ನಶಿಸುವ ಹಾದಿಯಲ್ಲಿ ಬಿದಿರಿನ ಪರಿಕರಗಳು; ಮೇದಾರರ ಬದುಕು ನುಂಗಿದ ಪ್ಲಾಸ್ಟಿಕ್

Update: 2023-06-08 05:27 GMT

ಮಡಿಕೇರಿ, ಜೂ.8: ಬಿದಿರಿನ ಪರಿಕರಗಳನ್ನು ತಯಾರಿಸುವ ಗುಡಿಕೈಗಾರಿಕೆಗಳಲ್ಲಿ ತೊಡಗಿಕೊಂಡಿರುವ ಮೇದಾರರ ಬದುಕನ್ನು ಪ್ಲಾಸ್ಟಿಕ್ ನುಂಗಿದೆ. ಆಧುನಿಕ ತಂತ್ರಜ್ಞಾನಗಳ ಹೊಡೆತಕ್ಕೆ ಸಿಲುಕಿಕೊಂಡು ಇತ್ತೀಚಿನ ದಿನಗಳಲ್ಲಿ ಬಿದಿರಿನ ಪರಿಕರಗಳು ಕಾಣದಂತಾಗಿದೆ.

 ಹಿಂದಿನ ಕಾಲದಲ್ಲಿ ಅತೀ ಹೆಚ್ಚಾಗಿ ಬಿದಿರಿನಿಂದ ತಯಾರಿಸಿದ ಪರಿಕರಗಳನ್ನು ಬಳಸುತ್ತಿದ್ದರು. ಇದೀಗ ಪ್ಲಾಸ್ಟಿಕ್ ಮೊರ, ಕುಕ್ಕೆ, ಚಾಪೆ, ತಟ್ಟೆ ಹಾಗೂ ಲೋಹದ ವಸ್ತುಗಳನ್ನು ಬಳಸುತ್ತಿರುವುದರಿಂದ ಬಿದಿರಿನಿಂದ ಪರಿಕರಗಳನ್ನು ತಯಾರಿಸುತ್ತಿರುವ ಮೇದಾರ ಬದುಕು ಪ್ಲಾಸ್ಟಿಕ್ ನುಂಗಿಬಿಟ್ಟಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಳ್ಳಿಯಲ್ಲಿ ರಸ್ತೆ ಬದಿಯಲ್ಲಿ ಬಿದಿರಿನಿಂದ ಮೊರ, ಕುಕ್ಕೆ, ಚಾಪೆ, ಪಂಜರ, ತಡಪೆ, ಕೈಯಲ್ಲಿ ತಯಾರಿಸುವ ದೃಶ್ಯ ಕಾಣಸಿಗುತ್ತದೆ. ಬಸವನಳ್ಳಿಯಲ್ಲಿ ಈ ಹಿಂದೆ 30 ಮೇದಾರ ಕುಟುಂಬ ಗುಡಿಕೈಗಾರಿಕೆಯಾದ ಬಿದಿರಿನಿಂದ ಪರಿಕರಗಳನ್ನು ತಯಾರಿಸುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಕಾಲಕ್ರಮೇಣ ಪ್ಲಾಸ್ಟಿಕ್ ಹಾಗೂ ಲೋಹದ ವಸ್ತುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವುದರಿಂದ ಬಿದಿರಿನ ಪರಿಕರಗಳಿಗೆ ಬೇಡಿಕೆ ಕಡಿಮೆಯಾಯಿತು. ಇದೀಗ ಬಸವನಳ್ಳಿಯಲ್ಲಿ ಕೇವಲ 4 ರಿಂದ 6 ಮೇದಾರ ಕುಟುಂಬಗಳು ಮಾತ್ರ ಬಿದಿರಿನ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಯಾರಿಗೂ ಬೇಡವಾದ ಬಿದಿರು: ಈ ಹಿಂದೆ ಗ್ರಾಮೀಣ ಭಾಗದಿಂದ ಹಿಡಿದು ನಗರ ಪ್ರದೇಶಗಳಲ್ಲಿ ಬಿದಿರಿನಿಂದ ತಯಾರಿಸಿದ ಪರಿಕರಗಳು ಯಥೇಚ್ಛವಾಗಿ ಕಾಣಸಿಗುತ್ತಿತ್ತು. ಮೊರ, ಕುಕ್ಕೆ, ಚಾಪೆಗಳನ್ನು ಮನೆ-ಮನೆಗೆ ತೆರಳಿ ಮಾರಾಟ ಮಾಡುವ ಮೇದಾರರು ಕಾಣ ಸಿಗುತ್ತಿದ್ದರು. ಈ ಹಿಂದೆ ಬಿದಿರಿನಿಂದ ತಯಾರಿಸಿದ ಪರಿಕರಗಳಿಗೆ ಭಾರೀ ಬೇಡಿಕೆಯೂ ಇತ್ತು. ಆದರೆ, ಇದೀಗ ಬಿದಿರಿನ ಪರಿಕರಗಳು ಯಾರಿಗೂ ಬೇಡವಾಗಿದೆ. ಮದುವೆ ಸಮಾರಂಭದಲ್ಲಿ ಅನ್ನವನ್ನು ಹಾಕಲು ಬಿದಿರಿನ ಕುಕ್ಕೆಗಳನ್ನು ಬಳಸುತ್ತಿದ್ದರು ಹಾಗೂ ಕಾಫಿ ಕೊಯ್ಲು ಸಮಯದಲ್ಲಿ ಬಿದಿರಿನ ಮೊರಕ್ಕೆ ಭಾರೀ ಬೇಡಿಕೆ ಇತ್ತು. ಒಂದೇ ಕಾಫಿ ತೋಟಗಳಿಗೆ 150 ರಿಂದ 200 ಮೊರಗಳನ್ನು ಮಾಲಕರು ಖರೀದಿಸುತ್ತಿದ್ದರು ಎಂದು ಬಸವನಳ್ಳಿಯಲ್ಲಿ ಬಿದಿರಿನ ಪರಿಕರಗಳನ್ನು ತಯಾರಿಸುವ ಶೀಲಾ ಹೇಳುತ್ತಾರೆ.

ಆದರೆ, ಇದೀಗ ಪ್ಲಾಸ್ಟಿಕ್ ಕುಕ್ಕೆಗಳು ಹಾಗೂ ಮೊರಗಳನ್ನು ಬಳಸುತ್ತಿರುವುದರಿಂದ ಬದಿರಿನ ಮೊರ ಹಾಗೂ ಕುಕ್ಕೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪ್ರತೀ ಮನೆಯೊಂದರಲ್ಲಿ ಬಿದಿರಿನ ಕುಕ್ಕೆ ಹಾಗೂ ಮೊರ ಇರುತ್ತಿತ್ತು. ಬಿದಿರಿನ ಮೊರ ಹಾಗೂ ಕುಕ್ಕೆ ಇಲ್ಲದ ಮನೆಯೇ ಇರುತ್ತಿರಲಿಲ್ಲ.

ರಾಗಿ, ಜೋಳ, ಕಾಫಿ, ಕರಿಮೆಣಸು, ಭತ್ತ,ಅಕ್ಕಿ ಹಾಗೂ ಮತ್ತಿತ್ತರ ಧಾನ್ಯಗಳನ್ನು ಸ್ವಚ್ಛಗೊಳಿಸಲು ಬಿದಿರಿನ ಮೊರವನ್ನು ಬಳಸುತ್ತಿದ್ದರು. ಇದೀಗ ಪ್ಲಾಸ್ಟಿಕ್ ಹೊಡತದಿಂದ ಬಿದಿರಿನ ಮೊರಗಳು ಕಣ್ಣಿಗೆ ಕಾಣುವುದೇ ಅಪರೂಪವಾಗಿ ಬಿಟ್ಟಿದೆ.

ಪ್ರವಾಸಿಗರು ಇದ್ದರೆ ಮಾತ್ರ, ವ್ಯಾಪರ, ಗ್ರಾಮೀಣರಿಗೆ ಬೇಡವಾದ ಬಿದಿರಿನ ಪರಿಕರಗಳು: ರಾಜ್ಯ ಹೆದ್ದಾರಿ ಕುಶಾಲನಗರ ಸಮೀಪದ ಬಸವನಳ್ಳಿಯಲ್ಲಿ ಬಿದಿರಿನಿಂದ ತಯಾರಿಸಿರುವ ಪರಿಕರಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ ಕಣ್ಣಿಗೆ ಕಾಣ ಸಿಗುತ್ತದೆ. ವಿವಿಧ ವಿನ್ಯಾಸಗಳಿಂದ ಕೂಡಿರುವ ಬಿದಿರಿನ ತಯಾರಿಸಿರುವ ಕೆಲವೊಂದು ಪರಿಕರಗಳನ್ನು ಅಸ್ಸಾಂ ರಾಜ್ಯದಿಂದ ಆಮದು ಮಾಡಿಕೊಂಡು ಮೇದಾರರು ವ್ಯಾಪರ ನಡೆಸುತ್ತಿದ್ದಾರೆ.

ಆದರೆ, ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚಾಗಿ ಬಳಸುತ್ತಿದ್ದ ಬಿದಿರಿನ ವಸ್ತುಗಳು ಇದೀಗ ಗ್ರಾಮೀಣರಿಗೆ ಬೇಡವಾಗಿದೆ. ಗ್ರಾಮೀಣ ಭಾಗದ ಜನರೇ ಬಿದಿರಿನ ಬಳಕೆಯ ಆಸಕ್ತಿ ಕಳೆದುಕೊಂಡಿದ್ದಾರೆ. ಪ್ರವಾಸಿಗರು ಇದ್ದರೆ ಮಾತ್ರ ಒಂದಷ್ಟು ವ್ಯಾಪಾರ ನಡೆಯುತ್ತದೆ. ಸ್ಥಳೀಯ ಜನರು ಯಾರೂ ಬಿದಿರಿನ ವಸ್ತುಗಳನ್ನು ಖರೀದಿಸುತ್ತಿಲ್ಲ. ಇದೀಗ ಮಳೆಗಾಲ ಬಂದಿದೆ. ಪ್ರವಾಸಿಗರ ಸಂಖ್ಯೆಯೂ ಕಡಿಮೆ ಇರುತ್ತದೆ. ಮೊದಲೆಲ್ಲಾ 10 ರಿಂದ 15 ಸಾವಿರ ರೂ. ವ್ಯಾಪರ ಆಗುತ್ತಿತ್ತು. ಇದೀಗ 2,000 ಸಾವಿರ ರೂ. ಆಗಲ್ಲ. ನಮ್ಮ ಕುಲ ಕಸುಬು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ ಎಂದು ಶೀಲಾ ತಮ್ಮ ನೋವು ತೋಡಿಕೊಂಡರು.

ನಶಿಸುತ್ತಿರುವ ಬಿದಿರು, ಖರೀದಿ ದುಬಾರಿ: ಹಿಂದಿನ ಕಾಲದಲ್ಲಿ ಬಿದಿರಿನ ವಸ್ತುಗಳಿಗೆ ಬೇಡಿಕೆ ಇತ್ತು. ಇದೀಗ ಕಡಿಮೆಯಾಗಿದೆ ಹಾಗೂ ಬಿದಿರಿನ ಪರಿಕರಗಳನ್ನು ತಯಾರಿಸಲು ಬಿದಿರು ಸಿಗುತ್ತಿಲ್ಲ. ಅರಣ್ಯ ಇಲಾಖೆ ವತಿಯಿಂದ ಈ ಹಿಂದೆ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಬಿದಿರುಗಳನ್ನು ಗುಡಿಕೈಗಾರಿಕೆ ಬಳಸುವ ಮೇದಾರರಿಗೆ ನೀಡಲಾಗುತ್ತಿತ್ತು.ಈಗ ಅನೇಕ ಕಾನೂನುಗಳು ಜಾರಿಯಾಗಿ ಮೇದಾರರಿಗೆ ಬಿದಿರು ಸಿಗುತ್ತಿಲ್ಲ.
 
ಕೊಡಗಿನ ಅರಣ್ಯ ಪ್ರದೇಶದಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಬಿದಿರು ಇತ್ತೀಚಿನ ವರ್ಷಗಳಲ್ಲಿ ರೋಗಬಾಧೆ ಹಾಗೂ ಕಾಡ್ಗಿಚ್ಚಿಗೆ ಬಲಿಯಾಗಿ ಕೊಡಗಿನ ಅರಣ್ಯ ಪ್ರದೇಶದ ಬಿದಿರು ನಶಿಸಿ ಹೋಗುತ್ತಿದೆ. ದುಬಾರಿ ವೆಚ್ಚ ನೀಡಿ ಮೇದಾರರು ಜಿಲ್ಲೆಯ ವಿವಿಧ ಎಸ್ಟೇಟ್ಗಳಲ್ಲಿ ಬೆಳೆದಿರುವ ಬಿದಿರುಗಳನ್ನು ಕಡಿದು ತಂದು ಅದನ್ನು ಸೀಳಿ, ಹೆಣೆದು ಕುಕ್ಕೆ, ಮೊರ ಹಾಗೂ ಪರಿಕರಗಳನ್ನು ಮಾಡುತ್ತಿದ್ದಾರೆ. ಒಂದೆಡೆ ಬಿದಿರಿನ ಪರಿಕರಗಳ ಬೇಡಿಕೆ ಕಳೆದುಬಿಟ್ಟಿದೆ. ಮತ್ತೊಂದೆಡೆ ಬಿದಿರಿನ ಪರಿಕರಗಳನ್ನು ತಯಾರಿಸಲು ಬಿದಿರು ಕೂಡ ಸಿಗದೆ, ಮೇದಾರರು ತಮ್ಮ ಕುಲ ಕಸುಬನ್ನು ಬಿಟ್ಟು, ಬೇರೆ ಕೆಲಸದತ್ತ ಮುಖ ಮಾಡಿದ್ದಾರೆ. ಕಾಲಕ್ರಮೇಣವಾಗಿ ಬಿದಿರಿನ ಪರಿಕರಗಳನ್ನು ಅಳಿವಿನತ್ತ ಸಾಗುತ್ತಿದೆ. ಮೇದಾರರ ಬದುಕು ಕೂಡ ಮೂರಾಬಟ್ಟೆಯಾಗಿದೆ. ಬಿದಿರಿನ ವಸ್ತುಗಳನ್ನು ತಯಾರು ಮಾಡಿ ಜೀವನ ನಡೆಸುತ್ತಿದ್ದ ಜಿಲ್ಲೆಯ ಮೇದಾರರ ಕುಟುಂಬಗಳಿಗೆ ಪ್ಲಾಸ್ಟಿಕ್ ವಸ್ತುಗಳೇ ಜೀವನಕ್ಕೆ ಕಂಟಕವಾಗಿ ಕಾಡುತ್ತಿದೆ. ಸರಕಾರ ಕೂಡ ಮೇದಾರರಿಗೆ ಪ್ರೋತ್ಸಾಹ ನೀಡಿ, ಬಿದಿರಿನ ಪರಿಕರಗಳನ್ನು ಸಮಾಜದಲ್ಲಿ ಉಳಿಸುವಂತೆ ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ವೃತ್ತಿ ಬದಲಿಸುತ್ತಿರುವ ಮೇದಾರರು

 ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಬಸವನಳ್ಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮೇದಾರರು ಬಿದಿರಿನ ಪರಿಕರಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೊಡಗಿನ ಬಸವನಳ್ಳಿಯಲ್ಲಿ ಮಾತ್ರ ಅತೀ ಹೆಚ್ಚಾಗಿ ಮೇದಾರರ ಕುಟುಂಬಗಳನ್ನು ಕಾಣಸಿಗುತ್ತದೆ. ಈ ಹಿಂದೆ ಮೂವತ್ತು ಮೇದಾರರ ಕುಟುಂಬಗಳೂ ಬಿದಿರಿನಿಂದ ಪರಿಕರಗಳನ್ನು ತಯಾರಿಸಿ ಮಾರಾಟ ಮಾಡುತ್ತಿತ್ತು. ಆದರೆ, ಇದೀಗ ಬಿದಿರಿನ ಪರಿಕರಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ತಮ್ಮ ಕುಲ ಕಸುಬನ್ನು ಬಿಟ್ಟು ಬೇರೆ ವೃತ್ತಿಯತ್ತ ಮುಖಮಾಡಿದ್ದಾರೆ. ಕೇವಲ 4-5 ಮೇದಾರ ಕುಟುಂಬಗಳು ಮಾತ್ರ ಬಿದಿರಿನಿಂದ ವಸ್ತುಗಳನ್ನು ತಯಾರಿಸಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿದಿರಿನ ವಸ್ತುಗಳು ಯಾರಿಗೂ ಬೇಡವಾಗಿದೆ. ಹಿಂದಿನ ಕಾಲದಲ್ಲಿ ಬಿದಿರಿನ ಪರಿಕರಗಳು ಇಲ್ಲದ ಮನೆ ಇರುತ್ತಿರಲಿಲ್ಲ. ಬಿದಿರಿಗೂ ಬರ ಬಂದಿದೆ. ದುಬಾರಿ ಹಣ ನೀಡಿ ಬಿದಿರು ಕಡಿದು ತರಬೇಕು. ಒಂದು ಕುಕ್ಕೆ ಹಾಗೂ ಮೊರ ಹೆಣೆಯಲು ಕನಿಷ್ಠ 2 ರಿಂದ 3ದಿನ ಬೇಕು. ವೆ ೂದಲು ಕುಕ್ಕೆ ಹಾಗೂ ಮೊರವನ್ನು ಜನರು ಖರೀದಿಸುತ್ತಿದ್ದರು. ಈಗ ಎಲ್ಲರೂ ಪ್ಲಾಸ್ಟಿಕ್ ಕುಕ್ಕೆ,ಮೊರ ಹಾಗೂ ಚಾಪೆಯನ್ನು ಬಳಸುತ್ತಿದ್ದಾರೆ. ಬಿದಿರಿನ ವಸ್ತುಗಳನ್ನು ಖರೀದಿಸಲು ಯಾರೂ ಬರುತ್ತಿಲ್ಲ. ಅಪರೂಪಕ್ಕೆ ಪ್ರವಾಸಿಗರು ಬಂದರೆ ಮಾತ್ರ ವ್ಯಾಪಾರ ನಡೆಯುತ್ತದೆ. ಸ್ಥಳೀಯರು ಬಿದಿರಿನ ವಸ್ತುಗಳನ್ನು ಖರೀದಿಸುವುದೇ ಬಿಟ್ಟಿದ್ದಾರೆ. ಸರಕಾರ ಕೂಡ ನಮಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಬದುಕು ಸಾಗಿಸುವುದೇ ಕಷ್ಟಕರವಾಗಿದೆ.

ಕೃಷ್ಣಮ್ಮ, ಬಸವನಳ್ಳಿಯ ಮೇದಾರ ಮಹಿಳೆ


ಮೊದಲು ರೇಷ್ಮೆ ಬೆಳೆಯುತ್ತಿದ್ದರು. ಆಗ ಬಿದಿರಿನ ತಟ್ಟೆಗಳಿಗೆ ಬಹುಬೇಡಿಕೆಯಿತ್ತು. ಬಿದಿರಿನ ಕೆಲಸಗಳು ಕೂಡ ಜೋರಾಗಿ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಧ್ಯೆ ಬಿದಿರಿನ ಪರಿಕರಗಳು ಯಾರಿಗೂ ಬೇಡವಾಗಿದೆ. ಬಿದಿರು ಕೂಡ ಸರಿಯಾಗಿ ಸಿಗುತ್ತಿಲ್ಲ. ಬಿದಿರು ಸೀಳಿ ಅದನ್ನು ಹೆಣೆದು ಕುಕ್ಕೆ, ತಟ್ಟೆ, ಪಂಜರ, ತಡಪೆ, ಮೊರವನ್ನು ಮಾಡುವುದು ಕಷ್ಟಕರವಾದ ಕೆಲಸ. ಎಲ್ಲರೂ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಬಿದಿರಿನ ವಸ್ತುಗಳನ್ನು ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬಿದಿರಿನ ವಸ್ತುಗಳ ಬಳಕೆಯ ಬಗ್ಗೆ ಯುವಜನರಿಗೆ ಆಸಕ್ತಿ ಮೂಡಿಸಿದರೆ ಮಾತ್ರ, ಬಿದಿರಿನ ಪರಿಕರಗಳು ಮುಂದಿನ ಜನಾಂಗಕ್ಕೆ ಕಾಣಸಿಗಲಿದೆ.

ದೊಡ್ಡಯ್ಯ, ಮೇದಾರ

Similar News