ಹಜ್ ಯಾತ್ರೆ: ಮಂಗಳೂರು ಎಂಬಾರ್ಕೇಷನ್ ಪಾಯಿಂಟ್ ರದ್ದು?

ಭಾರತೀಯ ಹಜ್ ಸಮಿತಿಯ ಕ್ರಮಕ್ಕೆ ವ್ಯಾಪಕ ಆಕ್ರೋಶ

Update: 2023-05-04 08:53 GMT

ಬೆಂಗಳೂರು, ಮೇ 4: ಭಾರತೀಯ ಹಜ್ ಸಮಿತಿಯು ಮಂಗಳೂರಿನ ಎಂಬಾರ್ಕೇಷನ್ ಪಾಯಿಂಟ್ (Embarkation point) ರದ್ದು ಮಾಡುವ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗಾಗಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಲು ಬಯಸಿದ್ದ ಯಾತ್ರಾರ್ಥಿಗಳಿಗೆ ನಿರಾಸೆಯುಂಟು ಮಾಡಿದೆ.

ಕೋವಿಡ್ ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳಲು ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೂ ಯಾತ್ರಾರ್ಥಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಎಂಬಾರ್ಕೇಷನ್ ಪಾಯಿಂಟ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.

ಇದೀಗ ಭಾರತೀಯ ಹಜ್ ಸಮಿತಿಯು ದೇಶದ ಹಲವಾರು ರಾಜ್ಯಗಳಲ್ಲಿನ ಎಂಬಾರ್ಕೇಷನ್ ಪಾಯಿಂಟ್ ಗಳ ಸಂಖ್ಯೆಯನ್ನು ಕಡಿತ ಮಾಡಿದೆ. ಈ ಪೈಕಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಎಂಬಾರ್ಕೇಷನ್ ಪಾಯಿಂಟ್ ಸಹ ಸೇರಿದೆ ಎನ್ನಲಾಗಿದೆ. ಭಾರತೀಯ ಹಜ್ ಸಮಿತಿಯ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದ ಹಜ್ ಯಾತ್ರಾರ್ಥಿಗಳು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್ ಮೂಲಕ ಹಜ್ ಯಾತ್ರೆಗೆ ತೆರಳುತ್ತಿದ್ದರು. ಇದೀಗ ಮಂಗಳೂರು ಎಂಬಾರ್ಕೇಷನ್ ಪಾಯಿಂಟ್ ರದ್ದು ಮಾಡುವುದರಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಸುಮಾರು 1,500ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಭಾರತೀಯ ಹಜ್ ಸಮಿತಿಯು ಇದೀಗ ಈ ಐದು ಜಿಲ್ಲೆಗಳ ಯಾತ್ರಾರ್ಥಿಗಳಿಗೆ ಕೇರಳದ ಕಣ್ಣೂರು, ಕೊಚ್ಚಿ, ಬೆಂಗಳೂರು ಹಾಗೂ ಚೆನ್ನೈ ಈ ಎಂಬಾರ್ಕೇಷನ್ ಪಾಯಿಂಟ್ ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಭಾರತೀಯ ಹಜ್ ಸಮಿತಿಯು ಅಧಿಕೃತವಾಗಿ ಈ ಸಂಬಂಧ ರಾಜ್ಯ ಹಜ್ ಸಮಿತಿಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಅವರು ಸಹ ಗೊಂದಲಕ್ಕೆ ಒಳಗಾಗಿದ್ದಾರೆ. ಯಾತ್ರಾರ್ಥಿಗಳಿಗೆ ಸಮಜಾಯಿಷಿ ನೀಡಲು ಪರದಾಡುವಂತಾಗಿದೆ.

ಇದಲ್ಲದೆ, ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ಯಾವ ಸಂಸ್ಥೆಯ ವಿಮಾನಗಳ ಸೇವೆ ಪಡೆಯಲಾಗುತ್ತದೆ ಹಾಗೂ ವಿಮಾನಗಳ ವೇಳಾಪಟ್ಟಿ ಹೇಗಿರಲಿದೆ ಎಂಬುದು ಇನ್ನೂ ಅಧಿಕೃತವಾಗಿಲ್ಲ ಎಂದು ತಿಳಿದು ಬಂದಿದೆ.

ಬಲ್ಲ ಮೂಲಗಳ ಪ್ರಕಾರ ಭಾರತೀಯ ಹಜ್ ಸಮಿತಿಯು ಈ ಬಾರಿ ಹಜ್ ಯಾತ್ರೆಗೆ ವಿಸ್ತಾರ ಏರ್ ಲೈನ್ಸ್ (Vistara Airlines) ನವರನ್ನು ಅಂತಿಮಗೊಳಿಸಲು ಮುಂದಾಗಿದೆ. ವಿಸ್ತಾರ ಏರ್ ಲೈನ್ಸ್ ವಿಮಾನಗಳು ಗರಿಷ್ಠ 158 ಆಸನ ಸಾಮರ್ಥ್ಯವನ್ನು ಹೊಂದಿವೆ. ಒಂದು ವೇಳೆ ವಿಸ್ತಾರ ವಿಮಾನಗಳು ಅಂತಿಮವಾದಲ್ಲಿ ರಾಜ್ಯ ಹಜ್ ಸಮಿತಿಯ ವತಿಯಿಂದ ಪ್ರತೀ ದಿನ ಸರಾಸರಿ ಎರಡು ವಿಮಾನಗಳಲ್ಲಿ ಯಾತ್ರಾರ್ಥಿಗಳನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕಾಗುತ್ತದೆ.

ರಾಜ್ಯದ ಹಜ್ ಯಾತ್ರಾರ್ಥಿಗಳು ಇಷ್ಟೊಂದು ಗೊಂದಲಕ್ಕೆ ಸಿಲುಕಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿರುವ ಭಾರತೀಯ ಹಜ್ ಸಮಿತಿಯು ಯಾವುದಕ್ಕೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.


ಪ್ರಯಾಣದ ವೆಚ್ಚದ ಕುರಿತು ಸಿಗದ ಮಾಹಿತಿ

ಜೀವನದಲ್ಲಿ ಒಮ್ಮೆ ಪವಿತ್ರ ಹಜ್ ಯಾತ್ರೆ ಮಾಡಬೇಕು ಎಂಬ ಮಹದಾಸೆಯಿಂದ ಯಾತ್ರೆಗೆ ತೆರಳಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ 2.51 ಲಕ್ಷ ರೂ.ಗಳನ್ನು ಪಾವತಿಸಿದ್ದೇವೆ. ಇನ್ನೂ ಎಷ್ಟು ಹಣ ಪಾವತಿಸಬೇಕು ಎಂಬುದರ ಕುರಿತು ಹಜ್ ಸಮಿತಿಯವರು ಮಾಹಿತಿ ನೀಡಿಲ್ಲ ಎಂದು ಯಾತ್ರಾರ್ಥಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಯಾತ್ರಾರ್ಥಿಗಳ ಆಕ್ರೋಶ

ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಿದ್ದರಿಂದ ನಾವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇದೀಗ, ಏಕಾಏಕಿ ಬೇರೆ ಕಡೆಯಿಂದ ಯಾತ್ರೆಗೆ ತೆರಳಲು ಸೂಚಿಸುತ್ತಿರುವುದು ಸರಿಯಲ್ಲ.  ಕೇಂದ್ರ ಹಜ್ ಸಮಿತಿಯ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಏಕೆ? ಯಾತ್ರೆಗೆ ಎಷ್ಟು ಹಣ ಕೊಡಬೇಕು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ, ಎಲ್ಲಿಂದ ಪ್ರಯಾಣ ಆರಂಭಿಸಬೇಕು ಎಂಬ ಮಾಹಿತಿಯೂ ‌ಇಲ್ಲ ಎಂದು ಪ್ರಯಾಣಿಕರು ತೀವ್ರ ಅಸಮಾಧಾನ, ಆಕ್ರೋಶ ಹೊರ ಹಾಕಿದ್ದಾರೆ.


ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ಅವಕಾಶ ನೀಡುವುದರಿಂದ ಕರಾವಳಿ ಭಾಗದ ಯಾತ್ರಾರ್ಥಿಗಳಿಗೆ ಅನುಕೂಲ ಆಗುತ್ತದೆ. ಇಲ್ಲಿಂದ ಮೂರರಿಂದ ನಾಲ್ಕು ವಿಮಾನಗಳು ಅಷ್ಟೇ ತೆರಳುವುದು. ಬೆಂಗಳೂರು ಅಥವಾ ಕೇರಳದ ಕಣ್ಣೂರು, ಕೊಚ್ಚಿ ವಿಮಾನ ನಿಲ್ದಾಣಗಳ ಮೂಲಕ ತೆರಳುವುದು ನಮಗೆ ಕಷ್ಟವಾಗುತ್ತದೆ. ಯಾತ್ರೆಗೆ ತೆರಳುವಾಗ ಮುಂಚಿತವಾಗಿ ನಾವು ಅಲ್ಲಿ ಹೋಗಿ ಉಳಿದುಕೊಳ್ಳಲು ಹಾಗೂ ನಮಗೆ ಬೀಳ್ಕೊಡಲು ಬರುವ ಸಂಬಂಧಿಕರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಬೇಕಾಗುತ್ತದೆ. ಇದೆಲ್ಲಾ ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುತ್ತದೆ. ಭಾರತೀಯ ಹಜ್ ಸಮಿತಿಯವರು ಈ ಭಾಗದ ಯಾತ್ರಾರ್ಥಿಗಳ ಸಮಸ್ಯೆ ಬಗ್ಗೆ ಗಮನಹರಿಸಿ, ಬಗೆಹರಿಸಬೇಕು ಎಂದು ಯಾತ್ರಾರ್ಥಿಗಳು ಆಗ್ರಹಿಸಿದ್ದಾರೆ.

Similar News