ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಕುರಿತು ಸರಕಾರ ಕ್ರಮ ಕೈಗೊಳ್ಳಲಿದೆ : ಪ್ರದೀಪ್ ಈಶ್ವರ್
ಬೆಂಗಳೂರು, ಸೆ.27: ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವ ಜೊತೆಗೆ ಅಭ್ಯರ್ಥಿಗಳ ವಯೋಮಿತಿಯನ್ನು ಸಡಿಲಿಕೆ ಮಾಡುವ ಕುರಿತು ರಾಜ್ಯ ಸರಕಾರ ಶೀಘ್ರವೆ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಸರಕಾರದ ನೇಮಕಾತಿಗಳಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ಯುವ ಸಮುದಾಯ ಬೀದಿಗಿಳಿದು ಹೋರಾಟ ಮಾಡುತ್ತಿರುವ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ಯುವಕರ ಪರವಾಗಿದೆ. ಅವರಿಗೆ ಅನುಕೂಲವಾಗುವ ರೀತಿಯಲ್ಲೆ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ವಿವಿಧ ಕಾರಣಗಳಿಂದಾಗಿ ನೇಮಕಾತಿಯಲ್ಲಿ ವಿಳಂಬವಾಗಿದೆ. ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಕುರಿತು ಅಧಿಸೂಚನೆ ಹೊರಬಿದ್ದ ಬಳಿಕ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಯುವಕರು ಸರಕಾರದ ಮೇಲೆ ನಂಬಿಕೆ ಇಡಬೇಕು. ನಿಮ್ಮ ಭರವಸೆಗಳನ್ನು ನಮ್ಮ ಸರಕಾರ ಖಂಡಿತ ಈಡೇರಿಸುತ್ತದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.