ತಮಿಳುನಾಡು: ದಲಿತರ ಪ್ರವೇಶವನ್ನು ತಡೆದಿದ್ದಕ್ಕಾಗಿ ಒಂದೇ ವಾರದಲ್ಲಿ ಇನ್ನೊಂದು ದೇಗುಲಕ್ಕೆ ಬೀಗಮುದ್ರೆ

Update: 2023-06-09 13:02 GMT

ಚೆನ್ನೈ: ಕರೂರು ಜಿಲ್ಲೆಯ ವೀರಾನಾಂಪಟ್ಟಿಯಲ್ಲಿ ಪ್ರಬಲ ಸಮುದಾಯವಾಗಿರುವ ಉರಾಳಿ ಗೌಂಡರಗಳು ಶ್ರೀ ಕಾಳಿಯಮ್ಮನ್ ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ತಡೆಯೊಡ್ಡಿದ ಬಳಿಕ ಕಂದಾಯ ಇಲಾಖಾ ಅಧಿಕಾರಿಗಳು ದೇವಸ್ಥಾನಕ್ಕೆ ಬೀಗಮುದ್ರೆಯನ್ನು ಜಡಿದಿದ್ದಾರೆ. ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದಾಗಲೇ ಕಂದಾಯ ಜಿಲ್ಲಾಧಿಕಾರಿ ಪುಷ್ಪಾದೇವಿ ಅವರು ಗುರುವಾರ, ಜೂ.8ರಂದು ದೇವಸ್ಥಾನಕ್ಕೆ ಬೀಗಮುದ್ರೆ ಹಾಕಿದ್ದು, ಬಳಿಕ ಉರಾಳಿ ಗೌಂಡರ್ಗಳು ಅವರ ಕಾರನ್ನು ತಡೆದು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದು thenewsminute.com ವರದಿ ಮಾಡಿದೆ. 

ಇದು ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ನಡೆದಿರುವ ಇಂತಹ ಎರಡನೇ ಘಟನೆಯಾಗಿದೆ. ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿ ತಾಲೂಕಿನ ಮೇಲ್ಪತಿ ಗ್ರಾಮದಲ್ಲಿಯ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಬುಧವಾರ ಜಿಲ್ಲಾಡಳಿತವು ಬೀಗಮುದ್ರೆಯನ್ನು ಹಾಕಿತ್ತು. ದೇವಸ್ಥಾನಕ್ಕೆ ದಲಿತರ ಪ್ರವೇಶಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯ ಮತ್ತು ಪ್ರಬಲ ಜಾತಿಯಾಗಿರುವ ವಣ್ಣಿಯಾರ್ಗಳ ನಡುವೆ ನಿರಂತರ ಉದ್ವಿಗ್ನತೆ ಮತ್ತು ವಿಫಲ ಶಾಂತಿ ಮಾತುಕತೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಈ ಕ್ರಮವನ್ನು ತೆಗೆದುಕೊಂಡಿತ್ತು.

ಜೂ.7ರಂದು ಬೆಳಿಗ್ಗೆ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವ ಶ್ರೀ ಕಾಳಿಯಮ್ಮನ್ ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿದ ಬಳಿಕ ವೀರಾನಾಂಪಟ್ಟಿಯಲ್ಲಿ ಉದ್ವಿಗ್ನತೆ ಭುಗಿಲೆದ್ದಿತ್ತು. ಸಮಸ್ಯೆಯು ಬಗೆಹರಿಯುವವರೆಗೆ ದೇವಸ್ಥಾನವನ್ನು ಮುಚ್ಚುವುದಾಗಿ ಉರಾಳಿ ಗೌಂಡರ್ಗಳು ತಿಳಿಸಿದ್ದರು, ಆದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಜೂ.8ರಂದು ಸಂಜೆ ದೇವಸ್ಥಾನದ ರಥೋತ್ಸವವನ್ನು ನಡೆಸಿದ್ದಾರೆ. ದಲಿತರು ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿದಾಗ ಉರಾಳಿ ಗೌಂಡರ್ಗಳು ಅವರ ಪ್ರವೇಶವನ್ನು ವಿರೋಧಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದರು.

ಜೂ.7ರಂದು ತಮಿಳುನಾಡಿನಲ್ಲಿ ಹಿಂದುಳಿದ ಜಾತಿಯಾಗಿರುವ ಉರಾಳಿ ಗೌಂಡರ್ ಸಮುದಾಯದ ಮಾಣಿಕ್ಕಂ ಎಂಬಾತ ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿದ್ದ ಪರೈಯಾರ್ ದಲಿತ ಸಮುದಾಯದ ಶಕ್ತಿವೇಲ್ ಎಂಬಾತನ ಶರ್ಟ್ ಹಿಡಿದು ಎಳೆದೊಯ್ದು ಹೊರಕ್ಕೆ ಹಾಕಿದ್ದ. ಶಕ್ತಿವೇಲ್ ಮಣಿಕ್ಕಂ ವಿರುದ್ಧ ಪೊಲೀಸ್ ದೂರು ಸಲ್ಲಿಸಿರಲಿಲ್ಲ,ಆದರೆ ತನ್ನ ವಿರುದ್ಧ ಜಾತಿ ತಾರತಮ್ಯವೆಸಗಲಾಗಿದೆ ಮತ್ತು ದೇವಸ್ಥಾನದಲ್ಲಿ ದಲಿತರ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರಿಕೊಂಡಿದ್ದ.

ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಅಂದೇ ಸ್ಥಳಕ್ಕೆ ಧಾವಿಸಿ ಶಾಂತಿ ಮಾತುಕತೆಗಳನ್ನು ನಡೆಸಿದ್ದರು. ಅವರು ಗ್ರಾಮವನ್ನು ತಲುಪಿದಾಗ ಉರಾಳಿ ಗೌಂಡರ್ಗಳು ಜಿಲ್ಲಾಡಳಿತವು ದಲಿತರಿಗೆ ಪ್ರವೇಶ ಕಲ್ಪಿಸುವುದನ್ನು ತಡೆಯಲು ದೇವಸ್ಥಾನವನ್ನು ಮುಚ್ಚಿ ಅದರೆದುರು ಜಮಾಯಿಸಿದ್ದರು.

ತಾವು ತಮ್ಮ ಸಮುದಾಯದ ಮನೆಗಳಿಂದ ಹಣವನ್ನು ಸಂಗ್ರಹಿಸಿ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದೇವೆ. ಪರೈಯಾರ್ಗಳು ದೇವಸ್ಥಾನವನ್ನು ಪ್ರವೇಶಿಸಲು ತಾವು ಎಂದೂ ಅವಕಾಶ ನೀಡಿರಲಿಲ್ಲ,ಮುಂದೆಯೂ ಈ ಸಂಪ್ರದಾಯವನ್ನು ಮುಂದುವರಿಸುತ್ತೇವೆ ಎಂದು ಉರಾಳಿ ಗೌಂಡರ್ಗಳು ಶಾಂತಿ ಸಭೆಯಲ್ಲಿ ಹೇಳಿದ್ದರು. ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವನ್ನು ನಿರಾಕರಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಉರಾಳಿ ಗೌಂಡರ್ಗಳಿಗೆ ತಿಳಿಸಿದ್ದ ಅಧಿಕಾರಿಗಳು,ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಸಮಸ್ಯೆಯು ಬಗೆಹರಿಯುವವರೆಗೆ ದೇವಸ್ಥಾನವನ್ನು ಮುಚ್ಚಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು ಹಾಗೂ ದೇವಸ್ಥಾನದ ಹೊರಗಿನಿಂದಲೇ ಪ್ರಾರ್ಥನೆಗಳನ್ನು ಸಲ್ಲಿಸುವಂತೆ ಉಭಯ ಸಮುದಾಯಗಳಿಗೂ ಸೂಚಿಸಲಾಗಿತ್ತು. 

ಉರಾಳಿ ಗೌಂಡರ್ಗಳು ಮರುದಿನವೇ ಈ ನಿರ್ಧಾರವನ್ನು ಉಲ್ಲಂಘಿಸಿ ರಥೋತ್ಸವವನ್ನು ನಡೆಸಿದ್ದರು. ರಥೋತ್ಸವದಲ್ಲಿ ಒಬ್ಬನೇ ಒಬ್ಬ ದಲಿತ ವ್ಯಕ್ತಿಯಿರಲಿಲ್ಲ.

Similar News