ಕೋಗಿಲು | ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೂ ಹೋರಾಟ : ಮನೋಹರ್ ಎಲವರ್ತಿ
ಬೆಂಗಳೂರು : ಕೋಗಿಲು ಪ್ರಕರಣದಲ್ಲಿ ಮನೆಗಳು ನೆಲಸಮವಾದ ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ದುಡಿಯುವ ಜನರ ವೇದಿಕೆಯ ಮನೋಹರ್ ಎಲವರ್ತಿ ತಿಳಿಸಿದ್ದಾರೆ.
ರವಿವಾರ ಕೋಗಿಲು ಬಡಾವಣೆ ಸ್ಲಂ ನಿವಾಸಿಗಳ ಹೋರಾಟ ಸಮಿತಿ ವತಿಯಿಂದ ಮನೆ ತೆರವುಗೊಳಿಸುವ ಕಾರ್ಯಾಚರಣೆಯಿಂದ ಬಾಧಿಸಲ್ಪಟ್ಟ ಸಮುದಾಯಕ್ಕೆ ಪುನರ್ವಸತಿ ಕಲ್ಪಿಸುವಂತೆ ಕೋರಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಗಿಲು ಬಡವಾಣೆ ಸ್ಲಂ ನಿವಾಸಿಗಳ ಹೋರಾಟ ಸಮಿತಿಯು 10ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಿದೆ. ನಾವು ಸಾಂವಿಧಾನಿಕ ಮೌಲ್ಯಗಳು ಮತ್ತು ಶಾಂತಿಯುತ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದರು.
ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ, ಯಾವುದೇ ಪೂರ್ವ ಸೂಚನೆ ಇಲ್ಲದೇ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಇವರಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕು. ರಾಜ್ಯ ಮಾನವ ಹಕ್ಕುಗಳ ಆಯೋಗ ಮಾಡಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಜನಾಂದೋಲನ ಸಂಘಟನೆ ವತಿಯಿಂದ ಮರಿಯಪ್ಪ ಅವರು ಮಾತನಾಡುತ್ತಾ, ಇದುವರೆಗೂ ಸರಕಾರ ನೀಡಿದ ವಾಗ್ದಾನಗಳನ್ನು ಈಡೇರಿಸಿಲ್ಲ, ಹೋರಾಟ ಒಂದೇ ದಾರಿ, ನಮ್ಮ ಗುರಿ ಮುಟ್ಟುವವರೆಗೂ ನಾವು ಒಗ್ಗಟ್ಟಿನಿಂದ ಇರೋಣ ಎಂದು ತಿಳಿಸಿದರು.
ಸಿಐಟಿಯು ಉಮೇಶ್ ಮಾತನಾಡಿ, ಆರ್ಟಿಕಲ್ 19ರ ಪ್ರಕಾರ ಜನರಿಗೆ ಸ್ವತಂತ್ರವಾಗಿ ಎಲ್ಲಿ ಬೇಕಾದರೂ ಬದುಕುವ ಹಕ್ಕಿದೆ. ಮುಸಲ್ಮಾನರೆನ್ನುವ ಕಾರಣಕ್ಕಾಗಿ ವಿದೇಶಿಯರೆಂದು ಹಣೆಪಟ್ಟಿ ಹಚ್ಚುವುದು ಅಪರಾಧ ಎಂದು ಹೇಳಿದರು.
ಸಭೆಯಲ್ಲಿ ಸ್ಲಂ ಜನರ ಸಂಘಟನೆಯ ಐಸ್ಸಾಕ್ ಅಮೃತರಾಜ್, ವೇದಿಕೆಯ ನಂದಿನಿ ಸೇರಿದಂತೆ ಜನವಾದಿ ಮಹಿಳಾ ಸಂಘಟನೆ, ಸ್ಲಂ ಜನರ ಸಂಘಟನೆ, ಕರ್ನಾಟಕ ಜನಾಂದೋಲನ ಸಂಘಟನೆ, ಕರ್ನಾಟಕ ಜನಶಕ್ತಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್, ಎನ್‌ಎಫ್‌ಐಡಬ್ಲ್ಯೂಯ, ಸಿಐಟಿಯು ಹಾಗೂ ಇನ್ನಿತರ ಜನಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.