×
Ad

ವೆನೆಝುವೆಲಾ ಮೇಲಿನ ಅಮೆರಿಕ ದಾಳಿಗೆ ಆಕ್ರೋಶ; ಅಮೆರಿಕದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಪಿಎಂ, ಎಸ್‌ಯುಸಿಐ ಪ್ರತಿಭಟನೆ

Update: 2026-01-05 00:13 IST


ಬೆಂಗಳೂರು : ವೆನೆಝುವೆಲಾ ದೇಶದ ಮೇಲೆ ಅಮೆರಿಕ ನಡೆಸಿರುವ ದಾಳಿಯನ್ನು ಖಂಡಿಸಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಹಾಗೂ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಸಿಪಿಎಂ ಕಚೇರಿ ಸಮೀಪ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ ಉಭಯ ಪಕ್ಷಗಳ ಹಲವು ಮಂದಿ ಕಾರ್ಯಕರ್ತರು, ವೆನೆಝುವೆಲಾ ದೇಶದ ಮೇಲೆ ಅಮೆರಿಕ ದಾಳಿಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೆ, ಬಂಧಿಸಿರುವ ವೆನೆಝುವೆಲಾ ದೇಶದ ಅಧ್ಯಕ್ಷರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್, ವೆನೆಝುವೆಲಾ ದೇಶದ ನಡೆದಿರುವ ದಾಳಿಯನ್ನು ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣ. ವೆನೆಝುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರಕಾರ ಅಮೆರಿಕವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೆನೆಝುವೆಲಾ ದೇಶದ ಮೇಲೆ ಅಮೆರಿಕವು, ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೊಲಸ್ ಮಡುರೊ, ಪತ್ನಿ ಸಿಲಿಯಾ ಅವರನ್ನು ಅಪಹರಣ ಮಾಡಿರುವುದು ಸರಿಯಲ್ಲ. ಅಮೆರಿಕ ವೆನೆಝುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿರುವುದ್ದಕ್ಕಾಗಿ ಮಡುರೋ ಅವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ, ಚಂದ್ರಪ್ಪ ಹೊಸ್ಕೇರಾ, ಕೆ.ಎಸ್.ವಿಮಲಾ, ಟಿ.ಯಶವಂತ, ಸೂರಜ್ ನಿಧಿಯಂಗ್, ಹಲವರು ಭಾಗವಹಿಸಿದ್ದರು.

ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲಿ

ವೆನುಝುವೆಲಾದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷವು ಆಗ್ರಹಿಸಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಜ್ಞಾನಮೂರ್ತಿ ತಿಳಿಸಿದ್ದಾರೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವೆನುಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವುದು ‘ಘೋರ ಅಪರಾಧ’ ಮತ್ತು ‘ಹೇಡಿತನದ ಕೃತ್ಯ’. ಇದು ಅಮೆರಿಕದ ಆಕ್ರಮಣಕಾರಿ ನೀತಿಯ ಹಿಂದಿರುವ ಉದಾರವಾದಿ ಮುಖವಾಡವನ್ನು ಕಳಚಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಎಂ.ಎನ್.ಶ್ರೀರಾಮ್, ಎನ್.ರವಿ, ಶೋಭಾ ಎಸ್., ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News