×
Ad

ಕನ್ನಡ ಸಾಹಿತ್ಯ ಸೃಷ್ಠಿ ಕ್ರಿಯೆಯಲ್ಲೇ ಬಹುತ್ವವಿದೆ : ಲೇಖಕ ಡಾ.ರಹಮತ್ ತರೀಕೆರೆ

Update: 2025-08-17 21:50 IST

ಬೆಂಗಳೂರು, ಆ.17: ಕನ್ನಡ ಸಾಹಿತ್ಯದ ಸೃಷ್ಠಿ ಕ್ರಿಯೆಯಲ್ಲಿ, ಚಳವಳಿಯಲ್ಲಿ ಬಹುತ್ವವಿದೆ. ಇವತ್ತು ನಡೆಯುತ್ತಿರುವ ಮೀಸಲಾತಿ ವಿಷಯಗಳಲ್ಲಿ ಸೈದ್ಧಾಂತಿಕ ಭಿನ್ನಮತ, ಸಾಮಾಜಿಕ ಹಿನ್ನೆಲೆಯ ಭಿನ್ನಮತ ಇರುವ ದಲಿತ ನಾಯಕರಿಗೆ ಒಂದಾಗಿ ಸಾಗುವ ಮಾತು ನಿನ್ನೆ ಮೊನ್ನೆಯಿಂದ ಬರುತ್ತಿಲ್ಲ. ಅದು ಚಳವಳಿಗಳ, ಸಿದ್ಧಾಂತಗಳ ಬಹುತ್ವವೇ ಎಂದು ಹಿರಿಯ ಲೇಖಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದಲ್ಲಿ ಬಹುತ್ವ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ಡಾ.ರಹಮತ್ ತರೀಕೆರೆ ಅವರ ‘ಬಹುತ್ವ ಕರ್ನಾಟಕ’ ಪುಸ್ತಕದ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಬಹುತ್ವವನ್ನು ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂಬ ಎಚ್ಚರ ನನಗೆ ಇತ್ತು. ಕರ್ನಾಟಕದ ಅನುಭವದಲ್ಲಿ ಎಷ್ಟೊಂದು ಕ್ಷೇತ್ರಗಳಲ್ಲಿ ಬಹುತ್ವ ಬದುಕಿದೆ. ಅನ್ವಯಗೊಂಡಿದೆ ಎಂದು ತಿಳಿಸಿದರು.

ಮತೀಯವಾದ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಮಾತ್ರ ತೊಂದರೆಯಾಗದೇ, ನಿಜವಾಗಲೂ ಭಾರತದ ಸಮಾಜಕ್ಕೆ, ಆರ್ಥಿಕತೆಗೆ, ರಾಜಕೀಯಕ್ಕೆ ಸೇರಿ ಎಲ್ಲದಕ್ಕೂ ಮತೀಯವಾದ ಎಷ್ಟು ಅಪಾಯಕಾರಿ ಎನ್ನುವುದನ್ನು ಮನಗಾಣುತ್ತಾ ಹೋದರೆ, ಬಹುತ್ವ ಚಿಂತನೆ ಕೇವಲ ಸಮುದಾಯಗಳ ಧಾರ್ಮಿಕ ಸಂಬಂಧಗಳಿಗೆ ಮಾತ್ರ ಸೀಮಿತವಾಗಲ್ಲ ಎಂದು ಅಭಿಪ್ರಾಯಪಟ್ಟರು.

ಬಹುತ್ವ ಕರ್ನಾಟಕ ಪುಸ್ತಕವನ್ನು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಕಟಿಸಬೇಕು ಎಂದುಕೊಂಡಿದ್ದೆ, ಅದು ಆಗಲಿಲ್ಲ. ಆರೆಸ್ಸೆಸ್‍ಗೆ ನೂರು ವರ್ಷ ತುಂಬಿ ಶತಮಾನೋತ್ಸವ ಮಾಡುತ್ತಿದೆ ‘ಬಹುತ್ವ ಕರ್ನಾಟಕ’ ಪುಸ್ತಕ ಅದಕ್ಕೆ ಕಾಣಿಕೆಯಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಬಹುತ್ವ ಕರ್ನಾಟಕ’ ಪುಸ್ತಕದ ಕುರಿತು ಕರ್ನಾಟಕದ ಬೇರೆ ಬೇರೆ ಸಣ್ಣ ಊರುಗಳಲ್ಲಿ ಪುಸ್ತಕದ ಬಗ್ಗೆ ಚರ್ಚೆ ಮಾಡಲಾಗಿರುವುದು ಈ ಸಂದರ್ಭಕ್ಕೆ ಬೇಕಾಗಿದ್ದ ಪ್ರತಿಕ್ರಿಯೆ ಎನಿಸುತ್ತದೆ. ಕರ್ನಾಟಕವನ್ನು ನಾನು ತಿರುಗಾಟ ಮಾಡಿರುವುದು ಹಾಗೂ ಅದರ ಅನುಭವ ಪಡೆದಿರುವುದು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ, ಯಾವತ್ತಾದರೂ ‘ರಾತ್ರಿ ಕರ್ನಾಟಕ’ ಎಂಬ ಪುಸ್ತಕ ಬರೆಯಬಹುದು ಎಂದರು.

ಸೂಫಿ, ನಾಥ, ಗುರು ಪರಂಪರೆ ಮತ್ತು ಮೊಹರಂ ಆಚರಣೆಗಳು ನಡೆಯುವುದು ಬೆಳಗಿನ ಜಾವ ಅಥವಾ ಮಧ್ಯ ರಾತ್ರಿಯಲ್ಲೇ, ರಾತ್ರಿ ಎನ್ನುವುದನ್ನು ನೆಗೆಟಿವ್ ಆಗಿ ಬಳಸಲಾಗುತ್ತಿದೆ. ಬೆಳಕನ್ನು ಪಾಸಿಟಿವ್ ಆಗಿ ಬಳಸಲಾಗುತ್ತಿದೆ. ಸಾಂಸ್ಕೃತಿಕವಾಗಿ ರಾತ್ರಿಯೇ ಬಹಳ ಶ್ರೇಷ್ಠವಾದದ್ದು, ಅದರಲ್ಲೂ ಗ್ರಾಮೀಣ, ರೈತಾಪಿ ಜನರ ಕ್ರಿಯಾಶೀಲತೆ, ಧಾರ್ಮಿಕ ಭಾವನೆಗಳ ಕಥೆ ಕಾವ್ಯ ಹೇಳುವುದು ರಾತ್ರಿ ಹೊತ್ತಿನಲ್ಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಜಾನಕಿ ನಾಯರ್, ವಿದ್ಯಾರ್ಥಿ ಹೋರಾಟಗಾರ ಮುಹಮ್ಮದ್ ಪೀರ್ ಲಟಗೇರಿ, ಯುವ ಕವಿ ಭರತ್‍ರಾಜ್, ವಕೀಲೆ ಪೂರ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News