ಹಾಸನ ಅಪಘಾತ ಪ್ರಕರಣ | ಮೃತರ ಕುಟುಂಬಗಳೊಂದಿಗೆ ನಿಲ್ಲುವುದು ಅತ್ಯಂತ ಅವಶ್ಯಕ : ಬಾನು ಮುಷ್ತಾಕ್
ಬೆಂಗಳೂರು, ಸೆ.13 : ನಮ್ಮ ಹಾಸನ ಜಿಲ್ಲೆಯ ಇತಿಹಾಸದಲ್ಲೇ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿರುವ ಅಪಘಾತ ದುರಂತ ಆಘಾತಕಾರಿ ಸಂಗತಿಯಾಗಿದ್ದು, ಬಾಧಿತ ಕುಟುಂಬಗಳೊಂದಿಗೆ ನಿಂತುಕೊಳ್ಳುವುದು ಅತ್ಯಂತ ಅವಶ್ಯಕ. ಅವರ ನೋವು ಮತ್ತು ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಕಂಬನಿ ಮಿಡಿದಿದ್ದಾರೆ.
ಶನಿವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಿನ್ನೆ ರಾತ್ರಿ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆಯ ಸಂಭ್ರಮ ಕ್ಷಣಾರ್ಧದಲ್ಲೇ ದುಃಖ ಮತ್ತು ಕಣ್ಣೀರು ತುಂಬಿದ ಅನಾಹುತವಾಗಿ ಮಾರ್ಪಟ್ಟಿದ್ದು, ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಶೇಷವಾಗಿ, ಮೊಸಳೆ ಹೊಸಹಳ್ಳಿಯ ಇಂಜಿನಿಯರಿಂಗ್ ಕಾಲೇಜಿನ ಏಳು ಮಂದಿ ಯುವ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ಅತೀವ ವಿಷಾದ ಉಂಟುಮಾಡಿದೆ. ಇಂತಹ ಯುವ ಚೇತನಗಳು ಅಕಾಲಿಕವಾಗಿ ಕಣ್ಮರೆಯಾಗಿರುವುದು ಅತಿದೊಡ್ಡ ದುರಂತವಾಗಿದೆ ಎಂದು ಅವರು ಹೇಳಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ. ದುಃಖ ತಪ್ತ ಕುಟುಂಬಗಳಿಗೆ ನನ್ನ ಸಾಂತ್ವನ ಮಾತ್ರವಲ್ಲದೆ, ಈ ಕಷ್ಟದ ಸಮಯದಲ್ಲಿ, ಸಮಾಜವಾಗಿ ನಾವು ಎಲ್ಲರೂ ಒಗ್ಗಟ್ಟಿನಿಂದ, ಸಹಾನುಭೂತಿಯಿಂದ, ಪರಸ್ಪರ ನೆರವು ನೀಡುತ್ತ, ಬಾಧಿತ ಕುಟುಂಬಗಳೊಂದಿಗೆ ನಿಂತುಕೊಳ್ಳುವುದು ಅತ್ಯಂತ ಅವಶ್ಯಕ ಎಂದೂ ಅವರು ಉಲ್ಲೇಖಿಸಿದ್ದಾರೆ.