×
Ad

‘ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ’ ನಾಳೆ ಲೋಕಾರ್ಪಣೆ

Update: 2026-01-18 22:48 IST

ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಯಶೋಗಾಥೆಯ ಮೂರ್ತಿಶಿಲ್ಪ, ಉಬ್ಬುಶಿಲ್ಪ, ಮಾಹಿತಿ ಫಲಕ, ಕಥಾಚಿತ್ರ ಹಾಗೂ ರೊಬೋಟಿಕ್ ತಂತ್ರಜ್ಞಾನ, ಡೈಮೆನ್ನನ್ ಚಿತ್ರಮಂದಿರ-ಧ್ವನಿ ಪಭಾವಗಳೊಂದಿಗೆ ನೋಡುಗನ ಮನಸ್ಸಿನಲ್ಲಿ ರಾಯಣ್ಣನ ಕ್ರಾಂತಿಯ ಘಟನೆಗಳನ್ನು ಬಿಂಬಿಸುವ ವಸ್ತು ಸಂಗ್ರಹಾಲಯ (ವೀರಭೂಮಿ) ಹಾಗೂ ರಾಯಣ್ಣನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ(ಜ.19) ಲೋಕಾರ್ಪಣೆ ಮಾಡಲಿದ್ದಾರೆ.

ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಮಾಜಿ ಸಚಿವ ಹಾಗೂ ರಾಯಣ್ಣ ಅಧ್ಯಯನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಅಧಿಕಾರಿಗಳು, ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ನಂದಗಡದಲ್ಲಿನ ವಸ್ತು ಸಂಗ್ರಹಾಲಯದ ಸಿದ್ಧತೆಗಳನ್ನು ಪರಿಶೀಲಿಸಿದರು. ಅಲ್ಲದೆ, ನಾಳೆ(ಜ.19) ನಂದಗಡ ರೂರಲ್ ಎಜುಕೇಷನ್ ಸೊಸೈಟಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ದತೆಗಳನ್ನು ವೀಕ್ಷಿಸಿದರು.

ರಾಯಣ್ಣನವರ ಕುರಿತ ಪಾರಂಪರಿಕ ಮತ್ತು ಆಧುನಿಕ ಮಾಧ್ಯಮದ ದೃಶ್ಯವನ್ನು ಸಮ್ಮಿಶ್ರಗೊಳಿಸಿದ್ದು, ಭಿತ್ತಿಚಿತ್ರದಲ್ಲಿ ರಾಯಣ್ಣರ ವಂಶ, ಸಂಸ್ಥಾನದೊಂದಿಗೆ ಸಂಬಂಧ, ಭರಮಪ್ಪ ಹುಲಿಯನ್ನು ಸಂಹರಿಸಿದ್ದು, ಸಂಗೊಳ್ಳಿಯಲ್ಲಿನ ಮೆರವಣಿಗೆ, ರಾಯಣ್ಣ ಜನನ ವಿವರಗಳ ಭಿತ್ತಿಚಿತ್ರ ಪ್ರದರ್ಶನದ ಇರಲಿದೆ. ಅಲ್ಲದೆ, ರಾಯಣ್ಣನ ಬಾಲ್ಯದ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಗಳನ್ನು ಆಲೋಗ್ರಾಮ್ ಚಿತ್ರ ಮಂದಿರದಲ್ಲಿ ಬಿಂಬಿಸಲಾಗುವುದು ಎಂದು ತಿಳಿಸಲಾಗಿದೆ.

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ’ವನ್ನು 2016ರಲ್ಲಿ ರಚಿಸಲಾಗಿದ್ದು, ರಾಯಣ್ಣನ ಜನ್ಮಭೂಮಿಯಾದ ಸಂಗೊಳ್ಳಿ, ಹುತಾತ್ಮನಾದ ನಂದಗಡ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ರಾಯಣ್ಣ ಮತ್ತವರ ಸಂಗಡಿಗರ ನಾಡ ನಿಷ್ಠೆ, ಕುರಿತಂತೆ ಕಾರ್ಯಕ್ರಮಗಳನ್ನು ರೂಪಿಸಿ, ಯುವ ಸಮುದಾಯಕ್ಕೆ ತಲುಪಿಸಲು ರಾಜ್ಯ ಸರಕಾರ ಕ್ರಮ ವಹಿಸಿದೆ.

ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಲ್ಲಿ 100ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಿದೆ. ರಾಯಣ್ಣ ಬಾಲ್ಯದಿಂದ ಗಲ್ಲಿಗೇರಿಸಿದವರೆಗಿನ ಇತಿಹಾಸವನ್ನು ಸಾರುವ ಶೌರ್ಯಭೂಮಿ ನಿರ್ಮಾಣ, ಕಲ್ಯಾಣ ಮಂಟಪ ನವೀಕರಣ. ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಸ್ಥಳದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ(ವೀರಭೂಮಿ). ನಂದಗಡದಲ್ಲಿ ರಾಯಣ್ಣನ ಸಮಾಧಿ ಬಳಿಯಿರುವ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

ಸೈನಿಕ ಶಾಲೆ: ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದ್ದು, ರಕ್ಷಣಾ ಇಲಾಖೆಯ ಅಧೀನದಲ್ಲಿ ಬರುವ ಸೈನಿಕ ಸ್ಕೂಲ್ ಸೊಸೈಟಿಯಿಂದ ಅನುಮೋದನೆ ಪಡೆದು ಸೈನಿಕ ಶಾಲೆಯು ಸಿಎಂ ಅವರಿಂದ ಉದ್ಘಾಟನೆಯಾಗಿದ್ದು, 2022-23ನೆಯ ಸಾಲಿನಿಂದ 6ನೆ ತರಗತಿಯಿಂದ ಪ್ರಾರಂಭಗೊಂಡಿದೆ. ಪ್ರಸ್ತುತ 2025-26ನೆಯ ಸಾಲಿನಲ್ಲಿ ಸೈನಿಕ ಶಾಲೆಯಲ್ಲಿ 6, 7, 8 ಮತ್ತು 9ನೆ ತರಗತಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸೇರಿ ದೇಶದ ವಿವಿಧ ರಾಜ್ಯಗಳ ಒಟ್ಟು 388 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಶೌರ್ಯ ಭೂಮಿ: ಸಂಗೊಳ್ಳಿಯಲ್ಲಿ ರಾಯಣ್ಣ ಮತ್ತು ಅವನ ಚಟುವಟಿಕೆ ಕುರಿತಂತೆ 10 ಎಕರೆ ಪ್ರದೇಶದಲ್ಲಿ ಶಿಲ್ಪಗಳ ನಿರ್ಮಾಣವನ್ನು ಮಾಡಲಾಗಿದೆ. ಇದು ಅತ್ಯಂತ ಆಕರ್ಷಣೀಯವಾಗಿದ್ದು, ಸಾವಿರ ಸಂಖ್ಯೆಯಲ್ಲಿ ಪ್ರತಿದಿನವು ಪ್ರವಾಸಿಗಳು ಮಕ್ಕಳ ಸಹಿತ ಬಂದು ವೀಕ್ಷಿಸುತ್ತಿದ್ದಾರೆ. ರಾಯಣ್ಣ ಮತ್ತು ಆತನ ಸಂಗಡಿಗರನ್ನು ನೇಣು ಹಾಕಿದ ನಂದಗಡದಲ್ಲಿ ವೀರಭೂಮಿ ಹೆಸರಿನಲ್ಲಿ ವಸ್ತು ಸಂಗ್ರಹಾಲಯವು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News