ಬೆಂಗಳೂರು | ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಿನಲ್ಲಿ ಡೀಪ್‍ಫೇಕ್: ಪ್ರಕರಣ ದಾಖಲು
ದ್ರೌಪದಿ ಮುರ್ಮು | Photo Credit : PTI
ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ‘ಡಿಪ್ ಫೇಕ್’ ವಿಡಿಯೋ ಮಾಡಿದ್ದ ವ್ಯಕ್ತಿ ಹಾಗೂ ಸಾಮಾಜಿಕ ಜಾಲತಾಣ ಖಾತೆಯ ವಿರುದ್ಧ ನಗರದ ಮಹಾಲಕ್ಷ್ಮಿ ಲೇಔಟ್ ಪಿಎಸ್‍ಐ ಡಿ.ರಾಕೇಶ್ ಎಫ್‍ಐಆರ್ ದಾಖಲಿಸಿದ್ದಾರೆ.
ಠಾಣೆಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಡಿ.5ರಂದು ಫೇಸ್ಬುಕ್ ಖಾತೆಗಳನ್ನು ವಿಕ್ಷಣೆ ಮಾಡುತ್ತಿದ್ದಾಗ ‘ದೋನೆ ಡ್ರಿಮ್ಸ್’ ಖಾತೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ಸರಕಾರದ ಹಣಕಾಸು ಯೋಜನೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋದ ಕೆಳಗೆ ನೀಡಿರುವ ಲಿಂಕ್‍ನಲ್ಲಿ ಹಣ ಹೂಡಿಕೆ ಮಾಡಿ ಕೆಲಸ ಮಾಡದೆ ಮನೆಯಲ್ಲೇ ಕುಳಿತು ಹೆಚ್ಚಿನ ಲಾಭ ಪಡೆಯಬಹುದು ಎಂದು ಡಿಪ್‍ಫೇಕ್ ವಿಡಿಯೋ ಎಂದು ತೋರುವ ಜಾಹೀರಾತನ್ನು ನೋಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಪ್ರಾಥಮಿಕ ತನಿಖೆ ನಡೆಸಿದ ವೇಳೆ ರಾಷ್ಟ್ರಪತಿ ಅವರ ಭಾಷಣದ ವಿಡಿಯೋವನ್ನು ಎಐ ತಂತ್ರಜ್ಞಾನದ ಮೂಲಕ ಡೀಪ್‍ಫೇಕ್ ಮಾಡಲಾಗಿದೆ ಎಂದು ಗೊತ್ತಾಗಿದೆ.
ಅಪರಿಚಿತ ಹಾಗೂ ಸಾಮಾಜಿಕ ಜಾಲತಾಣ ಖಾತೆದಾರನ ವಿರುದ್ಧ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡಿ, ಸಾರ್ವಜನಿಕರಿಂದ ಹಣ ಸುಲಿಗೆ ಹಾಗೂ ಆರ್ಥಿಕ ನಷ್ಟು ಉಂಟು ಮಾಡುತ್ತಿರುವ ಆಧಾರದ ಮೇಲೆ ಬಿಎನ್‍ಎಸ್ ಕಾಯ್ದೆ 2023, 318, 336(4) ಅಡಿ ಡಿ.12 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.