ಪ್ರೋತ್ಸಾಹ, ಪುರಸ್ಕಾರ ಸಿಕ್ಕರೆ ಮಕ್ಕಳ ಪ್ರತಿಭೆ ಅರಳುತ್ತದೆ : ಕೆ.ವಿ.ಪ್ರಭಾಕರ್
‘ಮಕ್ಕಳ ಜಾತ್ರೆ : ಚಿಣ್ಣರ ಜಾಗೃತಿ ಮತ್ತು ಪ್ರಶಸ್ತಿ ಸಂಭ್ರಮ’ ಕಾರ್ಯಕ್ರಮ
ಬೆಂಗಳೂರು, ಅ.19: ಮಕ್ಕಳಲ್ಲಿ ಪ್ರತಿಭೆ ಗುರುತಿಸುವುದೆಂದರೆ, ಗಾಡಿ ಚಕ್ರಕ್ಕೆ ಕೀಲೆಣ್ಣೆ ಹಾಕಿದಂತೆ. ಕೀಲೆಣ್ಣೆ ಹಾಕಿದರೆ ಚಕ್ರ ಚೆನ್ನಾಗಿ ಚಲಿಸುತ್ತದೆ. ಹಾಗೆಯೇ ಪ್ರೋತ್ಸಾಹ, ಪುರಸ್ಕಾರ ಸಿಕ್ಕರೆ ಮಕ್ಕಳ ಪ್ರತಿಭೆ ಅರಳುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಪ್ರೆಸ್‍ಕ್ಲಬ್ ಆವರಣದಲ್ಲಿ ಬಾಲ ಭವನ ಮತ್ತು ಪ್ರೆಸ್‍ಕ್ಲಬ್ ವತಿಯಿಂದ ನಡೆದ ‘ಮಕ್ಕಳ ಜಾತ್ರೆ : ಚಿಣ್ಣರ ಜಾಗೃತಿ ಮತ್ತು ಪ್ರಶಸ್ತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕುತೂಹಲ ಕೆರಳಿಸುವುದು, ಮಕ್ಕಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಮತ್ತು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಅವರೊಳಗಿನ ಸೃಜನಶೀಲತೆ ಅರಳುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ಮಗುವೂ ಹುಟ್ಟುತ್ತಲೇ ಪ್ರತಿಭೆಗಳ ಕಣಜ ಆಗಿರುತ್ತದೆ. ಆ ಮಗುವಿನ ಮನಸ್ಸಿನ, ಆಲೋಚನೆಯ ಕಿಟಕಿ ತೆರೆದಾಗ ಪ್ರತಿಭೆ ಹೊರಗೆ ಬರುತ್ತದೆ. ಆದ್ದರಿಂದ ಮಕ್ಕಳನ್ನು ಯಾರೂ ಪ್ರತಿಭಾವಂತರನ್ನಾಗಿ ಮಾಡುವ ಅಗತ್ಯವಿಲ್ಲ. ಪ್ರತಿಭೆ ಅರಳಲು ಅಗತ್ಯವಾದ ವಾತಾವರಣ ಕಲ್ಪಿಸಿದರೆ ಸಾಕು ಎಂದು ಕೆ.ವಿ.ಪ್ರಭಾಕರ್ ಹೇಳಿದರು.
ಮಕ್ಕಳು ಕಲಿಕೆಯ ಕುತೂಹಲ ಮತ್ತು ಅಧ್ಯಯನ ಶೀಲತೆಯನ್ನು ಯಾವತ್ತೂ ಕಳೆದುಕೊಳ್ಳಬಾರದು. ಇಲ್ಲದಿದ್ದರೆ ನಿಮ್ಮೊಳಗಿನ ಪ್ರತಿಭೆ ಬಾಡುತ್ತದೆ. ಮೊಬೈಲ್, ಟ್ಯಾಬ್‍ಗಳ ಗೀಳು ನಿಮ್ಮೊಳಗಿನ ಸೃಜನಶೀಲತೆಯನ್ನು ಕೊಂದು ಪ್ರತಿಭಾ ಶೂನ್ಯರನ್ನಾಗಿಸುತ್ತದೆ. ವೀಡಿಯೊ ಗೇಮ್‍ಗಳು ಕೇವಲ ಆಕ್ರಮಣಕಾರಿ ವರ್ತನೆಯನ್ನೇ ಬೆಳೆಸುತ್ತವೆ. ಹೀಗಾಗಿ ಮೊಬೈಲ್ ಬಿಡಿ-ಪುಸ್ತಕ ಹಿಡಿ-ಮೈದಾನದ ಕಡೆ ನಡಿ ಎನ್ನುವುದನ್ನು ಮಕ್ಕಳು ಪಾಲಿಸುತ್ತಾ, ಕಲಿಕೆಯ ಕುತೂಹಲ, ಅಧ್ಯಯನಶೀಲತೆಯನ್ನು ಬದುಕಿನ ಕೊನೆ ಕ್ಷಣದವರೆಗೂ ಪಾಲಿಸಿ ಎಂದು ಕೆ.ವಿ.ಪ್ರಭಾಕರ್ ಮಕ್ಕಳಿಗೆ ಕರೆ ನೀಡಿದರು.
ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟ ಪಾಠಗಳಿಂದ ದೂರ ಆಗಿದ್ದಾರೆ. ಅಜ್ಜ-ಅಜ್ಜಿ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಅದಕ್ಕೆ ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆಯೂ ಕಾಣೆಯಾಗಿದೆ ಎಂದು ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.
ನೆಹರೂ ಅವರು, ‘ಮಕ್ಕಳು ತೋಟದಲ್ಲಿರುವ ಮೊಗ್ಗುಗಳಂತೆ, ಈ ಮೊಗ್ಗುಗಳನ್ನು ಎಚ್ಚರಿಕೆಯಿಂದ ಪ್ರೀತಿಯಿಂದ ಪೋಷಿಸಬೇಕು, ಆಗಷ್ಟೇ ಜವಾಬ್ದಾರಿಯುತ ನಾಗರಿಕರು ರೂಪುಗೊಳ್ಳುತ್ತಾರೆ’ ಎನ್ನುವ ಸ್ಪಷ್ಟವಾದ ವೈಜ್ಞಾನಿಕ ತಿಳಿವಳಿಕೆ ಮತ್ತು ದೂರ ದೃಷ್ಟಿ ಹೊಂದಿದ್ದರು. ಈ ದೂರದೃಷ್ಟಿಯಿಂದ ಬಾಲಭವನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಕೆ.ವಿ.ಪ್ರಭಾಕರ್ ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್, ಬಾಲ ಭವನ ಅಧ್ಯಕ್ಷ ಬಿ.ಆರ್.ನಾಯ್ಡು, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ನಟರಾಜ್, ಜನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್, ಗಾಯಕ ಅಕ್ಬರ್ ಸೇರಿ ಹಲವರು ಉಪಸ್ಥಿತರಿದ್ದರು.