BAGALAKOTE | ಗೆಳೆಯನಿಗೆ ಮದ್ಯಪಾನ ಮಾಡಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ
ಕೊಲೆಯಾದ ಸೋಮಶೇಖರ್
ಬಾಗಲಕೋಟೆ: ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಸ್ನೇಹಿತನನ್ನೇ ಯುವಕನೋರ್ವ ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಘಟನೆ ಬಾದಾಮಿ ತಾಲೂಕಿನ ಕಾಕನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಖಾನಾಪುರ ಎಸ್.ಕೆ. ಗ್ರಾಮದ ನಿವಾಸಿ ಸೋಮಶೇಖರ್ ಹನುಮಂತ ಕಿಳ್ಳಿಕ್ಯಾತರ (42) ಕೊಲೆಯಾದ ವ್ಯಕ್ತಿ. ಈತನ ಗೆಳೆಯ ಕಾಕನೂರು ನಿವಾಸಿ ಸಂಜಯ್ ಕಿಳ್ಳಿಕ್ಯಾತರ ಕೊಲೆ ಆರೋಪಿಯಾಗಿದ್ದಾನೆ.
ಸೋಮಶೇಖರ್ ತನ್ನ ಪತ್ನಿ ಜೊತೆ ಸಲುಗೆ ಹೊಂದಿದ್ದಾನೆ ಎಂದು ಶಂಕಿಸಿ ಆರೋಪಿ ಸಂಜಯ್ ಈ ಕೃತ್ಯ ಎಸಗಿದ್ದಾನೆನ್ನಲಾಗಿದೆ.
ಸೋಮಶೇಖರ್ ರನ್ನು ರವಿವಾರ ಅಪರಾಹ್ನ ಕಾಕನೂರು ಗ್ರಾಮದ ಹೊರವಲಯದಲ್ಲಿರುವ ಮಾವಿನ ತೋಟಕ್ಕೆ ಕರೆದೊಯ್ದ ಸಂಜಯ್ ಮದ್ಯಪಾನ ಮಾಡಿಸಿದ್ದಾನೆ. ಬಳಿಕ ಸೋಮಶೇಖರ್ ರ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ರವಿವಾರದಿಂದ ಸೋಮಶೇಖರ್ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಬಾದಾಮಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಆರೋಪಿ ಸಂಜಯ್ ನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.