ಪಕ್ಷ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ 'ಗ್ಯಾರಂಟಿ' ಜಾರಿಗೆ ಬರದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಯು.ಟಿ. ಖಾದರ್

''ಸುಳ್ಳು ಮತ್ತು ಅಪಪ್ರಚಾರವೇ ಬಿಜೆಪಿಯ ಬಂಡವಾಳ''

Update: 2023-05-08 10:53 GMT

ಮಂಗಳೂರು, ಮೇ 8: ರಾಜ್ಯದ ಆಡಳಿತಾರೂಢ ಬಿಜೆಪಿಯು ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಲು ಅಪ್ರಚಾರದಲ್ಲಿ ನಿರತವಾಗಿದ್ದು , ಸುಳ್ಳು ಮತ್ತು ಅಪಪ್ರಚಾರವೇ ಬಿಜೆಪಿಯ ಬಂಡವಾಳವಾಗಿದೆ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 4 ವರ್ಷಗಳಲ್ಲಿ ಬಿಜೆಪಿಯ ಭ್ರಷ್ಟಾಚಾರ, ಆಡಳಿತದ ವೈಫಲ್ಯ , ಸ್ವಜನಪಕ್ಷಪಾತ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಟ್ಯಾಕ್ಸ್ ಏರಿಕೆ ಇವೆಲ್ಲವನ್ನು ನೋಡಿ ಜನರು ಭ್ರಮನಿರಸನಗೊಂಡಿದ್ದಾರೆ ಎಂದರು.

ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಸರಿಯಾದ ಪಾಠ ಕಲಿಸಲಿದ್ದಾರೆ. ಜನರಿಗೆ ಮೋಸ ಮಾಡಿರುವ ಬಿಜೆಪಿಗೆ ಸೋಲು ಖಚಿತ. ಜನರ ನೋವನ್ನು ಕಾಂಗ್ರೆಸ್ ಪಕ್ಷ ಶಮನಗೊಳಿಸಲಿದೆ ಎಂದರು.

ಈಗಾಗಲೇ ಕಾಂಗ್ರೆಸ್ ಪ್ರಕಟಿಸಿರುವ ಗ್ಯಾರಂಟಿ ಸ್ಕೀಮ್‌ನ್ನು ಕಾಂಗ್ರೆಸ್ ಆಡಳಿತಕ್ಕೆ ಬಂದ ಒಂದು ತಿಂಗಳೊಳಗಾಗಿ ಜಾರಿಗೊಳಿಸಲಿದೆ. ಕಾಂಗ್ರೆಸ್‌ಗೆ ಜನತೆ ಅಧಿಕಾರ ನೀಡಿ ಆರು ತಿಂಗಳ ಒಳಗಾಗಿ ಒಂದು ವೇಳೆ ಈ ಸ್ಕೀಮ್‌ನ್ನು ಅನುಷ್ಠಾನಗೊಳಿಸದೆ ಇದ್ದರೆ, ತಾನು ಆಗ ಶಾಸಕನಾಗಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು.

ಗ್ಯಾರಂಟಿ ಸ್ಕೀಮ್ ಅನುಷ್ಠಾನದ ಮೂಲಕ ರಾಜ್ಯದ ಆರ್ಥಿಕತೆ ಸ್ಥಿತಿ ಸುಧಾರಣೆಯಾಗಲಿದೆ. ಕಾಂಗ್ರೆಸ್ ಚುನಾವಣೆಗೆ ಎಲ್ಲ ಸಮುದಾಯ ಒಪ್ಪುವ ಪ್ರಣಾಳಿಕೆಯನ್ನು ಕಾಂಗ್ರೆಸ್ ತಯಾರಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ ಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಎಚ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Similar News