×
Ad

ಬೆಂಗಳೂರು ನಗರ ವಿವಿ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಅವ್ಯವಹಾರ : ಆರೋಪ

Update: 2025-10-01 00:32 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದೆ. ಅಲ್ಲದೆ, ಅಕ್ರಮವಾಗಿ ನೇಮಕವಾಗಿರುವ ಅಭ್ಯರ್ಥಿಗಳನ್ನು ತಕ್ಷಣವೇ ವಜಾ ಮಾಡಬೇಕು. ಹಾಗೆಯೇ ಮರುಸಂದರ್ಶನಕ್ಕೆ ಆದೇಶ ಮಾಡಬೇಕು ಎಂದು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಈ ಸಂಬಂಧ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ವಿವಿಯ ಕುಲಪತಿ, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ರಾಜ್ಯಪಾಲರಿಗೆ ದೂರನ್ನು ನೀಡಿದ್ದು, ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಲು ಜು.5ರಂದು ಅರ್ಜಿ ಆಹ್ವಾನಿಸಲಾಗಿತ್ತು. ಅಂತೆಯೇ ಸೆ.16ರಂದು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ತುಮಕೂರು ವಿವಿಯ ಪ್ರೊ.ಸಿಬಂತಿ ಪದ್ಮನಾಭ ಹಾಗೂ ಬೆಂಗಳೂರು ವಿವಿಯ ವಿದ್ಯುನ್ಮಾನ ಮಾಧ್ಯಮದ ಪ್ರಾಧ್ಯಾಪಕಿ ಡಾ.ವಾಹಿನಿ ಅರವಿಂದ್ ಸಂದರ್ಶಕರಾಗಿ ಆಗಮಿಸಿದ್ದರು. ಈ ಪ್ರಕ್ರಿಯೆಯಲ್ಲಿ ಪಿಎಚ್‌ಡಿ ಮುಗಿಸದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ವಿದ್ಯುನ್ಮಾನ ಮಾಧ್ಯಮದ ಪ್ರಾಧ್ಯಾಪಕಿ ಡಾ.ವಾಹಿನಿ ಅರವಿಂದ್ ಅವರು ತಮ್ಮ ಮಾರ್ಗದರ್ಶನದಲ್ಲಿ ಪಿಎಚ್‌ ಡಿ ಮಾಡುತ್ತಿರುವ, ಡಾಕ್ಟರೇಟ್ ಪಡೆಯದ ತಮ್ಮದೇ ಇಬ್ಬರು ವಿದ್ಯಾರ್ಥಿಗಳಾದ ಅನಿಲ್ ಮತ್ತು ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಒಟ್ಟು 21 ಅಭ್ಯರ್ಥಿಗಳು ಆಗಮಿಸಿದ್ದರು. ಸಂದರ್ಶನಕ್ಕೆ ಆಗಮಿಸಿದವರಲ್ಲಿ ಹಲವಾರು ಅಭ್ಯರ್ಥಿಗಳು ಈಗಾಗಲೇ ಪಿಎಚ್‌ಡಿ ಮುಗಿಸಿ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದವರು ಇದ್ದಾರೆ. ಅವರನ್ನು ಸಂಪೂರ್ಣವಾಗಿ ಕಡೆಗಣಿಸಿ ತಮ್ಮದೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News