×
Ad

ಗೌರಿ ಲಂಕೇಶ್‌ರ ಆದರ್ಶಗಳು ಎಂದಿಗೂ ಜೀವಂತ : ಬಿ.ಟಿ.ಲಲಿತಾ ನಾಯ್ಕ್

Update: 2025-09-06 21:42 IST

ಬೆಂಗಳೂರು, ಸೆ.6: ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರು ಯಾವುದೇ ಪ್ರಭಾವಕ್ಕೆ, ಯಾರೊಬ್ಬರ ಹಂಗಿಗೂ ಒಳಗಾಗದೆ, ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಹೀಗಾಗಿ ಇಂದು ನಾವೆಲ್ಲರೂ ಗೌರಿ ಅವರ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್ ಕರೆ ನೀಡಿದ್ದಾರೆ.

ಶನಿವಾರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಗೌರಿ ಲಂಕೇಶ್‍ರ ಪುಣ್ಯಸ್ಮರಣೆಯ ಅಂಗವಾಗಿ ಅವರ ಸಮಾಧಿ ಬಳಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ‘ಗೌರಿ ನುಡಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೌರಿ ಅವರು ಸತ್ಯ ಮತ್ತು ನ್ಯಾಯಕ್ಕಾಗಿ ಗುಂಡೇಟಿಗೆ ಬಲಿಯಾದರೂ, ಅವರ ಹೋರಾಟ ಮತ್ತು ಆದರ್ಶಗಳು ಎಂದಿಗೂ ಜೀವಂತವಾಗಿವೆ ಎಂದು ಹೇಳಿದರು.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮೃತಪಟ್ಟರೆ, ಅವರನ್ನು ಸ್ಮರಿಸಲು ಕೇವಲ ಕಲ್ಲಿನ ಸಮಾಧಿಗಳು ಮಾತ್ರ ಉಳಿಯುತ್ತವೆ. ಆದರೆ, ಗೌರಿ ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾರೆ. ಇದಕ್ಕೆ ಕಾರಣ, ಅವರು ನಂಬಿದ ಸಿದ್ಧಾಂತಕ್ಕೆ, ತತ್ವಕ್ಕೆ ಕೊನೆಯವರೆಗೂ ಅಂಟಿಕೊಂಡಿದ್ದ ಬದ್ಧತೆ, ಸತ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಾದ ಅವರ ಧೈರ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದರು.

ಗೌರಿ ಅವರ ಜೊತೆ ಜನರು ಇದ್ದರು, ಅವರ ನಂತರದ ಪೀಳಿಗೆಯೂ ಇದೆ. ಅವರು ಕೇವಲ ಪತ್ರಕರ್ತೆಯಾಗಿರಲಿಲ್ಲ, ಬದಲಿಗೆ ಸತ್ಯ ಪ್ರತಿಪಾದಕಿಯಾಗಿ, ಬಂಡಾಯದ ಪ್ರತೀಕವಾಗಿ ಘಮಘಮಿಸುತ್ತಲೇ ಇರುತ್ತಿದ್ದರು. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅನಾಹುತಗಳನ್ನು ಪ್ರಶ್ನಿಸಲು, ಸತ್ಯವನ್ನು ನಿರ್ಭೀತಿಯಿಂದ ಹೊರತರಲು ಗೌರಿ ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಲಲಿತಾ ನಾಯ್ಕ್ ಹೇಳಿದರು.

ನಮ್ಮ ಎದೆಗೆ ಗುಂಡೇಟು ಬಿದ್ದರೂ ಚಿಂತೆಯಿಲ್ಲ ಎಂಬ ರೀತಿಯಲ್ಲಿ ಸತ್ಯಶೋಧಕರಾಗಿ ಮುನ್ನಡೆಯಬೇಕು. ಇದನ್ನೇ ಸಂದೇಶವಾಗಿ ಅವರು ನಮಗೆ ನೀಡಿದ್ದಾರೆ. ನಾವು ಈ ಸಂದೇಶಕ್ಕೆ ಬದ್ಧರಾಗಿರೋಣ. ಗೌರಿ ಲಂಕೇಶ್‍ರ ಆದರ್ಶಗಳಿಗೆ ಬದ್ಧರಾಗಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಲಲಿತಾ ನಾಯ್ಕ್ ಸ್ಮರಿಸಿದರು.

ಈ ವೇಳೆಯಲ್ಲಿ ಹಿರಿಯ ಪತ್ರಕರ್ತೆ ಡಾ.ವಿಜಯಮ್ಮಾ, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್ ಅಹಿಂಸ, ಗೌರಿ ಸ್ಮಾರಕ ಟ್ರಸ್ಟ್‌ ನ ಪ್ರೊ.ವಿ.ಎಸ್.ಶ್ರೀಧರ, ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್, ಚಿಂತಕ ಶಿವಸುಂದರ್, ಲೇಖಕಿ ದು.ಸರಸ್ವತಿ, ಸರೋವರ ಬೆಂಕಿಕೆರೆ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News