕೆಲ ಪುಟಾಣಿಗಳು ಕೊಳವೆಗಳಲ್ಲೇ ನಿದ್ದೆಗೆ ಜಾರಿದರೆ ಇನ್ನು ಕೆಲವರು ಅಲ್ಲೇ ಕೊನೆಯುಸಿರೆಳೆಯುತ್ತಿದ್ದರು. ಅನಾಥರಾದ ಅಥವಾ ನಿರ್ಗತಿಕ ಪೋಷಕರಿಗೆ ಹುಟ್ಟಿ ಮಾರಾಟವಾದ ಈ ಜೀವಗಳಿಗೆ ಬೆಲೆಯೂ ಇರಲಿಲ್ಲ. ಶಿಶು ಶೋಷಣೆ ಸಹಜವಾಗಿದ್ದ ಮತ್ತು ಕನಿಷ್ಠ ಕೂಲಿಗೆ ಕೆಲಸ ಮಾಡಲು ಸಿದ್ಧರಿದ್ದ ಆ ದಿನಗಳಲ್ಲಿ ಇಂತಹ ಕಠಿಣ ಮತ್ತು ಅಪಾಯಕಾರಿ ‘ಚಿಮ್ನಿ ಸ್ವೀಪರ್’ ವೃತ್ತಿಗೆ ನಾಗರಿಕ ಸಮಾಜ ಸಮ್ಮತಿಯಿಟ್ಟಿತ್ತು.

ಸಾಹುಕಾರರ ಮನೆಯ ಕೊಳವೆಗಳಲ್ಲಿ, ಕಾರ್ಖಾನೆಯ ಕೊಳವೆಗಳಲ್ಲಿ ದಿನನಿತ್ಯ ಮಕ್ಕಳು ಅಸುನೀಗಿದರೂ, ಮಕ್ಕಳ ಸರಬರಾಜಿಗೆ ಹೊಡೆತವೇನೂ ಬಿದ್ದಿರಲಿಲ್ಲ. ಮಾಸ್ಟರ್ ಸ್ವೀಪರ್ ಬಳಿ ಯಾವಾಗಲೂ ಅಪಾಯಕಾರಿ ಚಿಮ್ನಿ ಸ್ವೀಪಿಂಗ್ ವೃತ್ತಿಗೆ ಧುಮುಕಲು ತುದಿಗಾಲಲ್ಲಿ ನಿಂತ ಮಕ್ಕಳಿರುತ್ತಿದ್ದರು. ಇಂತಹ ಕ್ರೌರ್ಯಕ್ಕೆ ನಾಗರಿಕ ಸಮಾಜ ಸಮ್ಮತಿ ನೀಡಿದರೆ, ಚರ್ಚ್ ಎಲ್ಲವನ್ನೂ ನೋಡಿಯೂ ನೋಡದಂತಿತ್ತು!

ಪ್ರಸಿದ್ಧ ಕವಿ ವಿಲಿಯಂ ಬ್ಲೇಕ್ ಸಾಂಗ್ಸ್ ಆಫ್ ಇನ್ನೋಸೆನ್ಸ್ (ಮುಗ್ಧತೆಯ ಹಾಡುಗಳು) ಮತ್ತು ಸಾಂಗ್ಸ್ ಆಫ್ ಎಕ್ಸ್‌ಪೀರಿಯೆನ್ಸ್ (ಅನುಭವದ ಹಾಡುಗಳು) ಕವನ ಸಂಕಲನಗಳಲ್ಲಿ ‘ಚಿಮ್ನಿ ಸ್ವೀಪರ್ಸ್’ ಎಂಬ ಒಂದೇ ಶೀರ್ಷಿಕೆಯ ಎರಡು ಕವಿತೆಗಳನ್ನು ಬರೆದ.

‘ಚಿಮ್ನಿ ಸ್ವೀಪರ್ಸ್’ ಕವಿತೆಯಲ್ಲಿ, ತಾಯಿ ಕಳೆದುಕೊಂಡ ಬಾಲಕ ಟಾಮ್‌ನನ್ನು ಆತನ ತಂದೆ ಮಾರಿಬಿಡುತ್ತಾನೆ. ಟಾಮ್‌ನನ್ನು ಖರೀದಿಸಿದವ, ಮಾತನಾಡಲು ಬಾರದ, ಅಳಲು ಬಾರದ ಪುಟಾಣಿ ಟಾಮ್‌ನನ್ನು ಬೂದಿ, ಮಸಿ ತೆಗೆಯುವ ಅಮಾನವೀಯ ಕೆಲಸಕ್ಕೆ ದೂಡುತ್ತಾನೆ. Songs of Innocenceನ ಟಾಮ್ ಮುಗ್ಧ ಬಾಲಕನಾದ್ದರಿಂದ ಆತನಿಗೊಂದು ಕನಸು ಬೀಳುತ್ತದೆ. ಕನಸಿನಲ್ಲಿ ದೇವತೆಯೊಬ್ಬಳು ಧರೆಗೆ ಬಂದು ತನ್ನ ಹೊಳೆಯುವ ಕೀಲಿಯಿಂದ ಕಪ್ಪುಶವ ಪೆಟ್ಟಿಗೆಯ ಬೀಗ ತೆರೆಯುತ್ತಾಳೆ. ಮಸಿ, ಬೂದಿಯ ಶವಪೆಟ್ಟಿಗೆಯಲ್ಲಿ ಮುಚ್ಚಿಹೋಗಿದ್ದ ಟಾಮ್‌ನ ಸಾವಿರಾರು ಸ್ನೇಹಿತರು ಆ ಶವಪೆಟ್ಟಿಗೆಯಿಂದ ಹೊರಬರುತ್ತಾರೆ. ಹಸಿರ ಬಯಲಲ್ಲಿ ಆಡುತ್ತಾರೆ, ನಗುತ್ತಾರೆ, ಸಂತಸದಿ ಜಿಗಿಯುತ್ತಾರೆ, ನದಿಯಲ್ಲಿ ಈಜುತ್ತಾರೆ ಮತ್ತು ರವಿಯ ಕಿರಣಗಳಲ್ಲಿ ಹೊಳೆಯುತ್ತಾರೆ. ಈ ನಗ್ನ ಬಿಳಿಯ ಮಕ್ಕಳು ಮೋಡದ ಬೆನ್ನೇರಿ ಸಾಗುತ್ತಾರೆ, ತಂಗಾಳಿಯಲ್ಲಿ ಆಡುತ್ತಾರೆ. ಹೀಗೆ ಆಡುವಾಗ ದೇವತೆ ಹೇಳುತ್ತಾಳೆ- ಟಾಮ್ ನೀನು ಒಳ್ಳೆಯ ಹುಡುಗ, ನೀನು ಹೀಗೆ ಒಳ್ಳೆಯವನಾಗಿಯೇ ಉಳಿದರೆ, ನಿನ್ನ ತಂದೆಯಾದ ಆ ದೇವನೇ ನಿನಗೆ ಎಲ್ಲವನ್ನೂ ಪೂರೈಸುತ್ತಾನೆ. ಈ ಕನಸು ಮುರಿಯುತ್ತದೆ. ಮುಂಜಾನೆ ಎದ್ದು ಟಾಮ್ ತನ್ನ ಬ್ಯಾಗ್ ಬೆನ್ನಿಗೇರಿಸಿಕೊಂಡು ಕೆಲಸಕ್ಕೆ ಹೋಗುತ್ತಾನೆ. ಕೊರೆಯುವ ಚಳಿಯ ಬೈಗಾಗಿದ್ದರೂ ಸುಮಧುರ ಕನಸುಗಳಿಂದ ಬೆಚ್ಚಗಾಗಿದ್ದ ಟಾಮ್ ಯಾವುದೇ ಆತಂಕವಿಲ್ಲದೆ ತನ್ನ ಕೆಲಸಕ್ಕೆ ಸರಸರನೆ ನಡೆದುಬಿಡುತ್ತಾನೆ.

‘ಚಿಮ್ನಿ ಸ್ವೀಪರ್’ ಎಂಬ ಶೀರ್ಷಿಕೆಯೇ ಇರುವ ಮತ್ತೊಂದು ಪದ್ಯ Songs of Experience ಎಂಬ ಸಂಕಲನದಲ್ಲಿದೆ. ಈ ಪದ್ಯದಲ್ಲಿ ಟಾಮ್ ಕನಸುಗಳೆಲ್ಲಾ ಭಗ್ನಗೊಂಡಿವೆ. ಧರ್ಮ, ಉದ್ಯಮಿ ಮತ್ತು ರಾಜಕಾರಣಿಗಳ ಸೇರಿಕೆಗಳು ಆತನಿಗೆ ಅರ್ಥವಾಗಿದೆ. ಸಂಘಟಿತ ಧರ್ಮ ವ್ಯವಸ್ಥಿತವಾಗಿ ತಪ್ಪು ನಂಬಿಕೆಗಳನ್ನು ಜನರ ಮನದಲ್ಲಿ ಹೇಗೆ ಬಿತ್ತುತ್ತದೆ, ಸ್ವರ್ಗ ನರಕಗಳ ಸೃಷ್ಟಿಸಿ, ಅಪ್ಪಟ ಸುಳ್ಳು ಕನಸುಗಳನ್ನು ಹೇಗೆ ಬಿಕರಿ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಣ್ಣ ವಯಸ್ಸಿನ ಬಡ ಮಕ್ಕಳನ್ನು ಮಸಿ, ಬೂದಿ ಕೊಳವೆಗಳಲ್ಲಿ ದೂಡಿ ಬಿಸಿ ಕಾಯಿಸಿಕೊಳ್ಳುವ ಶ್ರೀಮಂತರಿಗೆ, ಮಕ್ಕಳನ್ನು ಈ ಅಮಾನವೀಯ ವೃತ್ತಿಗೆ ಜಾನುವಾರುಗಳಂತೆ ಮಾರಿಬಿಡುತ್ತಿದ್ದ ಪೋಷಕರನ್ನು ಪಾಪಪ್ರಜ್ಞೆಯಿಂದ ಧರ್ಮ ಹೇಗೆ ಮುಕ್ತಗೊಳಿಸುತ್ತಿತ್ತು ಎಂಬುದರ ಕುರಿತು ಟಾಮ್ ಮಾತನಾಡುತ್ತಾನೆ.

ವಿಲಿಯಂ ಬ್ಲೇಕ್ ದೇವರು, ಧರ್ಮ, ಶಿಕ್ಷಕರು, ರಾಜಕಾರಣಿಗಳು, ಪೋಷಕರ ಬಗ್ಗೆ ಹೇಳಿದ ಮಾತುಗಳನ್ನು ಪ್ರಸ್ತಾಪಿಸುವುದು ಸೂಕ್ತ. ‘‘ಧರ್ಮ ವ್ಯವಸ್ಥೆ ಪರಿಕಲ್ಪನೆಯ ದೇವರು ಸರ್ವಶಕ್ತನೇನೋ ಹೌದು, ಆದರೆ ಆತ ಸರ್ವಾಧಿಕಾರಿಯೂ ನಿಷ್ಕರುಣಿಯೂ ತನಗಿಷ್ಟ ಬಂದಂತೆ ನಡೆದುಕೊಳ್ಳುವ ಅತಾರ್ಕಿಕನೂ ಹೌದು; ತನ್ನದೇ ಮಕ್ಕಳಾದ ಮಾನವರಿಗೆ ಸಹಜ ಸುಖಸಂತೋಷಗಳನ್ನು ಕೊಡದೆ ಅಸೂಯಾಪರನಾಗಿ ಅವರ ಮೇಲೆ ಅನೇಕಾನೇಕ ವಿಧಿ-ನಿಷೇಧಗಳನ್ನು ಹೇರುವ, ಅವರು ತುಸು ತಪ್ಪಿದಲ್ಲಿ ಅವರನ್ನು ಘೋರ ಶಿಕ್ಷೆಗೆ ಒಳಪಡಿಸುವ ಕಠೋರನೂ ಹೌದು. ಹಾಗೆಯೇ, ಅವನ ಶೈಲಿಯಲ್ಲಿಯೇ ಜನಸಾಮಾನ್ಯರ ಮೇಲೆ ಅಧಿಕಾರವನ್ನು ಚಲಾಯಿಸುವ ಮಠಾಧೀಶರು, ಧರ್ಮಗುರುಗಳು, ಪುರೋಹಿತರು, ರಾಜಮಹಾರಾಜರು, ಶಿಕ್ಷಕರು ಹಾಗೂ ತಂದೆಯರು ಇಂತಹ ದೇವರ ಭಿನ್ನ ಭಿನ್ನ ಪ್ರಮಾಣ ಪುಟ್ಟ ಪ್ರತಿರೂಪಗಳಷ್ಟೇ.’’

ತಣ್ಣನೆಯ ಕ್ರೌರ್ಯ, ಅಮಾನವೀಯ ಪದ್ಧತಿ, ಆರ್ಥಿಕ ಅಸಮಾನತೆ, ಧಾರ್ಮಿಕ ಸಂಸ್ಥೆಗಳ ನೈತಿಕ ದಿವಾಳಿತನವನ್ನು ಉಗ್ರವಾಗಿ ವಿರೋಧಿಸಿದ್ದ ವಿಲಿಯಂ ಬ್ಲೇಕ್. ಚಿಮ್ನಿ ಸ್ವೀಪರ್ ಕುರಿತಾಗಿ ವಿಲಿಯಂ ಬ್ಲೇಕ್ ತೋರಿದ ಪ್ರತಿರೋಧ ಮೊದಲನೆಯದೇನೂ ಆಗಿರಲಿಲ್ಲ. ೧೭೫೫ರಲ್ಲಿಯೇ ಸೈಂಟ್ ಬರ್ತಾಲೋಮಿಯೋ ಆಸ್ಪತ್ರೆಯ ಸರ್ಜನ್ ಡಾ. ಪರ್ಸಿವಲ್ ಪಾಟ್ ತೀರಾ ವಿಚಿತ್ರವಾದ ಬೆಳವಣಿಗೆಯೊಂದನ್ನು ಗಮನಿಸುತ್ತಿದ್ದ. ಅವನ ಲಂಡನ್ ಕ್ಲಿನಿಕ್‌ಗೆ ಬರುತ್ತಿದ್ದ ರೋಗಿಗಳಲ್ಲಿ ಗಣನೀಯವಾಗಿ ವೃಷಣ ಕ್ಯಾನ್ಸರ್ ಕಾಣಿಸಿಕೊಳ್ಳಲು ಶುರುವಾಗಿತ್ತು. ಮೊದಮೊದಲು ಪಾಟ್ ಶಸ್ತ್ರ ಚಿಕಿತ್ಸೆ ಮೂಲಕ ಗಡ್ಡೆಗಳನ್ನು ಕತ್ತರಿಸಿದ. ಆದರೆ ಹೆಚ್ಚು ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವಾಗ ಆತನಿಗೆ ಮತ್ತೊಂದು ಸತ್ಯ ಸ್ಪಷ್ಟವಾಗತೊಡಗಿತ್ತು. ವೃಷಣ ಕ್ಯಾನ್ಸರ್‌ನಿಂದ ಬಳಲುತ್ತಿದ್ದವರೆಲ್ಲಾ ಚಿಮ್ನಿ ಸ್ವೀಪರ್‌ಗಳೇ ಆಗಿದ್ದರು!

ಅಂದಿನ ಇಂಗ್ಲೆಂಡ್ ಸಮಾಜ ಚಿಮ್ನಿ ಸ್ವೀಪರ್‌ಗಳನ್ನು ತೀರಾ ಅಸಡ್ಡೆಯಿಂದ ಕಾಣುತ್ತಿತ್ತು. ಬಾಲ್ಯದಿಂದಲೇ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಚಿಮ್ನಿ ಸ್ವೀಪರ್‌ಗಳನ್ನು ಸಮಾಜವೇ ಉಪಯೋಗಿಸಿ ಬಿಸಾಡುವಾಗ, ಪ್ರಖ್ಯಾತ ವೈದ್ಯನೊಬ್ಬ ಇವರ ಶೋಚನೀಯ ಸ್ಥಿತಿ ಕಂಡು ಮರುಗಿದ್ದ. ಕಂಡ ಕಂಡ ವೇಶ್ಯೆಯರ ಸಂಪರ್ಕದಿಂದ ಹುಟ್ಟಿದ ರೋಗವಿದು, ಸಿಫಿಲಿಸ್ ಅಥವಾ ಯಾವುದೋ ಲೈಂಗಿಕ ರೋಗವಿದು, ಹಲವು ರೋಗಗಳ ಮೋರಿಯೇ ಆಗಿರುವ ಇವರು ಸತ್ತರೆ ಸಾಯಲಿ ಬಿಡಿ ಎಂಬ ಉಡಾಫೆ ಮಾತುಗಳನ್ನು ಧನಿಕರು ಆಡುತ್ತಿದ್ದರು. ಸಿಫಿಲಿಸ್ ರೋಗದ ಚಿಕಿತ್ಸೆಗೆ ಪಾದರಸ ಕೊಡುವ ಪದ್ಧತಿ ಆಗ ರೂಢಿಯಲ್ಲಿತ್ತು. ಕೊಳವೆಯಲ್ಲಿ ಸಿಲುಕಿ ಸಾಯದ ಚಿಮ್ನಿ ಸ್ವೀಪರ್‌ಗಳು ಬೆಳೆದು ವೃಷಣ ಕ್ಯಾನ್ಸರ್‌ಗೆ ತುತ್ತಾಗಿ ನರಳಿ ಪ್ರಾಣಬಿಡುತ್ತಿದ್ದರು.

ವೃಷಣ ಕ್ಯಾನ್ಸರ್, ಸಿಫಿಲಿಸ್‌ನಂಥದ್ದೇ ಲೈಂಗಿಕವಾಗಿ ಹರಡುವ ರೋಗವೆಂದು ಎಲ್ಲೆಡೆ ಹರಿದಾಡುತ್ತಿದ್ದ ಕತೆಗಳನ್ನು ನಂಬುವ ಜಾಯಮಾನದವ ಪರ್ಸಿವಲ್ ಪಾಟ್ ಆಗಿರಲಿಲ್ಲ. ತನ್ನ ಕ್ಲಿನಿಕ್ ತೊರೆದು ವೃಷಣ ಕ್ಯಾನ್ಸರ್ ಜಾಡು ಹುಡುಕುತ್ತಾ ಬರಿಯ ಶಸ್ತ್ರಚಿಕಿತ್ಸಕನಿಂದ ಸಾಂಕ್ರಾಮಿಕ ರೋಗಶಾಸ್ತ್ರಜ್ಞನಾದ ಪಾಟ್! ಅದಕ್ಕೆ ಪ್ರೇರಣೆಯಾದದ್ದು ದೂರ ದೇಶದ ಮತ್ತೊಬ್ಬ ವೈದ್ಯ ರಮಜೀನಿ.

ರಮಜೀನಿ ಸಾಮಾನ್ಯವಾಗಿ ಯಾವ ವೈದ್ಯರೂ ಕೇಳದ ಪ್ರಶ್ನೆಗಳನ್ನು ತನ್ನ ರೋಗಿಗಳಿಗೆ ಕೇಳುತ್ತಿದ್ದ. ‘‘ಏನ್ ಕೆಲಸ ಮಾಡ್ತಿರಾ ನೀವು?’’  ಅಂತಲೇ ಸದಾ ವಿಚಾರಿಸಿ ರೋಗಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದ ಅಸಾಮಾನ್ಯ ವೈದ್ಯ ಅವ. ಅವನ ಅನುಭವದಿಂದ ಹುಟ್ಟಿದ ವಿಶಿಷ್ಟ ಗ್ರಂಥ De Morbis Artificum Diatribe ಪಾಟ್ ನಂತಹ ನೂರಾರು ವೈದ್ಯರಿಗೆ ಸ್ಫೂರ್ತಿಯಾಗಿತ್ತು. ರಮಜೀನಿ ಒಂದಾದ ಮೇಲೆ ಒಂದರಂತೆ ಸುಮಾರು ಐವತ್ತು ರೋಗಗಳ ಪಟ್ಟಿ ಮಾಡಿದ. ಕೆಲಸಗಾರರು ಮಾಡುವ ಕೆಲಸ ಮತ್ತು ಅವರಿಗೆ ಬರಬಹುದಾದ ರೋಗಗಳಿಗಿರುವ ನೇರ ಸಂಬಂಧ ಸಾಬೀತುಪಡಿಸಿದ. ತಮ್ಮ ಹಸಿವು ನುಂಗಿ ಬದುಕುವ, ಸೂರ್ಯನ ಕಿರಣಗಳಿಲ್ಲದೆ, ವಿಶ್ರಾಂತಿಯಿಲ್ಲದೆ ಮುಚ್ಚಿದ ಬಾಗಿಲುಗಳ ಹಿಂದಿರುವ ಗಾಳಿಯಾಡದ ಕೊಳಕು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಚಿಕಿತ್ಸೆ ನೀಡಿಯೂ ಪ್ರಯೋಜನವಿಲ್ಲವೆಂದು ಆಗಲೇ ನುಡಿದಿದ್ದ.

ಜನರು ಜೀವನಕ್ಕಾಗಿ ಉಳ್ಳವರ ಕಾರ್ಖಾನೆಗಳಲ್ಲಿ ದುಡಿಯುತ್ತಾರೆ. ಆದರೆ ಅತಿಯಾದ ದುಡಿಮೆಯಿಂದಲೇ ಸಾಯುತ್ತಾರೆ. ಬಡವರ ಪಾಡೇ ಇದು. ಉಳ್ಳವರು ಮಾತ್ರ ಐಷಾರಾಮಿ ಜೀವನ ನಡೆಸುತ್ತಲೇ ಇರುತ್ತಾರೆ ಎಂದು ನುಡಿದಿದ್ದ. ಬೆರ್ನಾರ್ಡಿನೊ ರಮಜೀನಿ ೧೭೧೪ರಲ್ಲಿ ಸತ್ತರೂ ಆತನಿಂದ ಪ್ರೇರಿತನಾದ ಪರ್ಸಿವಲ್ ಪಾಟ್ ಚಿಮ್ನಿ ಸ್ವೀಪರ್‌ಗಳಲ್ಲಿ ಅತಿಯಾಗಿ ಕಾಣಿಸಿಕೊಳ್ಳುತ್ತಿದ್ದ ವೃಷಣ ಕ್ಯಾನ್ಸರಿಗೆ ಮೂಲಕಾರಣ ಅಪಾಯಕಾರಿ carcinogen ಆಗಿದ್ದ ಮಸಿಯೇ ಆಗಿತ್ತು ಎಂದು ಸಾಬೀತುಪಡಿಸಿದ.

ಕಣ್ಮುಂದೆ ಇದ್ದ ಕಠೋರ ಸತ್ಯ ಅರಗಿಸಿಕೊಳ್ಳುವುದು ಕಾರ್ಖಾನೆ ಮಾಲಕರಿಗೆ, ಧನಿಕರಿಗೆ ಸುಲಭವಾಗಿರಲಿಲ್ಲ. ಬಲು ಅಗ್ಗವಾಗಿ ಸಿಗುತ್ತಿದ್ದ ಅನಾಥ ಬಾಲಕಾರ್ಮಿಕರು ಅವರ ಕೈತಪ್ಪುವುದರಲ್ಲಿದ್ದರು. ಆದರೆ ಪಾಟ್ ಸೋಲೊಪ್ಪುವ ಅಸಾಮಿಯಾಗಿರಲಿಲ್ಲ. ನೂರಾರು ರೋಗಿಗಳನ್ನು ಪರಿಶೀಲನೆ ಮಾಡಿದ, ಕ್ಷೇತ್ರ ಅಧ್ಯಯನ ಮಾಡಿದ. ಅನುಮಾನಗಳೇ ಉಳಿಯದಂತೆ ಸದಾ ಮಸಿ, ಬೂದಿಗಳಲ್ಲೇ ಉರುಳಾಡಬೇಕಾಗಿ ಬರುವ ಚಿಮ್ನಿ ಸ್ವೀಪರ್ ವೃತ್ತಿಗೂ ಮತ್ತು ವೃಷಣ ಕ್ಯಾನ್ಸರಿಗೂ ನೇರ ಸಂಬಂಧವಿದೆ ಎಂದು ಸಾರಿದ್ದ. ಪಾಟ್ ಅನ್ವೇಷಣೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿದ ಇಂಗ್ಲೆಂಡ್ ಭಾರೀ ಮುಖಭಂಗ ಅನುಭವಿಸಬೇಕಾಯಿತು. ೧೮೭೫ರ ಹೊತ್ತಿಗೆ ಚಿಮ್ನಿ ಸ್ವೀಪಿಂಗ್ ಮೇಲೆ ನಿಷೇಧ ಹೇರಲಾಯಿತು ಮತ್ತು ಬಾಲಕಾರ್ಮಿಕ ಪದ್ಧತಿ ಕ್ರಮೇಣ ಮಾಯವಾಯಿತು. ಈ ಎಲ್ಲಾ ಬದಲಾವಣೆಗೆ ಶ್ರಮಿಸಿದ ಪರ್ಸಿವಲ್ ಪಾಟ್ ೧೭೮೮ರಲ್ಲೇ ನಿಮೋನಿಯಾ ಕಾಯಿಲೆಗೆ ಬಲಿಯಾಗಿದ್ದ.

ದೇಶದ ಬೆಳವಣಿಗೆಯನ್ನು ಹರಿದು ಬಂದ ಸಂಪತ್ತು, ಹೂಡಿಕೆಯಾದ ಬಂಡವಾಳ, ಧನಿಕರು ಅಥವಾ ಮೇಲ್ಮಧ್ಯಮ ವರ್ಗದ ಜನರಿಂದ ಅಳೆಯುವುದು ಎಷ್ಟು ತಪ್ಪು ಎಂಬುದನ್ನು ಕೈಗಾರಿಕಾ ಕ್ರಾಂತಿಯ ದಿನಗಳ ಇಂಗ್ಲೆಂಡ್ ನಮಗೆ ತೋರಿಸುತ್ತದೆ. ದೇಶಕ್ಕೆ ಎಷ್ಟೇ ಹಣ ಹರಿದು ಬಂದರೂ ಬಡವರ ಶೋಷಣೆ ತಡೆಯಿಲ್ಲದೆ ಸಾಗಿರುತ್ತದೆ, ಚಿಮ್ನಿ ಸ್ವೀಪಿಂಗ್‌ನಂತಹ ಅನಿಷ್ಟ ವೃತ್ತಿಗೆ ಮುಗ್ಧ ಬಡ ಬಾಲಕರು ಬಲಿಯಾಗುತ್ತಲೇ ಇರುತ್ತಾರೆ. ಈಗಿನ ಧನಿಕರು ತೊಡುವ ಹೊಳೆಯುವ ವಜ್ರಗಳ ಮೇಲೆ ಆಫ್ರಿಕಾ ಮಕ್ಕಳ ನೆತ್ತರು ಹರಿಯುತ್ತಿಲ್ಲವೆ, ಹಾಗೆ.

ಜಗತ್ತಿಗೆ ಬೇಕಾಗಿರುವುದು ಈ ಮಾದರಿಯ ಅಭಿವೃದ್ಧಿಯಲ್ಲ. ವಿಲಿಯಂ ಬ್ಲೇಕ್ ಕಾಲದಿಂದಲೂ ಹಾಗೇ ಉಳಿದಿರುವ ಧಾರ್ಮಿಕ ಸಂಸ್ಥೆಗಳಲ್ಲ. ಹೊಗೆ ಉಗುಳುವ ಕಾರ್ಖಾನೆಗಳಲ್ಲ. ತೀರದ ಧನದಾಹದ ಉದ್ಯಮಿಗಳಲ್ಲ. ಜಗತ್ತಿಗೆ ತುರ್ತಾಗಿ ಅವಶ್ಯಕವಾಗಿರುವುದು ಸಮಾನತೆ, ಸಹಾನುಭೂತಿ, ಭ್ರಾತೃತ್ವ ಮತ್ತು ಪರರ ನೋವಿಗೆ ಮಿಡಿಯುವ ಬ್ಲೇಕ್, ರಮಜೀನಿ ಮತ್ತು ಪಾಟ್‌ನಂತಹ ಹೃದಯಗಳು.

Similar News