×
Ad

ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ ಶೂದ್ರ ಶ್ರೀನಿವಾಸ್, ಜನಾರ್ಧನ(ಜನ್ನಿ) ಆಯ್ಕೆ

Update: 2025-09-06 20:20 IST

ಶೂದ್ರ ಶ್ರೀನಿವಾಸ್, ಜನಾರ್ಧನ(ಜನ್ನಿ) 

ಬೆಂಗಳೂರು, ಸೆ.6: ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ 2024ನೇ ಸಾಲಿಗೆ ಜನಪದ ಗಾಯಕ ಎಚ್.ಜನಾರ್ಧನ್ (ಜನ್ನಿ) ಮತ್ತು 2025ನೇ ಸಾಲಿಗೆ ಚಿಂತಕ ಶೂದ್ರ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಶನಿವಾರ ಪ್ರಕಟನೆ ನೀಡಿರುವ ಅವರು, ಡಾ.ಸಿದ್ದಲಿಂಗಯ್ಯ ಅವರ ತಾತ್ವಿಕತೆಯನ್ನು ಸಮರ್ಥವಾಗಿ ವಿವಿಧ ಮಾಧ್ಯಮಗಳ ಮೂಲಕ ಸಮರ್ಥವಾಗಿ ಬಿಂಬಿಸುತ್ತಿರುವ ಸಾಧಕರಿಗೆ ಈ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರವನ್ನು ನೀಡಲಾಗುತ್ತದೆ. 2024ನೇ ಸಾಲಿನ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ’ ಪುರಸ್ಕಾರಕ್ಕೆ ಪಾತ್ರರಾಗಿರುವ ಎಚ್.ಜನಾರ್ಧನ (ಜನ್ನಿ)ಯವರು ಸುಮಾರು ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಅವರು, ಬೀದಿ ನಾಟಕ ಚಳವಳಿಯಲ್ಲಿ, ಕಾವ್ಯರಂಗ ಪ್ರಯೋಗದಲ್ಲಿ ತಮ್ಮ ವಿಶಿಷ್ಟತೆಯನ್ನು ಮರೆದಿದ್ದಾರೆ ಎಂದು ತಿಳಿಸಿದ್ದಾರೆ.

2025ನೇ ಸಾಲಿನ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ’ ಪುರಸ್ಕಾರಕ್ಕೆ ಪಾತ್ರರಾಗಿರುವ ಶೂದ್ರ ಶ್ರೀನಿವಾಸ್ ‘ಶೂದ್ರ’ ಸಾಹಿತ್ಯ ಪತ್ರಿಕೆಯ ಮೂಲಕ ಜನಪ್ರಿಯರಾದವರು. ಸಂವೇದನಾಶೀಲ ಬರಹಗಾರರಾದ ಅವರು ನಿರಂತರ ಹೋರಾಟಗಾರರು. ಶೂದ್ರ, ಸಲ್ಲಾಪ, ನೆಲದ ಮಾತು ಪತ್ರಿಕೆಗಳನ್ನು ಪ್ರಕಟಿಸಿದ ಹೆಗ್ಗಳಿಕೆಯ ಅವರು ಕರ್ನಾಟಕದ ಪ್ರಮುಖ ಚಳವಳಿಗಳ ಜೊತೆಗೆ ಸದಾ ಇದ್ದವರು.

ಮಾನವ ಸಂಬಂಧಗಳ ವೃದ್ಧಿಗಾಗಿ ‘ಬೋಧಿವೃಕ್ಷ’ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಹಲವು ಪ್ರಮುಖ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಲಂಕೇಶ್ ಪತ್ರಿಕೆಯ ಅಂಕಣಕಾರರಾಗಿ ಹೆಸರು ಮಾಡಿರುವ ಅವರು ಡಾ.ಸಿದ್ದಲಿಂಗಯ್ಯನವರ ಮೊದಲ ಕೃತಿ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಸೆ.18ರಂದು ಬೆಳಗ್ಗೆ 11:30ಕ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News