ಮದ್ದೂರು ಗಲಭೆ | ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಸೆ.11: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣೇಶ ಉತ್ಸವ ಮೆರವಣಿಗೆಯ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಿರುವುದನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಹೋರಾಟದ ಮೂಲಕ ಇಡೀ ರಾಷ್ಟ್ರವ್ಯಾಪಿಯಲ್ಲಿ ಸರಕಾರದ ಕಣ್ಣು ತೆರಸಿದ ರೈತರು ಇರುವ ಮಂಡ್ಯ, ಮದ್ದೂರಿನ ಜನತೆಯನ್ನು ದಾರಿ ತಪ್ಪಿಸಿ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿಯ ರಣಹೇಡಿಗಳು ಇಂದು ಪಾಕಿಸ್ತಾನದ ಹೆಸರನ್ನು ನಿರಂತರವಾಗಿ ಹೇಳುತ್ತಿದ್ದಾರೆ. ಇವರಿಗೂ ಪಾಕಿಸ್ತಾನಕ್ಕೂ ಯಾವ ಸಂಬಂಧ ಇದೆ ಎಂಬುದನ್ನು ಈಗ ತನಿಖೆ ನಡೆಸಬೇಕು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಪ್ರತಾಪ್ ಸಿಂಹ ಈಗಾಗಲೇ ಅಲ್ಲಿ ಕೋಮುವಾದದ ಭಾಷಣ ಮಾಡಿದ್ದಾರೆ. ಸಿ.ಟಿ.ರವಿ ತನ್ನ ವ್ಯಕ್ತಿತ್ವದ ಮೂಲಕ ಮತ್ತೆ ನಾಲಿಗೆ ಹರಿ ಬಿಟ್ಟು ತಲೆ ಕಡಿಯುತ್ತೇನೆ ಎನ್ನುತ್ತಾರೆ. ಈ ವ್ಯಕ್ತಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿರುವುದು ಈಗ ಬಹಿರಂಗವಾಗಿದೆ. ಈಗಾಗಲೇ ಸಿ.ಟಿ. ರವಿ ಹೇಳಿಕೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಈಗ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಸಿಟಿ ರವಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಇಂತಹ ಬಿಜೆಪಿಯ ಕೋಮುವಾದಿ ನಾಯಕರು ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿರುವುದು ಈಗಾಗಲೇ ರಾಜ್ಯ ಮತ್ತು ರಾಷ್ಟ್ರದ ಜನತೆಗೆ ತಿಳಿದಿದೆ. ಆದರು ಸಹ ಮಂಡ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಅಡ್ಡಗಾಲು ಹಾಕಿ ಕೋಮು ಪ್ರಚೋದನೆ ಹೇಳಿಕೆ ನೀಡುತ್ತಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಮಾನ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪೊಲೀಸರು ಈ ಪ್ರಕರಣದಲ್ಲಿ ಅತ್ಯಂತ ತುರ್ತಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಆದರೂ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದರ ಮೂಲಕ ಅಶಾಂತಿಯ ವಾತಾವರಣವನ್ನು ಬಿಜೆಪಿ ನಾಯಕರು ಸೃಷ್ಟಿಸುತ್ತಿದ್ದಾರೆ. ಬಿಜೆಪಿ ನಾಯಕರ ಪ್ರತಿಯೊಂದು ಹೇಳಿಕೆಯನ್ನು ಸ್ವಯಂ ಪ್ರೇರಿತವಾಗಿ ಪೊಲೀಸ್ ಇಲಾಖೆ ಗಮನಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಸಿ.ಟಿ.ರವಿ ಅವರನ್ನು ಹಾಗೂ ಇತರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಿಜೆಪಿ ನಾಯಕರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಮುಖಂಡರಾದ ಜಿ.ಪ್ರಕಾಶ್, ಹೇಮರಾಜ್, ಆನಂದ್ ಕುಮಾರ್, ಚಂದ್ರಶೇಖರ, ಕುಶಾಲ್ ಹರುವೇಗೌಡ, ಪುಟ್ಟರಾಜು, ಉಮೇಶ್, ರಂಜಿತ್, ಓಬಳೇಶ್, ಚಿನ್ನಿ ಪ್ರಕಾಶ್, ಸಾಯಿ ನವೀನ್, ಪ್ರವೀಣ್ ರಾವ್, ಮೊಹಮ್ಮದ್ ಇಮ್ರಾನ್ ಬಾಣಾವರ ಹಾಜರಿದ್ದರು.