ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾಗಿದ್ದ ಕೋಲಾರದಲ್ಲಿ ಗೆಲುವು ಯಾರಿಗೆ?

ವರ್ತೂರು- ಕೊತ್ತೂರು- ಸಿ.ಎಂ.ಆರ್ ಮಧ್ಯೆ ಹಣಾಹಣಿ

Update: 2023-05-08 10:41 GMT

ಕೋಲಾರ : ಚುನಾವಣಾ ಮತದಾನಕ್ಕೆ ಇನ್ನು ಎರಡೇ ದಿನ ಬಾಕಿ ಇದೆ. ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಎದೆಬಡಿತ ವೇಗ ಹೆಚ್ಚುತ್ತಿದೆ. ಈ ಬಾರಿಯ ಬಾರಿ ಕ್ಷೇತ್ರದ ಗದ್ದುಗೆಯನ್ನು ಏರಲು ಕಾಂಗ್ರೆಸ್ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಮತ ಸೆಳೆಯುವ ಹೋರಾಟಕ್ಕೆ ಇಂದು ಕೊನೆಯ ದಿನವಾಗಿದೆ. 

ಕಳೆದ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಜೆಡಿಎಸ್ ಪಕ್ಷ ಈ ಬಾರಿ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಮಣೆ ಹಾಕಿದ್ದು, ಸ್ಥಳೀಯ ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಸತತವಾಗಿ ಒಂದು ವರ್ಷದಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ಕೋಲಾರದ ಜನತೆ ಸ್ವಾಭಿಮನಿಗಳಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಜನ ಸೇವೆ ಸಲ್ಲಿಸಿದ ಹಾಗೂ ಕೊರೋನಾ ಸಂಕಷ್ಟದಲ್ಲಿ ಜನರಿಗೆ ಸ್ಪಂಧಿಸಿದ ಸ್ಥಳೀಯ ಅಭ್ಯರ್ಥಿಗೇ ಆರ್ಶೀವಾದ ಮಾಡಬೇಕೆಂದು ಶ್ರೀನಾಥ್ ಮತಯಾಚನೆ ಮಾಡುತ್ತಿದ್ದಾರೆ. 

ಇನ್ನೂ ಬರದಿಂದ ತತ್ತರಿಸಿದ್ದ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿಸಿ ಇಂದು ಎಲ್ಲಾ ಕೆರೆಕುಂಟೆಗಳು ತುಂಬಿ ಅಂತರ್ಜಲ ವೃದ್ದಿಯಾಗಿ, ಜಿಲ್ಲೆಯಲ್ಲಿ ನೀರಿನ ಅಭಾವ ನೀಗಿಸಿದ ಚಿನ್ನದ ನಾಡಿನ ಭಗೀರಥ ಹಾಗೂ ಬಡವರಿಗೆ ಉಚಿತ ಅಕ್ಕಿಯನ್ನು ನೀಡಿದ ಅನ್ನರಾಮಯ್ಯ ಎಂದೇ ಖ್ಯಾತಿ ಪಡೆದ ಸಿದ್ದರಾಮಯ್ಯನವರ ಜನಪರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯ ಐದು ಗ್ಯಾರಂಟೀ ಯೋಜನಗಳನ್ನು ಪಡೆಯಿರಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಡವಾಗಿಯಾದರೂ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. 

ಇತ್ತ ಕೋಲಾರ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಬೆಂಬಲ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ವರ್ತೂರ್ ಪ್ರಕಾಶ್ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ರಾಜ್ಯ ಆಡಳಿತ ಪಕ್ಷದ ವಿರೋಧಿ ಅಲೆಯ ನಡುವೆಯೂ ಸ್ಟಾರ್ ಪ್ರಚಾರಕರಿಂದ ಪ್ರಚಾರ ನಡೆಸುತ್ತಿದ್ದಾರೆಯಾದರೂ, ಇವರು 2008 ಹಾಗೂ 2013ರ ಎರಡೂ ಅವಧಿಯಲ್ಲಿ ತಾವು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. 

ಇನ್ನೂ ಕ್ಷೇತ್ರದ ರಾಜಕೀಯ ಹಿನ್ನಲೆಯನ್ನು ನೋಡಿದರೆ, ಕೋಲಾರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರೂ, ಕಳೆದ 30 ವರ್ಷಗಳಿಂದ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇ ಇಲ್ಲ. ಕ್ಷೇತ್ರದಲ್ಲಿ ಮುಸ್ಲಿಂಮರು ಹಾಗೂ ದಲಿತರೇ ಜನ ಸಂಖ್ಯೆಯಲ್ಲಿ ಹೆಚ್ಚಾಗಿದ್ದರೂ ಒಕ್ಕಲಿಗರೇ ನಿರ್ಣಾಯಕ ಮತದಾರರಾಗಿದ್ದಾರೆ.

ಇನ್ನೂ ಈ ಬಾರಿಯ ಚುನಾವಣೆಯ ಪ್ರಚಾರದ ಅಂತ್ಯಕ್ಕೆ ಅಭ್ಯರ್ಥಿಗಳ ಬಲಾಬಲ ನೋಡುವುದಾದರೆ, ಕಾಂಗ್ರೆಸ್ ಪಕ್ಷದಲ್ಲಿ ಹಳೆಯ ಕಾಂಗ್ರೆಸ್ ಮತ್ತು ಹೊಸ ಕಾಂಗ್ರೆಸ್ ಎಂಬ ಎರಡು ಗುಂಪುಗಳಾಗಿವೆ. ಕೆ.ಹೆಚ್.ಮುನಿಯಪ್ಪ ಬೆಂಬಲಿಗರೆಲ್ಲಾ ಹಳೆಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರೆ, ಹೊಸ ಕಾಂಗ್ರೆಸ್‌ನಲ್ಲಿ ಎಂ.ಎಲ್.ಸಿ. ಅನಿಲ್ ಕುಮರ್ ಅವರದ್ದೇ ಸರ್ವಾಧಿಕಾರ. ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಚುನಾವಣಾ ರಾಜಕೀಯದಿಂದ ದೂರ ಇರುವುದು, ಪಕ್ಷದ ಬಹುತೇಕ ಪದಾಧಿಕಾರಿಗಳು ಮೇಲ್ನೋ ಟಕ್ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತೆ ಇರೋದು, ಕಾಂಗ್ರೆಸ್ ಬಣ ರಾಜಕೀಯಕ್ಕೆ ಶಕ್ತಿ ತುಂಬಿದೆ. ಇದರಿಂದ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ಗೆ ದೊಡ್ಡ ಮಟ್ಟದ ಹೊಡತ ಬಿದ್ದಿದೆಯಾದರೂ, ಕೊತ್ತೂರು ಮಂಜುನಾಥ್ ತಮ್ಮ ಯಾವುದೇ ಅಸ್ತ್ರಗಳನ್ನೂ ಬಳಸದೇ ಮತಯಾಚನೆಯಲ್ಲಿ ತೊಡಗಿದ್ದಾರೆ. ಇಷ್ಟಾದರೂ ಆಡಳಿತ ಪಕ್ಷದ ವಿರೋಧಿ ಅಲೆಯ ಲಾಭ ಪಡೆಯಲು ಕಾಂಗ್ರೆಸ್ ಮಾಜಿ ಸಚಿವ ನಸೀರ್ ಅಹಮದ್, ಅನಿಲ್‌ಕುಮಾರ್, ಕೆ.ಶ್ರೀನಿವಾಸಗೌಡ, ಸಿ.ಎಂ.ಮುನಿಯಪ್ಪ, ಯುವ ಮುಖಂಡ ನಂದಿನಿ ಪ್ರವೀಣ್, ವಕ್ಕಲೇರಿ ರಾಜಪ್ಪ, ಚಂಜಿಮಲೆ ರಮೇಶ್ ತಂಡ ಹೆಣಗಾಡುತ್ತಿದ್ದು, ತಪ್ಪುಗಳನ್ನು ತಿದ್ದಿಕೊಳ್ಳಲೂ ಆಗದ ಹಂತಕ್ಕೆ ತಲುಪಿದ್ದಾರೆ. ಆದರೆ, ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರವರ ಜನಪ್ರಿಯತೆ ಕ್ಷೇತ್ರದ ಯುವ ಜನತೆಯನ್ನು ಸೆಳೆದಿದ್ದು ಕ್ಷೇತ್ರದಲ್ಲಿ ತಡವಾಗಿಯಾದರೂ ಒಂದು ಸಂಚಲನವನ್ನೇ ಸೃಷ್ಟಿಸಿರುವುದು ಹಾಗೂ ಇನ್ನಿತರ ಪಕ್ಷಗಳಿಗೆ ಸರಿಸಮವಾಗಿ ಸ್ಪರ್ಧೆ ನೀಡುತ್ತಿದ್ದಾರೆ. 

ಇನ್ನೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕಳದ ಒಂದು ವರ್ಷದಿಂದ ಚುನಾವಣಾ ತಯಾರಿ ನಡೆಸುತ್ತಾ ಬಂದಿದ್ದಾರೆ. ವೃತ್ತಿಯಲ್ಲಿ ಟೊಮೆಟೋ ವ್ಯಾಪಾರಿಯಾಗಿದ್ದುಕೊಂಡೇ ಸಮಾಜ ಸೇವೆಯಲ್ಲಿ ತೊಡಿಗಿಕೊಂಡ ಶ್ರೀನಾಥ್, ಕೊರೋನಾ ಸಂಕಷ್ಟದಲ್ಲಿ ಜನರಿಗೆ ಹತ್ತಿರವಾದವರು. ಎಲ್ಲರಿಗಿಂತಲೂ ಮೊದಲೇ ಚುನಾವಣಾ ಪ್ರಚಾರ ಆರಂಭಿಸಿದ ಶ್ರೀನಾಥ್ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಉತ್ಸಾಹಿ ಅನನುಭವಿ ರಾಜಕಾರಣಿ, ಜೆಡಿಎಸ್ ಪಕ್ಷದ ಪ್ರಣಾಳಿಕೆ ಹಾಗೂ ತಮ್ಮ ನಾಲ್ಕು ವರ್ಷದ ಸಮಾಜ ಸೇವೆಯನ್ನು ಮುಂದಿಟ್ಟುಕೊಂಡೇ ಮತಯಾಚನೆ ಮಾಡುತ್ತಿದ್ದರೂ. ಈ ನಡುವೆ ಜೆಡಿಎಸ್ ಪಕ್ಷದಲ್ಲಿದ್ದ ಕೆಲವು ಹಳೇ ಮುಖಂಡರನ್ನು ಕಡೆಗಣಿಸಿದ್ದಾರೆ ಎಂಬ ಆರೋಪದ ನಡುವೆ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷೆ ಕುರ್ಕಿರಾಜೇಶ್ವರಿ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು, ಕೆಲವು ಮೂಲ ಜೆಡಿಎಸ್ ಮುಖಂಡರ ಅಸಮದಾನವನ್ನು ಶಮನಗೊಳಿಸುವಲ್ಲಿ ಎಡವಿದ್ದು ಅಭ್ಯರ್ಥಿಯ ಅನುಭವದ ಕೊರತೆಗೆ ನಿದರ್ಶನ. ಆದರೂ, ಆಡಳಿತ ಸರ್ಕಾರದ ವಿರೋಧಿ ಅಲೆಯ ಲಾಭವನ್ನು ಪಡೆಯಲು ಇಲ್ಲಿನ ನಿರ್ಣಾಯಕ ಮತದಾರರಾದ ಮುಸ್ಲಿಮರು ಹಾಗೂ ಒಕ್ಕಲಿಗರು ಒಗ್ಗಟ್ಟಿನ ಹೋರಾಟದ ಮೇಲೆ ಅವಲಂಬಿಸಿದ್ದಾರೆ. 

ಇತ್ತ ಮಾಜಿ ಸಚಿವ ವರ್ತೂರ್ ಪ್ರಕಾಶ್ ಆಡಳಿತ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದು, ತಮ್ಮ ಎರಡೂ ಅವಧಿಯ ಅಭಿವೃದ್ದಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ತಮ್ಮದೇ ಕಾರ್ಯಕರ್ತ ಪಡೆಯನ್ನು ನೆಚ್ಚಿ ಮತಬೇಟಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ಅಹಿಂದ ನಾಯಕರೆಂದೇ ಬಿಂಬಿಸಿಕೊಂಡಿದ್ದ ವರ್ತೂರು ಪ್ರಕಾಶ್, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೂ ಅಹಿಂದ ಮತದಾರರನ್ನೇ ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮತ ಬ್ಯಾಂಕ್‌ನಲ್ಲಿ ಜಯ ತರುವ ಮತಗಳ ಇತಿಹಾಸವಿಲ್ಲದಿದ್ದರೂ ಸಹ ವರ್ತೂರ್ ಪ್ರಕಾಶ್ ರವರ ವೈಯಕ್ತಿಕ ಮತಬ್ಯಾಂಕ್ ಬಿಜೆಪಿಗೆ ದೊಡ್ಡ ಮಟ್ಟದ ಶಕ್ತಿ ತುಂಬಿದೆ ಅಲ್ಲದೆ ರಾಜಕೀಯವಾಗಿ ವರ್ತೂರ್ ಪ್ರಕಾಶ್ ರವರು ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗಿಂತ ಅನುಭವಿಯಾಗಿದ್ದು ಕ್ಷೇತ್ರದಲ್ಲಿ ಅವರದ್ದೇ ಹಿಡಿತ ಹೊಂದಿದ್ದಾರೆ. ಇನ್ನುಳಿದ ಎರಡು ದಿನಗಳಲ್ಲಿ ಇವರು ಗೆಲ್ಲುವ ಮತಗಳನ್ನು ಪಡೆಯಲು ಯಾವ ತಂತ್ರರೂಪಿಸುತ್ತಾರೆ ಎಂದು ಕಾದು ನೋಡಬೇಕು.

ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ, ಜೆಡಿಎಸ್ ಪಕ್ಷದ ಒಗ್ಗಟ್ಟಿನ ಮಂತ್ರ, ಬಿಜೆಪಿ ಪಕ್ಷದ ಜನಪ್ರಿಯತೆ ಹಾಗೂ ಮೋದಿ ಅಲೆಯಿಂದ ಮುಂದಿನ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಪೀಕಲಾಟದಲ್ಲಿ ಮತದಾರರು ಇದ್ದಾರೆ.

Similar News