ಬೆಂಗಳೂರು | ಮದ್ಯದ ಅಮಲಿನಲ್ಲಿ ಮಹಿಳಾ ಪೊಲೀಸರೊಂದಿಗೆ ಅನುಚಿತ ವರ್ತನೆ: ಆರೋಪಿ ಸೆರೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.27: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಇಲ್ಲಿನ ಇಂದಿರಾನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಆದಿತ್ಯ ಅಗರ್ವಾಲ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸೆಪ್ಟಂಬರ್ 25ರಂದು ರಾತ್ರಿ ಘಟನೆ ನಡೆದಿದೆ. ಸಿ.ವಿ.ರಾಮನ್ ನಗರದ ವ್ಯಾಪ್ತಿಯಲ್ಲಿ ಜೀವನ್ ಭೀಮಾ ನಗರ ಸಂಚಾರಿ ಠಾಣೆಯ ಪೊಲೀಸರು ಡ್ರಿಂಕ್ ಎಂಡ್ ಡ್ರೈವ್ ಪರಿಶೀಲನೆಯನ್ನು ನಡೆಸುತ್ತಿದ್ದರು.
ಆ ವೇಳೆ ಆದಿತ್ಯ ಅಗರ್ವಾಲ್ ಎಂಬಾತ, ಪರಿಶೀಲನೆಗೆ ಸಹಕರಿಸದೇ ಉದ್ದಟತನವನ್ನು ತೋರಿದ್ದು, ಕರ್ತವ್ಯದಲ್ಲಿ ಮಹಿಳಾ ಪಿಎಸ್ಸೈ ಕವಿತಾ ಮತ್ತು ಸಿಬ್ಬಂದಿಗಳಿಗೆ ನಿಂದಿಸಿ ಅನುಚಿತ ವರ್ತನೆ ತೋರಿದ್ದಾರೆ. ಕನ್ನಡದಲ್ಲಿ ಮಾತಾಡಲು ತಿಳಿಸಿದ್ದಕ್ಕೆ ಹಿಂದಿ, ಇಂಗ್ಲಿಷ್ ಮಾತನಾಡು ಎಂದು ಕೂಗಾಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಸಂಬಂಧ ಕರ್ತವ್ಯ ನಿರ್ವಹಣೆಗೆ ತೊಂದರೆ ಕೊಟ್ಟ ಹಿನ್ನಲೆಯಲ್ಲಿ ಆರೋಪಿ ವಿರುದ್ದ ದೂರು ದಾಖಲಿಸಿದ್ದು, ಇಂದಿರಾನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ.