‘ಏಕ ಬಳಕೆ ಪ್ಲಾಸ್ಟಿಕ್’ ಅರಣ್ಯ ಪ್ರವೇಶಿಸದಂತೆ ಎರಡು ಹಂತದ ತಪಾಸಣೆಗೆ ಈಶ್ವರ ಖಂಡ್ರೆ ಚಾಲನೆ
ಬೆಂಗಳೂರು : ರಾಜ್ಯದ ಅರಣ್ಯ ಪ್ರದೇಶದೊಳಗಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಸಿಬ್ಬಂದಿ ತಪಾಸಣೆ ನಡೆಸಿದಾಗ, ವಾಹನದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರದಂದು ಬಂಡೀಪುರದಲ್ಲಿ ವಾಹನಗಳ ಎರಡು ಹಂತದ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಂಡೀಪುರ, ನಾಗರಹೊಳೆ ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದೊಳಗೆ ಸಾಗುವ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಪ್ರಯಾಣಿಕರಿಗೆ ಮೊದಲ ಹಂತದಲ್ಲಿ ಸ್ವಯಂ ಪ್ರೇರಿತವಾಗಿ ಕಸದ ಬುಟ್ಟಿಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ಹಾಕಲು ಸೂಚಿಸಲಾಗುತ್ತದೆ ಎಂದರು.
ಕಾಡಿನೊಳಗೆ ಏಕ ಬಳಕೆ ಪ್ಲಾಸ್ಟಿಕ್ ಪ್ರವೇಶಿಸಿದರೆ ವನ್ಯಜೀವಿಗಳು ಅದನ್ನು ತಿಂದು ಕಾಯಿಲೆಯಿಂದ ಸಾಯುತ್ತವೆ. ಹೀಗಾಗಿ 2ನೆ ಹಂತದಲ್ಲಿ ಸಿಬ್ಬಂದಿ ತಪಾಸಣೆ ನಡೆಸಿದಾಗ ವಾಹನದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಕಂಡು ಬಂದರೆ ವಾಹನ ಮಾಲಕರಿಗೆ ದಂಡ ಹಾಕಲಾಗುತ್ತದೆ ಎಂದು ಅವರು ಹೇಳಿದರು.
ನಮ್ಮ ಸಿಬ್ಬಂದಿ ಪ್ರತಿ ನಿತ್ಯ ಕಾಡಿನ ಮಾರ್ಗದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದಾರೆ. ಅವರ ಮೇಲೆ ವನ್ಯಜೀವಿಗಳು ದಾಳಿ ಮಾಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಈ ಎರಡು ಹಂತದ ತಪಾಸಣಾ ವ್ಯವಸ್ಥೆ ಪರಿಣಾಮಕಾರಿಯಾಗಲಿದೆ ಎಂದು ಅವರು ತಿಳಿಸಿದರು.