ಚಲುವರಾಯಸ್ವಾಮಿಯನ್ನು ಸಂಪುಟದಿಂದ ವಜಾ ಮಾಡ್ತೀರಾ?: ಆರ್.ಅಶೋಕ್
ಬೆಂಗಳೂರು, ಸೆ. 11: ‘ಸತ್ಯ ಹೇಳಿದ್ದಕ್ಕೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಏಕಾಏಕಿ ಸಚಿವ ಸಂಪುಟದಿಂದ ವಜಾ ಮಾಡಿದ ರೀತಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನೂ ಸಂಪುಟದಿಂದ ವಜಾ ಮಾಡುತ್ತೀರಾ?’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ರವಿವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಕಲ್ಲು ತೂರಾಟ, ಕೋಮುದಳ್ಳುರಿಗೆ ‘ಮತಾಂಧ ಮುಸ್ಲಿಮ್ ಕಿಡಿಗೇಡಿಗಳೇ ಕಾರಣ’ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಒಪ್ಪಿಕೊಂಡಿರುವುದು ಸ್ವಾಗತಾರ್ಹ’ ಎಂದು ಉಲ್ಲೇಖಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಲುವರಾಯಸ್ವಾಮಿ ಅವರು ಹೇಳಿರುವ ಈ ಸತ್ಯಾಂಶವನ್ನ ಒಪ್ಪಿಕೊಳ್ಳುತ್ತಾರೆಯೇ?’ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.
‘ಸಚಿವ ಸಂತೋಷ್ ಲಾಡ್‍ರೇ, ಪಾಪ ನಿಮಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಅರಿವಿದ್ದಂತಿಲ್ಲ. ನಿಮ್ಮ ಪಕ್ಷದ ಸಿದ್ಧಾಂತದ ವಿರುದ್ಧ ಮಾತನಾಡಿದರೆ ರಾಹುಲ್ ಗಾಂಧಿಗೆ ಕೋಪ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಫೋನು ಮಾಡಿ ಮಾಜಿ ಸಚಿವ ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಿದಂತೆ ತಮ್ಮನ್ನೂ ಸಂಪುಟದಿಂದ ವಜಾ ಮಾಡಿಬಿಟ್ಟಾರು, ಹುಷಾರ್. ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ. ತಮ್ಮ ಕುರ್ಚಿ ಉಳಿಸಿಕೊಳ್ಳಿ’
-ಆರ್.ಅಶೋಕ್ ವಿಪಕ್ಷ ನಾಯಕ