Bengaluru | ಅಪಾರ್ಟ್‍ಮೆಂಟ್ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು
ಸಾಂದರ್ಭಿಕ ಚಿತ್ರ
ಬೆಂಗಳೂರು : ಮಂಗಳವಾರ ತಡರಾತ್ರಿ ಇಲ್ಲಿನ ದೊಮ್ಮಸಂದ್ರ ಸಮೀಪದ ವರ್ತೂರು ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ನಲ್ಲಂಪಲ್ಲಿ ಗ್ರಾಮದ ನಿವಾಸಿ ಚಿದಂಬರಂ(45) ಮೃತ ಕಾರ್ಮಿಕನಾಗಿದ್ದು, ಘಟನೆ ನಡೆದು ಒಂದು ದಿನ ಕಳೆದರೂ ಅಪಾರ್ಟ್‍ಮೆಂಟ್‍ಗೆ ಸಂಬಂಧಪಟ್ಟವರು ಈವರೆಗೂ ಕಾರ್ಮಿಕನ ಕುಟುಂಬದ ನೆರವಿಗೆ ಆಗಮಿಸಿಲ್ಲ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾರ್ಟ್‍ಮೆಂಟ್‍ನ ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ, ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ, ಏಕಾಏಕಿ ಮಣ್ಣು ಕುಸಿದು ಚಿದಂಬರಂ ಮೇಲೆ ಬಿದ್ದಿದೆ. ಪರಿಣಾಮ ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಮಣ್ಣಿನಡಿ ಹೂತುಹೋಗಿದ್ದ ಕಾರ್ಮಿಕನ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.