ಬೆಂಗಳೂರಿನಲ್ಲಿ ಪಟಾಕಿ ಅವಘಡ: ಐದಕ್ಕೂ ಅಧಿಕ ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.20: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಬೆಂಗಳೂರಿನಲ್ಲಿ ಸಂಭವಿಸಿದ ಪಟಾಕಿ ಅವಘಡಗಳಲ್ಲಿ 12 ವರ್ಷದ ಬಾಲಕ ಸೇರಿದಂತೆ ಐದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಣ್ಣಿಗೆ ಗಂಭೀರ ಹಾನಿ ಮಾಡಿಕೊಂಡವರು ಇಲ್ಲಿನ ಮಿಂಟೋ ಆಸ್ಪತ್ರೆ, ಶಂಕರ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೆಲವರಿಗೆ ಮೈ, ಕೈಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪರಾಗಿದ್ದಾರೆ.
12 ವರ್ಷದ ಬಾಲಕನೋರ್ವ ಪಟಾಕಿ ಸಿಡಿಸುವಾಗ ಕಿಡಿಯೊಂದು ತಗುಲಿ ಗಾಯಗೊಂಡಿದ್ದು, ಇಲ್ಲಿನ ಮಿಂಟೋ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ, 14 ವರ್ಷದ ಬಾಲಕನೋರ್ವನಿಗೆ ರಾಕೆಟ್ ಸಿಡಿಮದ್ದು ತಗುಲಿ ಗಾಯಗೊಂಡಿದ್ದು, ಹೊರ ರೋಗಿಗಳ ವಿಭಾಗದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
15 ವರ್ಷದ ಬಾಲಕನೋರ್ವನ ಕಣ್ಣೀಗೆ ಗಂಭೀರ ಗಾಯವಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಡಿವಾಳ ಹಾಗೂ ಬೊಮ್ಮನಹಳ್ಳಿ ಬಳಿ ಮತ್ತಿಬ್ಬರು ಪಟಾಕಿ ಸಿಡಿಸುತ್ತಿರುವುದನ್ನು ನೋಡಿದ್ದ ವೇಳೆ ಬೆಂಕಿಯ ಕಿಡಿ ತಗುಲಿ ದೇಹಕ್ಕೆ ಹಾನಿಯಾಗಿದೆ. ಇವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೊತ್ತಾಗಿದೆ.
ಒಟ್ಟಿನಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವ ವೇಳೆ ಸಾರ್ವಜನಿಕರು ಎಚ್ಚರ ವಹಿಸಬೇಕು ಹಾಗೂ ಮಕ್ಕಳ ಕಣ್ಣಿಗೆ ಹಾನಿ ಆಗದಂತೆ ಕನ್ನಡಕ ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.