Bagalkot | ಕ್ರಿಕೆಟ್ ಆಡುವಾಗ ವೃದ್ದೆಗೆ ಚೆಂಡು ತಾಗಿದ್ದಕ್ಕೆ ಬಾಲಕರನ್ನು ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ; ಆರೋಪ
Photo credit: indiatoday.in
ಬಾಗಲಕೋಟೆ: ಬಾಲಕರು ಕ್ರಿಕೆಟ್ ಆಡುವಾಗ ವೃದ್ದೆಗೆ ಚೆಂಡು ತಾಗಿದ್ದಕ್ಕೆ ಇಬ್ಬರು ಬಾಲಕರನ್ನು ಕಿಟಕಿಗೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ನರೆನೂರ ತಾಂಡದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಕ್ರಿಕೆಟ್ ಆಟವಾಡುತ್ತಿದ್ದಾಗ ಚೆಂಡು ವೃದ್ಧೆಯೊಬ್ಬರಿಗೆ ತಗುಲಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕುಟುಂಬಸ್ಥರು ಬಾಲಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯ ಕಿಟಕಿಗೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಒರ್ವ ಬಾಲಕನನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಕುರಿತು ಬಾಲಕನ ಪೋಷಕರು ಹಾಗೂ ಸಂಬಂಧಿಕರು ತಕ್ಷಣ ಸಮಗ್ರ ತನಿಖೆ ನಡೆಸಿ, ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಕೆರೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಪ್ರಕರಣ ಸಂಭಂದಪಟ್ಟಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.