ನೆಹರೂ ಮತ್ತು ರಾಷ್ಟ್ರೀಯ ಭಾವೈಕ್ಯತಾ ಮಂಡಳಿ

Update: 2023-05-31 07:12 GMT

ನೆಹರೂ ಅವರು ಬ್ರಿಟಿಷ್ ಆಡಳಿತದ ದಾಸ್ಯದಿಂದ ವಿಮೋಚನೆಗೊಂಡ ಭಾರತವನ್ನು ಸದೃಢ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಹಗಲಿರುಳು ಶ್ರಮಿಸಿದ್ದು ಇತಿಹಾಸ. ಅವರ ಸಾಧನೆಗಳನ್ನು ಮರೆಮಾಚಲು ಕೆಲವರಿಂದ ನಿರಂತರ ಪ್ರಯತ್ನವಾಗುತ್ತಿದೆ. ಇತಿಹಾಸವನ್ನು ತಿರುಚುವವರು ಎಂದಿಗೂ ತಮ್ಮ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ. ಏಕೆಂದರೆ ಸತ್ಯವನ್ನು ಕೆಲವು ಕಾಲ ಮರೆಮಾಚಬಹುದು. ಆದರೆ ಸತ್ಯವು ಯಾವಾಗಲೂ ನಿಚ್ಚಳವಾಗಿಯೇ ಇರುವುದು.

ನೆಹರೂ ದೇಶದ ಪ್ರಧಾನ ಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಸುಧಾರಣಾ ಕಾರ್ಯಗಳು ಭಾರತವು ಸದೃಢ ರಾಷ್ಟ್ರವಾಗಿ ಹೊರ ಹೊಮ್ಮುವುದಕ್ಕೆ ಕಾರಣವಾಯಿತು. ಬೃಹತ್ ಕೈಗಾರಿಕೆಗಳು, ನೀರಾವರಿ ಯೋಜನೆಗಳು, ಗ್ರಾಮೋದ್ಯೋಗ ಉತ್ತೇಜಿಸುವ ಯೋಜನೆಗಳು, ರಕ್ಷಣಾ ವ್ಯವಸ್ಥೆ ಬಲಪಡಿಸಲು ಸ್ಥಾಪಿಸಿದ ಸಾರ್ವಜನಿಕ ವಲಯದ ಕೈಗಾರಿಕಾ ವಸಾಹತುಗಳು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುವ ವಿಜ್ಞಾನ ಮತ್ತು ಅಭಿತಾಂತ್ರಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಮತ್ತು ದೇಶದ ತುಂಬಾ ವಿಶ್ವದ್ಯಾನಿಲಯಗಳ ಸ್ಥಾಪನೆಯಂತಹ ಕ್ರಮಗಳು ದೇಶವು ಪ್ರಗತಿಶೀಲ ದೇಶವಾಗಲು ಕಾರಣೀಭೂತವಾದ ಅಂಶಗಳಾಗಿವೆ.

ಬೃಹತ್ ಕೈಗಾರಿಕೆಗಳು ಮತ್ತು ನೀರಾವರಿ ಯೋಜನೆಗಳನ್ನು ಆಧುನಿಕ ಭಾರತದ ನೈಜ ದೇವಾಲಯಗಳೆಂದು ನಂಬಿದ್ದ ನೆಹರೂ ಅವರು ಬ್ರಿಟಿಷ್ ಆಡಳಿತದ ದಾಸ್ಯದಿಂದ ವಿಮೋಚನೆಗೊಂಡ ಭಾರತವನ್ನು ಸದೃಢ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಹಗಲಿರುಳು ಶ್ರಮಿಸಿದ್ದು ಇತಿಹಾಸ. ಅವರ ಸಾಧನೆಗಳನ್ನು ಮರೆಮಾಚಲು ಕೆಲವರಿಂದ ನಿರಂತರ ಪ್ರಯತ್ನವಾಗುತ್ತಿದೆ. ಇತಿಹಾಸವನ್ನು ತಿರುಚುವವರು ಎಂದಿಗೂ ತಮ್ಮ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ. ಏಕೆಂದರೆ ಸತ್ಯವನ್ನು ಕೆಲವು ಕಾಲ ಮರೆಮಾಚಬಹುದು. ಆದರೆ ಸತ್ಯವು ಯಾವಾಗಲೂ ನಿಚ್ಚಳವಾಗಿಯೇ ಇರುವುದು.

ನೆಹರೂ ಸ್ವತಂತ್ರ ಭಾರತದ ಮೂಲಭೂತ ಸವಾಲುಗಳ ಬಗ್ಗೆ ಅರಿವು ಹೊಂದಿದ್ದರು. ಭಾರತ ಬಹುತ್ವ ಪೋಷಿಸಿಕೊಂಡು ಬಂದಿರುವುದರ ಐತಿಹಾಸಿಕ ಸತ್ಯದ ಪ್ರತಿಪಾದಕರಾಗಿದ್ದರು. ಭಾರತ ಬಹು ಭಾಷೆಗಳು, ಬಹು ಸಂಸ್ಕೃತಿಗಳು, ಬಹು ಧರ್ಮಗಳು, ಬಹು ಜನಾಂಗಗಳನ್ನು ತನ್ನೊಡಲೊಳಗೆ ಕಾಪಿಟ್ಟು ಪೋಷಿಸಿಕೊಂಡು ಬಂದ ವಿಶಾಲ ದೇಶವಾಗಿತ್ತು. ಇಂತಹ ವೈವಿಧ್ಯಮಯ ದೇಶದಲ್ಲಿ ಹಲವಾರು ವಿಭಜಕ ಶಕ್ತಿಗಳು ಜನರನ್ನು ಭಾಷೆ, ಧರ್ಮ, ಜಾತೀಯತೆ, ಪ್ರಾಂತೀಯತೆ, ಕೋಮುಗಳು, ಜನಾಂಗೀಯ ಭಾವನೆ ಮತ್ತು ಸಾಂಸ್ಕೃತಿಕ ಭಿನ್ನತೆಗಳ ಆಧಾರದ ಮೇಲೆ ಒಡೆದು ತಮ್ಮ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಹವಣಿಸುತ್ತಿದ್ದುದರ ಸ್ಪಷ್ಟತೆ ಇತ್ತು. ಹೀಗಾಗಿಯೇ ದೇಶದಲ್ಲಿ ತಲೆದೋರುತ್ತಿದ್ದ ಕೋಮುವಾದ, ಜಾತೀಯತೆ, ಪ್ರಾಂತೀಯತೆ, ಭಾಷಾ ಸಮಸ್ಯೆ ಮತ್ತು ಜನಾಂಗೀಯ ವೈಷಮ್ಯದಂತಹ ಸಮಸ್ಯೆಗಳ ಪರಿಹಾರಕ್ಕಾಗಿ ನೆಹರೂರವರು 1961ರ ಸೆಪ್ಟಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯನ್ನು ರಚಿಸಿದ್ದರು.

ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚನೆಯಾದ ಈ ಮಂಡಳಿಯಲ್ಲಿ ದೇಶದ ಹಿರಿಯ ರಾಜಕೀಯ ಮುತ್ಸದ್ದಿಗಳು, ಸಂಸದರು, ಆಯ್ದ ಹಿರಿಯ ನಾಗರಿಕರು, ಕೇಂದ್ರದ ಕ್ಯಾಬಿನೆಟ್ ಸಚಿವರು, ಉದ್ಯೋಗಪತಿಗಳು, ಮಾಧ್ಯಮ ಪ್ರತಿನಿಧಿಗಳು, ರಾಜ್ಯಗಳ ಮುಖ್ಯ ಮಂತ್ರಿಗಳು ಮತ್ತು ವಿರೋಧಪಕ್ಷದ ನಾಯಕರನ್ನೊಳಗೊಂಡಂತೆ ಒಟ್ಟು 147 ಸದಸ್ಯರು ಇದ್ದರು. ಈ ಮಂಡಳಿಯ ಬಹುಮುಖ್ಯ ಉದ್ದೇಶವೆಂದರೆ ದೇಶದಲ್ಲಿ ಕೋಮುವಾದ, ಜಾತೀಯತೆ, ಪ್ರಾಂತೀಯತೆ, ಭಾಷಾ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯುವುದು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಾಮಾಜಿಕ ಸಮಾನತೆ ಕಾಪಾಡುವುದು, ಕೋಮು ಸೌಹಾರ್ದ ನೆಲೆಸುವಂತೆ ಕ್ರಮ ಕೈಕೊಳ್ಳುವುದು, ಪರಸ್ಪರ ವಿಶ್ವಾಸವನ್ನು ಎಲ್ಲ ಸಮುದಾಯಗಳಿಗೆ ಕಲ್ಪಿಸುವುದು ಮುಖ್ಯ ಉದ್ದೇಶವಾಗಿತ್ತು. ಇದಷ್ಟೇ ಅಲ್ಲದೆ ದೇಶದಾದ್ಯಂತ ಕೋಮು ಸೌಹಾರ್ದ ನೆಲೆಸಲು ಮತ್ತು ಜಾತೀಯತೆಯ ಸಮಸ್ಯೆ ಹೋಗಲಾಡಿಸುವುದು ಮಂಡಳಿಯ ಕರ್ತವ್ಯವಾಗಿತ್ತು.

ಜವಾಹರಲಾಲ್ ನೆಹರೂ ಅವರ ದೂರದೃಷ್ಟಿ ಮತ್ತು ಸಂವೇದನಾಶೀಲ ಆಡಳಿತಕ್ಕೆ ಅವರು ಕೈಕೊಂಡ ಈ ಕ್ರಮಗಳೇ ಸಾಕ್ಷಿ. ಮಾತು ಎತ್ತಿದರೆ ನೆಹರೂ ಈ ದೇಶಕ್ಕೆ ಏನು ಮಾಡಿದ್ದಾರೆಂದು ಕೇಳುವವರು ಇತಿಹಾಸವನ್ನೊಮ್ಮೆ ಕಣ್ತೆರೆದು ನೋಡುವುದು ಒಳಿತು.

ದುರದೃಷ್ಟಕರ ಸಂಗತಿ ಎಂದರೆ ಈ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ ಪ್ರಸಕ್ತ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈ ಮಂಡಳಿಯ ಸಭೆ ನಡೆದದ್ದು 2013ರಲ್ಲಿ. ಅಂದರೆ ಕಳೆದ ಹತ್ತು ವರ್ಷ ಒಂದೇ ಒಂದು ಸಭೆಯನ್ನು ಕೇಂದ್ರ ಸರಕಾರ ನಡೆಸುವ ಗೋಜಿಗೆ ಹೋದಂತಿಲ್ಲವೆಂಬುದು ಕಟುವಾದ ವಾಸ್ತವ ಸತ್ಯ.

ಸ್ವತ: ಕೋಮುವಾದದಲ್ಲಿ ನಂಬಿಕೆ ಇಟ್ಟಿರುವ ಕೇಂದ್ರ ಸರಕಾರವು ಈ ಮಂಡಳಿಯನ್ನು ಉದ್ದೇಶಪೂರ್ವಕವಾಗಿ ಉಪೇಕ್ಷಿಸಿದಂತೆ ಇದೆ. ಒಂದು ರಾಷ್ಟ್ರ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ, ಒಂದು ರೇಶನ್ ಕಾರ್ಡ್ ಪ್ರತಿಪಾದಿಸುವ ಕೇಂದ್ರದ ಧೋರಣೆಯು ಸಂವಿಧಾನದ ಸ್ಪಷ್ಟ ಉಲಂಘನೆಯಲ್ಲವೇ? ಬಿಜೆಪಿ ಸರಕಾರವು ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ರಾಷ್ಟೀಯ ಭಾವೈಕ್ಯತಾ ಮಂಡಳಿಯ ಸಭೆ ನಡೆಸಿ ದೇಶದಲ್ಲಿ ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು, ಅಸ್ಪೃಶ್ಯ ತಳ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳು ಹಾಗೂ ಅಪರಾಧಗಳ ಬಗ್ಗೆ ಚರ್ಚಿಸಿಲ್ಲವೆಂಬುದು ಮೇಲ್ನೋಟಕ್ಕೆ ಕೇಂದ್ರ ಸರಕಾರದ ನಿಷ್ಕ್ರಿಯತೆಗೆ ಸಾಕ್ಷಿ.

ಕೊನೆಯಲ್ಲಿ ಒಂದಿಷ್ಟು...
ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಎನ್ಎಸ್ಎಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಏರ್ಪಡಿಸಿದ್ದರು. ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ನಾನು ಮುಖ್ಯ ಭಾಷಣಕಾರನಾಗಿ ಭಾಗವಹಿಸಿದ್ದೆ. ಕುಲಪತಿಗಳು ಮತ್ತು ವಿಜಯಪುರ ಜಿಲ್ಲಾಧಿಕಾರಿ ಕೂಡ ಉಪಸ್ಥಿತರಿದ್ದರು. ನಾನು ಭಾವೈಕ್ಯತೆಯ ಬಗ್ಗೆ ಮಾತನಾಡುತ್ತಾ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ ಮತ್ತು ನೆಹರೂರವರ ಕಾಣಿಕೆ ಬಗ್ಗೆ ಪ್ರಸ್ತಾಪಿಸಿದೆ. ತಕ್ಷಣ ಭಾಷಣ ಮೊಟಕುಗೊಳಿಸಲು ಚೀಟಿ ನೀಡಿದರು. ನಾನು ನನ್ನ ಭಾಷಣ ಮುಂದುವರಿಸಿದೆ. ಮುಂದೆ ವಿದ್ಯುತ್ ಸಂಪರ್ಕ ಕಡಿತ ಮಾಡಿದರು. ಹೀಗೆ ಸತ್ಯ ಮರೆ ಮಾಚುವ ಶೈಕ್ಷಣಿಕ ವಾತಾವರಣದಿಂದ ವಿದ್ಯಾರ್ಥಿ ಏನು ಕಲಿಯಲಿಕ್ಕೆ ಸಾಧ್ಯ.

Similar News