Bagalkote| ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣ: 700 ರೈತರ ಮೇಲೆ ಎಫ್ಐಆರ್
ಬಾಗಲಕೋಟೆ: ಸೈದಾಪೂರದ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನ.13ರಂದು ಕಬ್ಬು ತುಂಬಿದ್ದ ಟ್ರಾಕ್ಟರ್ ಟ್ರೇಲರ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 17 ಜನ ರೈತರ ಮುಖಂಡರು ಸೇರಿದಂತೆ 700 ರೈತರ ಮೇಲೆ ಪ್ರಕರಣ ದಾಖಲಾಗಿದೆ.
ಮಹಾಲಿಂಗಪುರ ಪೋಲಿಸ್ ಠಾಣೆ ಸಿ. ಆರ್ ನಂಬರ್ 75/2025 ರಲ್ಲಿ ಪಿ.ಎಸ್. ಐ ( ಕಾ.ಸು ) ತೇರದಾಳ ನೀಡಿರು ದೂರಿನಲ್ಲಿ 17 ಮಂದಿ ರೈತ ಮುಖಂಡರು ಸೇರಿದಂತೆ 700 ಮಂದಿ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ತೋರಾಟ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿದ್ದಾರೆ.
ಸ್ಥಳದಲ್ಲಿ ಇಲ್ಲದಿದ್ದರೂ ಪ್ರಕರಣ ದಾಖಲು: ಆರೋಪ
ಈ ಪ್ರಕರಣದಲ್ಲಿ 17ನೇ ಆರೋಪಿಯನ್ನಾಗಿ ರೈತ ಮುಖಂಡ ಗಂಗಾಧರ ಮೇಟಿ ಹೆಸರಿದೆ. ಕಳೆದೊಂದು ವಾರದಿಂದ ತಾನು ಕುಟುಂಬ ಸಮೇತ ದಿಲ್ಲಿ ಪ್ರವಾಸದಲ್ಲಿದ್ದು, ತನ್ನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಗಂಗಾಧರ ಮೇಟಿ ದೂರಿದ್ದಾರೆ.
ಮುಧೋಳದಲ್ಲಿ ನಡೆದ ಕಬ್ಬು ಬೆಳೆಗಾರರ ಚಳುವಳಿಯಲ್ಲಿ ತಾನು ಒಂದು ದಿನವು ಭಾಗವಹಿಸಲಿಲ್ಲ. ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದಿದ್ದರೂ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಗಂಗಾಧರ ಮೇಟಿ ಆರೋಪಿಸಿದ್ದಾರೆ.
ಸದ್ಯ ದಿಲ್ಲಿ ಪ್ರವಾಸದಲ್ಲಿರುವ ಅವರು, ಇಂಡಿಯಾ ಗೇಟ್ ಬಳಿಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.