ಒಳ ಮೀಸಲಾತಿ | ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್

Update: 2023-05-24 13:26 GMT

ಬೆಂಗಳೂರು, ಮೇ 24: ಪರಿಶಿಷ್ಟ ಪಂಗಡದ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿ ಬಿಜೆಪಿ ನೇತೃತ್ವದ ಹಿಂದಿನ ಸರಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಎರಡು ವಾರ ಕಾಲಾವಕಾಶ ನೀಡಿದೆ.

ಈ ಸಂಬಂಧ ಬೆಂಗಳೂರಿನ ಎಚ್.ರವಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಬುಧವಾರ ಕಾಲಾವಕಾಶ ನೀಡಿದೆ. 

ರಾಜ್ಯ ಸರಕಾರದ ಪರವಾಗಿ ಹಾಜರಾದ ವಕೀಲರು, ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ವಿಚಾರಣೆಯನ್ನು ಎರಡು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿ, ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ಸಂಪುಟ ಉಪ ಸಮಿತಿಯ ಶಿಫಾರಸು ಆಧರಿಸಿ 2023ರ ಮಾರ್ಚ್ 27ರಂದು ಬಿಜೆಪಿ ನೇತೃತ್ವದ ಹಿಂದಿನ ಸರಕಾರವು ಮೀಸಲಾತಿ ವರ್ಗೀಕರಿಸಿ ಆದೇಶ ಮಾಡಿದೆ. ಈ ವರ್ಗೀಕರಣವನ್ನು ರಾಜ್ಯಪಾಲರ ಒಪ್ಪಿಗೆಯ ಬಳಿಕ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ.

ಹಿಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು 101 ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಶೇ.17ರಷ್ಟು ಮೀಸಲಾತಿಯನ್ನು ನಾಲ್ಕು ವರ್ಗಗಳಾಗಿ ಪ್ರತ್ಯೇಕಿಸಿ ಮೀಸಲಾತಿ ಹಂಚಿಕೆ ಮಾಡಿದೆ. ಆದರೆ, ಸಂಪುಟ ಉಪ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದ 101 ಜಾತಿಗಳಿಗೆ ಕಲ್ಪಿಸಲಾಗಿದ್ದ ಶೇ.17ರಷ್ಟು ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಿಂದಿನ ರಾಜ್ಯ ಸರಕಾರ ನಾಲ್ಕು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ, ಮೀಸಲು ಹಂಚಿಕೆ ಮಾಡಿದೆ. ಮೊದಲ ಗುಂಪಿನಲ್ಲಿ ಆದಿ ದ್ರಾವಿಡ, ಭಾಂಬಿ, ಮಾದಿಗ, ಸಮಗಾರ ಜಾತಿಗಳನ್ನು ಉಲ್ಲೇಖಿಸಲಾಗಿದ್ದು, ಅವುಗಳಿಗೆ ಶೇ.6ರಷ್ಟು ಮೀಸಲು ಹಂಚಿಕೆ ಮಾಡಲಾಗಿದೆ. 

ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಚಲವಾದಿ, ಚನ್ನದಾಸರ, ಹೊಲೆಯ, ಮಹಾರ್ ಜಾತಿಗಳನ್ನು ಉಲ್ಲೇಖಿಸಿದ್ದು, ಅವುಗಳಿಗೆ ಶೇ.5.5ರಷ್ಟು ಮೀಸಲು ನೀಡಲಾಗಿದೆ. ಮೂರನೇ ಗುಂಪಿನಲ್ಲಿ ಬಂಜಾರ ಮತ್ತು ಸಮಾನ ಜಾತಿಗಳು, ಭೋವಿ ಮತ್ತು ಸಮಾನ ಜಾತಿಗಳು, ಕೊರಚ ಮತ್ತು ಕೊರಮ ಜಾತಿಗಳನ್ನು ಉಲ್ಲೇಖಿಸಿ, ಶೇ 4.5ರಷ್ಟು ಹಾಗೂ ನಾಲ್ಕನೇ ಗುಂಪಿನಲ್ಲಿ 1, 2 ಮತ್ತು 3ನೇ ಗುಂಪಿನಲ್ಲಿ ಸ್ಥಾನ ಪಡೆಯದ, ಅಸ್ಪೃಶ್ಯ ಮತ್ತು ಇತರೆ ಜಾತಿಗಳಿಗೆ ಶೇ.1ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂಬ ಸರಕಾರದ ಆದೇಶವನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.

ಮನವಿ: ಯಾವುದೇ ತತ್ವ ಹಾಗೂ ಹಿಂದುಳಿದಿರುವಿಕೆಯ ಆಧಾರವಿಲ್ಲದೆ ಮತ್ತು ಪೂರಕವಾದ ದತ್ತಾಂಶ ಸಂಗ್ರಹಿಸದೆ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಇದು ಅತಾರ್ಕಿಕ, ಅವೈಜ್ಞಾನಿಕ ಮತ್ತು ಅಸಾಂವಿಧಾನಿಕ. ಹೀಗಾಗಿ, ರಾಜ್ಯ ಸರಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Similar News