ಬೆಂಗಳೂರು | ಬಸ್‍ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಚಾಲಕನಿಗೆ ಥಳಿಸಿದ ಕುಟುಂಬಸ್ಥರು
ಬೆಂಗಳೂರು, ಸೆ.11: ಖಾಸಗಿ ಬಸ್‍ನಲ್ಲಿ 15 ವರ್ಷದ ಬಾಲಕಿಗೆ ಚಾಲಕನೇ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ನಗರದ ಚಾಲುಕ್ಯ ಸರ್ಕಲ್ ಬಳಿ ಚಾಲಕನನ್ನು ಹೊರಗೆಳೆದು ಬಾಲಕಿಯ ಕುಟುಂಬಸ್ಥರು ಥಳಿಸಿದ ಘಟನೆ ವರದಿಯಾಗಿದೆ.
ಆರೀಫ್ ಎಂಬಾತ ಥಳಿತಕ್ಕೆಗೊಳಗಾದ ಬಸ್ ಚಾಲಕ. ಬಾಲಕಿಯ ಕುಟುಂಬಸ್ಥರು ನೀಡಿದ ದೂರು ಆಧರಿಸಿ ವಿಧಾನಸೌಧ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೆ.10ರ ಬುಧವಾರ ರಾತ್ರಿ ಹೈದರಾಬಾದ್‍ನಿಂದ ಬೆಂಗಳೂರಿಗೆ ಖಾಸಗಿ ಬಸ್‍ನಲ್ಲಿ ಬರುವಾಗ ಬಾಲಕಿಯ ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದು, ಚಾರ್ಜ್ ಹಾಕಿಕೊಳ್ಳಲು ಚಾಲಕನಿಗೆ ಮೊಬೈಲ್ ನೀಡಿದ್ದಳು. ಚಾರ್ಜ್ ಆದ ಬಳಿಕ ಮೊಬೈಲ್ ಕೇಳಲು ಹೋದ ಬಾಲಕಿಗೆ ಮುತ್ತು ಕೊಟ್ಟರೆ ಮೊಬೈಲ್ ವಾಪಸ್ ನೀಡುತ್ತೇನೆ ಎಂದಿದ್ದಾನೆ. ಹೆಚ್ಚುವರಿ ಚಾಲಕನಾಗಿದ್ದ ಆರೋಪಿಯು ಬಸ್‍ನಲ್ಲಿ ಕುಳಿತಿರುವಾಗಲೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಸ್‍ನಲ್ಲಿ ಇಬ್ಬರು ಚಾಲಕರಿದ್ದರು. ಒಬ್ಬ ಚಾಲಕ ಒಳ್ಳೆಯನಾಗಿದ್ದ. ಆತ ಮಲಗಿದ ಬಳಿಕ ಎರಡನೇ ಚಾಲಕ ಕಾಟ ಕೊಟ್ಟಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಸ್ಸಿನಲ್ಲಾದ ಲೈಂಗಿಕ ಕಿರುಕುಳದ ಬಗ್ಗೆ ಬಾಲಕಿಯು ಕರೆ ಮಾಡಿ ಕುಟುಂಬಸ್ಥರಿಗೆ ತಿಳಿಸಿದ್ದಳು. ಇದರಿಂದಾಗಿ ಕುಟುಂಬಸ್ಥರು ರಾತ್ರಿಯೇ ಮೆಜೆಸ್ಟಿಕ್‍ಗೆ ಬಂದು ಬಸ್‍ಗಾಗಿ ಕಾಯುತ್ತಿದ್ದರು. ಸೆ.11ರ ಗುರುವಾರ ಬೆಳಗ್ಗೆ ನಗರದ ಚಾಲುಕ್ಯ ಸರ್ಕಲ್ ಬಳಿ ಬರುತ್ತಿದ್ದಂತೆ ಬಸ್ ತಡೆದು ಚಾಲಕನನ್ನು ಹೊರಗೆಳೆದಿದ್ದಾರೆ. ಬಳಿಕ ಆತನನ್ನು ಅರೆಬೆತ್ತಲು ಮಾಡಿ ಥಳಿಸಿದ್ದಾರೆ.