Bagalkot | ಮಹಿಳೆಯರಿಗೆ 43.40 ಲಕ್ಷ ರೂ. ವಂಚನೆ ಆರೋಪ: ಇಬ್ಬರ ಬಂಧನ
9 ಜನರ ವಿರುದ್ಧ ಪ್ರಕರಣ ದಾಖಲು
ಬಾಗಲಕೋಟೆ : ಮಹಿಳಾ ಸಂಘಟನೆ ಮೂಲಕ ಆಕರ್ಷಕ ಲಾಭಾಂಶದ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚನೆ ಎಸಗಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬೀಳಗಿ ಪೊಲೀಸರು ಬಂಧಿಸಿದ್ದಾರೆ.
ಬೀಳಗಿ ಪೊಲೀಸ್ ಠಾಣೆಯಲ್ಲಿ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಿಳೆಯರನ್ನು ಸಣ್ಣ-ಸಣ್ಣ ಗುಂಪುಗಳಾಗಿ ಸೇರಿಸಿ, ಮೂರು ವರ್ಷಗಳ ಬಳಿಕ ಹೆಚ್ಚಿನ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ ವಾರ ಹಾಗೂ ತಿಂಗಳ ಕಂತುಗಳ ರೂಪದಲ್ಲಿ ಹಣ ಸಂಗ್ರಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಂಸ್ಥೆಯ ಭರವಸೆಯನ್ನು ನಂಬಿ ಅನೇಕ ಮಹಿಳೆಯರು ತಮ್ಮ ದುಡಿಮೆ ಹಣವನ್ನು ಹೂಡಿಕೆ ಮಾಡಿದ್ದು, ಸಂತ್ರಸ್ತರ ದೂರಿನ ಮೇರೆಗೆ ಪೊಲೀಸರು ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ರಿಜಿಸ್ಟರ್‌ಗಳು, ರಸೀದಿ ಪುಸ್ತಕಗಳು, ಕಂಪ್ಯೂಟರ್‌ಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಹಕಾರ ಸಂಘಗಳ ಜಿಲ್ಲಾ ನಿಬಂಧಕರೂ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇದುವರೆಗೆ ಲಭ್ಯವಾದ ದಾಖಲೆಗಳು ಹಾಗೂ ಸಂತ್ರಸ್ತರ ಹೇಳಿಕೆಗಳ ಆಧಾರದ ಮೇಲೆ ಸುಮಾರು 43.40 ಲಕ್ಷ ರೂ. ವಂಚನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಸಂಸ್ಥೆಯ ಆಡಿಟರ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೆ 8 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ರಚನಾ ಬಂಟನೂರ ಹಾಗೂ ವಿದ್ಯಾಶ್ರೀ ಹಲ್ಲೂರು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಂಚನೆಯಾದ ಒಟ್ಟು ಹಣದ ಪ್ರಮಾಣ, ಇನ್ನಷ್ಟು ಸಂತ್ರಸ್ತರ ಮಾಹಿತಿ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವ ಸಾರ್ವಜನಿಕರು ತಮ್ಮ ಬಳಿ ಇರುವ ರಸೀದಿಗಳು, ಪಾಸ್‌ಬುಕ್, ಠೇವಣಿ ದಾಖಲೆಗಳು ಸೇರಿದಂತೆ ಸಂಬಂಧಿತ ದಾಖಲಾತಿಗಳೊಂದಿಗೆ ಬೀಳಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನಿಖೆಗೆ ಸಹಕರಿಸುವಂತೆ ಕೋರಲಾಗಿದೆ.
ಯಾವುದೇ ಸಂಸ್ಥೆ ಅಥವಾ ಹೂಡಿಕೆ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಅದರ ನೋಂದಣಿ, ಕಾನೂನುಬದ್ಧತೆ ಹಾಗೂ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು. ಅಸಾಮಾನ್ಯ ಅಥವಾ ಖಚಿತ ಹೆಚ್ಚಿನ ಲಾಭದ ಭರವಸೆ ನೀಡುವ ಯೋಜನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮನವಿ ಮಾಡಿದ್ದಾರೆ.