ಮಂಗಳಮುಖಿಯರು, ಮಹಿಳೆಯರಿಗೆ ಸರಕಾರದಿಂದಲೇ ಉಚಿತ ಆಟೋ ಒದಗಿಸಲು ಚರ್ಚೆ : ಎನ್.ಎ.ಹಾರಿಸ್
ಬೆಂಗಳೂರು, ಸೆ. 13: ‘ಬಿ.ಪ್ಯಾಕ್ ಆಯೋಜಿಸಿರುವ ಉಚಿತ ಆಟೋ ಚಾಲನಾ ತರಬೇತಿ ಪಡೆಯುವ ಮಂಗಳಮುಖಿಯರು ಹಾಗೂ ಮಹಿಳೆಯರಿಗೆ ವೃತ್ತಿ ಜೀವನ ಪ್ರಾರಂಭಿಸಲು ರಾಜ್ಯ ಸರಕಾರದಿಂದಲೇ ಉಚಿತವಾಗಿ ಆಟೋ ಒದಗಿಸುವ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಪಿ)ದೊಂದಿಗೆ ಚರ್ಚಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ಭರವಸೆ ನೀಡಿದ್ದಾರೆ.
ಶನಿವಾರ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಕಲಾಕೇಂದ್ರದಲ್ಲಿ ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಆಯೋಜಿಸಿದ್ದ ಶಾಂತಿನಗರ ಕ್ಷೇತ್ರದ ಮಂಗಳಮುಖಿಯರು, ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಹಾಗೂ ಮಂಗಳಮುಖಿಯರು ಸ್ವಾವಲಂಬನೆ ಜೀವನ ಕಟ್ಟಿಕೊಳ್ಳಲು ನೆರವಾಗಬೇಕಿದೆ ಎಂದರು.
ಆ ನಿಟ್ಟಿನಲ್ಲಿ ಬಿ.ಪ್ಯಾಕ್, ಸಿಜಿಐ ವತಿಯಿಂದ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲೂ ಉಚಿತವಾಗಿ ಆಟೋ ಚಾಲನಾ ತರಬೇತಿ ನೀಡುತ್ತಿರುವುದು ಶ್ವಾಘನೀಯ. ಹೀಗೆ ಚಾಲನೆ ಪಡೆದ ಅರ್ಹರಿಗೆ ಸರಕಾರದಿಂದಲೇ ಉಚಿತವಾಗಿ ಆಟೋ ಒದಗಿಸುವುದು ಅವಶ್ಯಕ. ಇದರಿಂದ ಸ್ವಯಂ ವೃತ್ತಿ ಜೀವನ ಪ್ರಾರಂಭಿಸಲು ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಸಾಧ್ಯವಾಗಲಿದೆ. ಹೀಗಾಗಿ ಸಂಬಂಧಪಟ್ಟ ಮಂಡಳಿ ಹಾಗೂ ಜಿಬಿಪಿಯೊಂದಿಗೆ ಚರ್ಚಿಸಲಿದ್ದೇನೆ ಎಂದು ಅವರು ಆಶ್ವಾಸನೆ ನೀಡಿದರು.
ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈ. ಲಿ. ಎಂ.ಡಿ. ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಮಾತನಾಡಿ, ಮಹಿಳೆಯರು ಹಾಗೂ ಮಂಗಳಮುಖಿಯರು ಆಟೋ ಚಾಲನೆ ತರಬೇತಿ ಪಡೆಯಲು ಮುಂದೆ ಬರುತ್ತಿರುವುದು ಅಭಿನಂದನಾರ್ಹ. ಮಹಿಳೆಯರು, ಮಂಗಳಮುಖಿಯರು ಆಟೋರಿಕ್ಷಾ ಚಾಲನೆ ಮಾಡುವುದರಿಂದ ಇನ್ನಷ್ಟು ಮಹಿಳೆಯರು ರಾತ್ರಿ ವೇಳೆ ಧೈರ್ಯವಾಗಿ ಸಂಚಾರ ಮಾಡಲು ಮುಂದಾಗುತ್ತಾರೆ. ಆ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಬೆಂಗಳೂರು ದೇಶದ ಮಾದರಿಯಾಗಬೇಕು ಎಂದು ಹೇಳಿದರು.
ಸಿಜಿಐ ಉಪಾಧ್ಯಕ್ಷೆ ಲಕ್ಷ್ಮಿ ಗಣೇಶ್ ಮಾತನಾಡಿ, ‘ಈ ಯೋಜನೆಯಿಂದ ವೃತ್ತಿ ಜೀವನ ಪ್ರಾರಂಭಿಸಬೇಕೆಂಬ ಅಭಿಲಾಷೆ ಹೊಂದಿರುವ ಮಹಿಳೆಯರಿಗೆ ಇದೊಂದು ಉತ್ತಮ ಅವಕಾಶ. ಅದರಲ್ಲೂ ಮಂಗಳಮುಖಿಯರು ಗೌರವಾನ್ವಿತ ಬದುಕು ನಿರ್ಮಿಸಿಕೊಳ್ಳಲು ಉಚಿತವಾಗಿಯೇ ತರಬೇತಿ ನೀಡಲಾಗುತ್ತಿದೆ ಎಂದರು.
ಬಿ.ಪ್ಯಾಕ್‍ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಮುಖ್ಯ ಕಾರ್ಯನಿರ್ವಾಹಕಿ ರೇವತಿ ಅಶೋಕ್ ಮಾತನಾಡಿ, ಈ ಕಾರ್ಯಕ್ರಮದ ಎರಡನೇ ಹಂತದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಆಟೋ ಚಾಲನಾ ತರಬೇತಿ ನೀಡಲಿದ್ದೇವೆ. ಚಾಲನಾ ತರಬೇತಿಯೊಂದಿಗೆ ನಾಯಕತ್ವ, ಇಂಗ್ಲಿಷ್ ಸಂವಹನ, ಗ್ರಾಹಕ ನಿರ್ವಹಣೆ, ಡಿಜಿಟಲ್ ಹಾಗೂ ಆರ್ಥಿಕ ಜ್ಞಾನ ಕೌಶಲ್ಯಗಳನ್ನು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಿಜಿಐ ಉಪಾಧ್ಯಕ್ಷೆ ಆರತಿ ಹಿರೇಮಠ, ಸುಧಾಕರ್ ಪೈ, ಚಿತ್ರಾ ತಲ್ವಾರ್, ಸಂಪತ್, ಕಾವೇರಿ ಕೇದಾರನಾಥ್, ರಾಘವೇಂದ್ರ ಪೂಜಾರಿ ಎಚ್.ಎಸ್. ಮತ್ತು ಭರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.