×
Ad

ಮುಂಗಾರು ಅಧಿವೇಶನ | ಸರಕು ಸೇವೆಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ

Update: 2025-08-14 21:41 IST

ಬೆಂಗಳೂರು, ಆ.14: ಅಡಿಕೆ ಖರೀದಿಯಲ್ಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನೆ ಆಗದಂತೆ ಸೇರಿದಂತೆ ಇನ್ನಿತರ ಉದ್ದೇಶ ಹೊಂದಿರುವ ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.

ಗುರುವಾರ ವಿಧಾನಸಭೆಯಲ್ಲಿ ವಿಧೇಯಕ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಿವರಣೆ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ತಂಬಾಕು, ಅಡಿಕೆ ಆಧಾರಿತ ಪದಾರ್ಥಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆ ಆಗುತ್ತಿದೆ. ಉದಾಹರಣೆಗೆ ಪಾನ್ ಮಸಾಲ, ಗುಟ್ಕಾ ಮಾರಾಟ ಆಗುತ್ತಿರುವ ಪ್ರಮಾಣಕ್ಕೂ, ನಮಗೆ ಲೆಕ್ಕ ಹೇಳುತ್ತಿರುವ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇವರನ್ನು ಹುಡುಕುವುದು ಸಾಧ್ಯವೇ ಇಲ್ಲ ಎಂದರು.

ಉದಾಹರಣೆಗೆ ಶಿರಸಿ, ಹೊನ್ನಾಳಿ, ದಾವಣಗೆರೆಯಿಂದ ನೂರಾರು ಲೋಡ್ ಅಡಿಕೆ ಹೋಗುತ್ತದೆ. ಆದರೆ ಮಾರಾಟಕ್ಕೂ ಇದಕ್ಕೂ ತಾಳೆನೇ ಆಗಲ್ಲ. ಅಡಿಕೆ ಲೋಡ್‍ಗಳು ಕರ್ನಾಟಕದಿಂದ, ಆಂಧ್ರ ಅಲ್ಲಿಂದ ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶದ ಗಡಿ ದಾಟಿ ಉತ್ತರ ಪ್ರದೇಶಕ್ಕೆ ತಲುಪುತ್ತದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ.ಹೀಗಾಗಿ ಜಿಎಸ್ಟಿ ಮೂಲಕವೇ ಇದಕ್ಕೆ ಕಡಿವಾಣ ಹಾಕಲು ಟ್ರ್ಯಾಕ್ ಅಂಡ್ ಟ್ರೇಸ್ ನಿಯಮ ಜಾರಿಗೆ ತರಬೇಕಿದೆ ಎಂದು ವಿವರಿಸಿದರು.

ದೇಶದ ಎಲ್ಲ ರಾಜ್ಯಗಳೂ ಈ ನಿಯಮವನ್ನು ಪಾಲಿಸಬೇಕಿದೆ. ಮುಂದಿನ ವಾರ ಜಿಎಸ್ಟಿ ಸಭೆ ಇರುವ ಕಾರಣ ಈ ತಿದ್ದುಪಡಿ ಇಲ್ಲದೆ ಅಲ್ಲಿಗೆ ಹೋಗುವುದು ಸರಿಯಲ್ಲ. ಅದೇ ಕಾರಣಕ್ಕೆ 2025ನೆ ಸಾಲಿನ ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗುತ್ತಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಆನಂತರ, ವಿಪಕ್ಷಗಳ ಸದಸ್ಯರ ಸಲಹೆ, ಚರ್ಚೆ ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು, ಧ್ವನಿಮತದ ಮೂಲಕ ಈ ವಿಧೇಯಕ ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News