×
Ad

‘ಜಾತಿ ಸಮೀಕ್ಷೆ’ಯಲ್ಲಿ ಭಾಗವಹಿಸಲು ಗೊಲ್ಲ, ಕಾಡುಗೊಲ್ಲ ಸಮುದಾಯಗಳಿಗೆ ಕರೆ

Update: 2025-09-13 22:18 IST
ಸಾಂದರ್ಭಿಕ ಚಿತ್ರ 

ಬೆಂಗಳೂರು, ಸೆ.13: ಹಿಂದುಳಿದ ವರ್ಗಗಳ ಆಯೋಗವು ಸೆ.22 ರಿಂದ ಅ.7ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಿದ್ದು, ಈ ವೇಳೆಯಲ್ಲಿ ಪ್ರವರ್ಗ-1ರಲ್ಲಿ ಬರುವ ಅಲೆಮಾರಿ ಜನಾಂಗಗಳಾದ ಗೊಲ್ಲ, ಕಾಡುಗೊಲ್ಲ ಬುಡಬುಡಕೆ, ದೊಂಬಿದಾಸರು, ಜೋಗಿಗಳು ಸೇರಿದಂತೆ ಎಲ್ಲ ಸಮುದಾಯಗಳು ಸಕ್ರಿಯವಾಗಿ ಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಪರಿಷತ್ ಸದಸ್ಯ ಹಾಗೂ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಕರೆ ನೀಡಿದ್ದಾರೆ.

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಈ ಹಿಂದೆ ಕಾಂತರಾಜ್ ಆಯೋಗವು ನಡೆಸಿತ್ತು. ವರದಿಯಲ್ಲಿ ನ್ಯೂನ್ಯತೆಗಳಿದ್ದ ಕಾರಣದಿಂದಾಗಿ ಅದನ್ನು ರದ್ದುಪಡಿಸಿ, ಹೊಸದಾಗಿ ಸಮೀಕ್ಷೆಯನ್ನು ಕೈಗೊಂಡಿರುವುದು ನಮ್ಮ-ನಿಮ್ಮೆಲ್ಲರ ಸೌಭಾಗ್ಯ. ಇದರಿಂದ ಎಲ್ಲ ಸಮುದಾಯದವರಿಗೆ ಒಳಿತಾಗಲಿದೆ ಎಂದರು.

ಮುಖ್ಯವಾಗಿ ಪ್ರತಿ ಕುಟುಂಬದ ಮುಖ್ಯಸ್ಥರು ಹಾಗೂ ಸಾಧ್ಯವಾದಲ್ಲಿ ಸದಸ್ಯರುಗಳು ಸಮೀಕ್ಷಾ ಕಾರ್ಯಕ್ಕೆ ಬರುವ ಅಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ತಮ್ಮ ಕುಟುಂಬಗಳ ವಿವರಗಳನ್ನು ನೀಡುವುದಲ್ಲದೇ, ಜಾತಿಯನ್ನು ನಮೂದಿಸುವಾಗ ಮೂಲ ಜಾತಿಯನ್ನು ಮಾತ್ರ ನೀಡಬೇಕು. ಉಪಜಾತಿಗಳ ಮಾಹಿತಿಗಳಿದ್ದಲ್ಲಿ ಬೇರೆ ಕಡೆ ನಮೂದಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಮೂಲ ಜಾತಿಯ ಕಾಲಂನಲ್ಲಿ ಉಪಜಾತಿಯನ್ನು ಯಾವುದೇ ಕಾರಣಕ್ಕೂ ಬರೆಸಬಾರದು ಎಂದು ಅವರು ಸಲಹೆ ನೀಡಿದರು.

ಸಮೀಕ್ಷಾ ಕಾರ್ಯದಲ್ಲಿ ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇದರಲ್ಲಿ ಭಾಗವಹಿಸಿ, ಸಮಾಜದ ಜನಸಂಖ್ಯೆಯನ್ನು ನಿಗದಿಪಡಿಸಿಕೊಂಡಲ್ಲಿ ಹೆಚ್ಚು ಮೀಸಲಾತಿ ಪ್ರಮಾಣವನ್ನು ಒತ್ತಾಯಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಹಿಂದುಳಿದ ಜನಾಂಗದವರಿಗೆ ಮೀಸಲಾತಿಯಲ್ಲಿ ಮಾರಕವಾಗುವ ಸಾಧ್ಯತೆಯೂ ಇರುತ್ತದೆ. ಆದುದರಿಂದ ಎಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಶ್ರೀನಿವಾಸ್ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಎಂ.ಮೌಲಾಲಿ, ಆರ್.ರಂಗಪ್ಪ, ಎ.ವಿ.ಲೋಕೇಶಪ್ಪ, ಪೂರ್ಣಿಮಾ ಜೋಗಿ, ಜೋಗ್ ಮಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News