Bagalkote | ಭೂ ಪರಿಹಾರ ನೀಡುವಲ್ಲಿ ವಿಳಂಬ, ಲಂಚ ಕೇಳಿದ ಆರೋಪ; ಸರಕಾರಿ ನೌಕರನಿಗೆ ರೈತನಿಂದ ಚಪ್ಪಲಿ ಏಟು!
ಬಾಗಲಕೋಟೆ/ಬೆಂಗಳೂರು : ಭೂ ಪರಿಹಾರ ನೀಡುವಲ್ಲಿ ವಿಳಂಬ ಹಾಗೂ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿನ ಅಧಿಕಾರಿಯೊಬ್ಬರಿಗೆ ಸಂತ್ರಸ್ತ ರೈತ ಚಪ್ಪಲಿ ಏಟು ನೀಡಿದ ಘಟನೆ ಶನಿವಾರ ನಡೆದಿದೆ.
ಸಂತ್ರಸ್ತ ರೈತ ಬಸಪ್ಪ ಎಂಬಾತನ ಜಮೀನು ಸ್ವಾಧಿನಪಡಿಸಿಕೊಂಡು ಭೂ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದನ್ನು ಕಂಡು ಆಕ್ರೋಶಗೊಂಡಿರುವ ರೈತ ಪದೇ ಪದೇ ಬಿಟಿಡಿಎ ಕಚೇರಿಗೆ ಹೋದರೂ ತನ್ನ ಕೆಲಸ ಆಗದೇ ಇದ್ದಾಗ ಬಿಟಿಡಿಎ ಕಚೇರಿಯ ಪ್ರಥಮ ದರ್ಜೆ ನೌಕರ ಅಂಕದ ಎಂಬಾತನಿಗೆ ಚಪ್ಪಲಿ ಏಟು ಬಿದ್ದಿದ್ದು, ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರೈತ ಬಸಪ್ಪ ಅಧಿಕಾರಿಯ ಬಟ್ಟೆ ಹಿಡಿದು ಕೂಡ ಎಳೆದಾಡಿದ ಘಟನೆ ನಡೆಯುತ್ತಿದ್ದಂತೆ ಅಧಿಕಾರಿ ರೈತನಿಗೆ ಹೆದರಿ ಪಕ್ಕದ ಕೊಠಡಿಗೆ ಹೋದ ಪ್ರಸಂಗ ನಡೆಯಿತು.
ಈ ಕುರಿತು ಸಮಸ್ಯೆ ಆಲಿಸಿದ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಕಚೇರಿಗೆ ಬರುವ ಸಂತ್ರಸ್ತರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು.ಸಮಸ್ಯೆಗೆ ಪರಿಹಾರ ಸಿಗದೇ ಇದ್ದಾಗ ಅದಕ್ಕೆ ಅಧಿಕಾರಿಗಳು ಹಿಂಬರಹ ಕೂಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುವುದು ಎಂದು ದಲಿತ ಸಂಘಟನೆಗಳ ಮುಖಂಡರಿಗೆ ಸಮಾಧನಪಡಿಸಿ ಕಳುಹಿಸಿ, ಗದ್ದಲವನ್ನು ತಿಳಿಗೊಳಿಸಿದರು.