×
Ad

ಬೆಂಗಳೂರು | ಯುವತಿ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನ

Update: 2025-08-31 20:54 IST

ಬೆಂಗಳೂರು, ಆ.31: ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವತಿ ಮೇಲೆ ಅತ್ಯಾಚಾರವೆಸಗಿ ವಿಡಿಯೊ ರೆಕಾರ್ಡ್ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಸವೇಶ್ವರನಗರ ನಿವಾಸಿ ನಿರಂಜನ್(30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿ ನಿರಂಜನ್ ಮೊಬೈಲ್‍ನಲ್ಲಿದ್ದ ಖಾಸಗಿ ವಿಡಿಯೊ ನೋಡಿದ್ದ ಅವರ ತಂದೆ ರಾಜಶೇಖರ್ ಎಂಬಾತನು ಕೂಡ ದೂರವಾಣಿ ಕರೆ ಮಾಡಿ ದೈಹಿಕ ಸಂಪರ್ಕ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದು, ಈ ಸಂಬಂಧ ರಾಜಶೇಖರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಫೇಸ್‍ಬುಕ್ ಮೂಲಕ ಯುವತಿ ಹಾಗೂ ನಿರಂಜನ್ ನಡುವೆ ಸ್ನೇಹ ಬೆಳೆದು ಪರಸ್ಪರ ಆತ್ಮೀಯರಾಗಿದ್ದರು. 2025ರ ಎಪ್ರಿಲ್‍ನಲ್ಲಿ ಸಂತ್ರಸ್ತೆ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ ನಿರಂಜನ್, ಒಟ್ಟಿಗೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದ. ಜತೆಗೆ, ಸಂತ್ರಸ್ತೆಯ ದ್ವಿಚಕ್ರ ವಾಹನಕ್ಕೆ ಜಿಪಿಎಸ್ ಚಿಪ್ ಅಳವಡಿಸಿ ಆಕೆಯ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದ ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ನಿರಂಜನ್ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದರು. ಈ ವೇಳೆ ಠಾಣೆಗೆ ಆಗಮಿಸಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದ. ಇದಕ್ಕೆ ಸಂತ್ರಸ್ತೆಯೂ ಒಪ್ಪಿಕೊಂಡಿದ್ದರು. ಇದಾದ ಬಳಿಕವೂ ಖಾಸಗಿ ವೀಡಿಯೊ ಮುಂದಿಟ್ಟು ನಿರಂಜನ್ ಬೆದರಿಕೆ ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News