×
Ad

ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿಗಳ ಪರ ವಕೀಲರಿಂದ ರತ್ನಪ್ರಭಾ ಪಾಟಿ ಸವಾಲು

Update: 2025-12-18 22:37 IST

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಪವಿತ್ರಾ ಗೌಡ ಸೇರಿ ಒಟ್ಟು 12 ಮಂದಿ ಆರೋಪಿಗಳ ಪರ ವಕೀಲರು ಗುರುವಾರ ಪೂರ್ಣಗೊಳಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ವಿಚಾರಣೆಯನ್ನು (ಟ್ರಯಲ್) ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನ್ಯಾಯಾಧೀಶ ಐ.ಪಿ. ನಾಯ್ಕ್‌ ಅವರು ಗುರುವಾರ ಮುಂದುವರಿಸಿದರು.

ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಒಟ್ಟು 12 ಮಂದಿ ಆರೋಪಿಗಳು ಪೂರ್ಣಗೊಳಿಸಿದರು. ನಂತರ ಪವಿತ್ರಾಗೌಡ ಪರ ವಕೀಲ ಬಾಲನ್‌, ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಅವರ ಪಾಟಿ ಸವಾಲು ನಡೆಸಿದರು. ಅದು ಅಪೂರ್ಣಗೊಂಡಿದ್ದು, ಕಾಲಾವಕಾಶದ ಕೊರತೆಯಿಂದ ನ್ಯಾಯಾಧೀಶರು ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಿದರು.

ಬುಧವಾರ ರೇಣುಕಾಸ್ವಾಮಿಯ ತಾಯಿ ರತ್ನಪ್ರಭಾ ಮತ್ತು ತಂದೆ ಕಾಶಿನಾಥಯ್ಯ ಅವರು ತಮ್ಮ ಸಾಕ್ಷ್ಯ ದಾಖಲಿಸಿದ್ದರು. ನಂತರ ಪವಿತ್ರಾಗೌಡ ಪರ ವಕೀಲ ಬಾಲನ್‌, ರತ್ನಪ್ರಭಾ ಅವರ ಪಾಟಿ ಸವಾಲು ನಡೆಸಿದ್ದರು. ಆ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು. ಗುರುವಾರ ರತ್ನಪ್ರಭಾ ಮತ್ತು ಕಾಶಿನಾಥಯ್ಯ ವಿಚಾರಣೆಗೆ ಹಾಜರಾಗಿದ್ದರು.

ಮಧ್ಯಾಹ್ನ 12.40ಕ್ಕೆ ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಬಾಲನ್‌ ಮುಂದುವರಿಸಿದರು. ಅವರು ಕೇಳಿದ ಹಲವು ಪ್ರಶ್ನೆಗಳಿಗೆ ರತ್ನಪ್ರಭಾ ಉತ್ತರಿಸಿದ ನಂತರ ತಮ್ಮ ಪಾಟಿ ಸವಾಲು ಮುಕ್ತಾಯವಾಗಿದೆ ಎಂದು ಬಾಲನ್‌ ತಿಳಿಸಿದರು. ಆನಂತರ ಆರೋಪಿಗಳಾದ ಪವನ್‌, ಎನ್‌.ರಾಘವೇಂದ್ರ, ಜಗದೀಶ್‌, ಅನುಕುಮಾರ್‌, ರವಿಶಂಕರ್‌, ಧನರಾಜ್‌, ಕಾರ್ತಿಕ್‌, ಕೇಶವಮೂರ್ತಿ ಮತ್ತು ನಿಖಿಲ್‌ ಪರ ವಕೀಲರು ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು. ಅದೇ ಪಾಟಿ ಸವಾಲನ್ನು ತಾವೂ ಸಹ ಅಳವಡಿಸಿಕೊಂಡಿರುವುದಾಗಿ ಆರೋಪಿ ನಂದೀಶ್‌ ಮತ್ತು ವಿನಯ್‌ ಪರ ವಕೀಲರು ತಿಳಿಸಿದರು.

ಇದಾದ ನಂತರ ನಟಿ ಪವಿತ್ರಾ ಗೌಡ ಪರ ವಕೀಲರು, ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಅವರ ಪಾಟಿ ಸವಾಲು ನಡೆಸಿದರು. ಆ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಿತು.

ಜೆಸಿ ವಿಸ್ತರಣೆ:

ನಟ ದರ್ಶನ್‌, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜಾಮೀನಿನ ಮೇಲಿರುವ ಎಲ್ಲ ಆರೋಪಿಗಳು ಖುದ್ದು ಹಾಜರಾಗಿದ್ದರು. ಗುರುವಾರ ವಿಚಾರಣೆ ಮುಕ್ತಾಯಗೊಂಡ ನಂತರ ದರ್ಶನ್‌ ಹಾಗೂ ಇತರ 6 ಆರೋಪಿಗಳ ನ್ಯಾಯಾಂಗ ಬಂಧನದ (ಜೆಸಿ) ಅವಧಿಯನ್ನು ಡಿಸೆಂಬರ್ 29ರವರೆಗೆ ನ್ಯಾಯಾಲಯ ವಿಸ್ತರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News