×
Ad

ಮಕ್ಕಳ ಆಯೋಗಕ್ಕೆ ಅನರ್ಹರ ನೇಮಕ : ರಾಜ್ಯಪಾಲರಿಗೆ ದೂರು

Update: 2026-06-02 00:09 IST

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ 

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡುವೆ ತರಾತುರಿಯಲ್ಲಿ ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ಅನರ್ಹರನ್ನು ನೇಮಕ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೂಡಲೇ ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ‘ದಲಿತ ಸಂಘರ್ಷ ಸಮಿತಿ-ಕರ್ನಾಟಕ’ ದೂರು ಸಲ್ಲಿಸಿದೆ. ಜತೆಗೆ, ಸಾಹಿತಿಗಳು, ಮಕ್ಕಳ ಪರ ಹೋರಾಟಗಾರರು ರಾಜ್ಯ ಸರಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮೇ 28ರಂದು ರಾಜೀನಾಮೆ ನೀಡುತ್ತಾರೆಂದು ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ ಮೇ 27ರಂದೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಕೆಲ ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ, ಇದನ್ನು ಪರಿಶೀಲನೆ ನಡೆಸಿದಾಗ ಅನೇಕ ಸದಸ್ಯರು ಆಯೋಗಕ್ಕೆ ಮೀಸಲಾಗಿರುವ ಅರ್ಹತೆಯನ್ನೆ ಪಡೆದುಕೊಂಡಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕದ ವಿಭಾಗೀಯ ಸಂಚಾಲಕ ಎ.ಮಂಜುನಾಥ್ ಆರೋಪಿಸಿದ್ದಾರೆ.

ಇದೇ ವಿಚಾರವಾಗಿ ಮಕ್ಕಳ ಪರ ಹೋರಾಟಗಾರ, ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ ಪ್ರತಿಕ್ರಿಯಿಸಿ, ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಂತುಗಳ ಲೆಕ್ಕದಲ್ಲಿ ಆಯೋಗದ ಸದಸ್ಯರ ಆಯ್ಕೆ ನಡೆದಿದೆ. ಈಗ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಹೊರಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಯೋಗಕ್ಕೆ ಹೊಸ ಅಧ್ಯಕ್ಷ ಆಗಿರುವ ಸಂತೋಷ್ ಕುಮಾರ್ ಎಂಬಾತನಿಗೂ ಮಕ್ಕಳ ಹಕ್ಕುಗಳ ಕ್ಷೇತ್ರದ ಪ್ರಾಥಮಿಕ ಜ್ಞಾನವಿಲ್ಲ. ಅವರನ್ನು ನೇಮಕ ಮಾಡುವ ಮೂಲಕ ಮಕ್ಕಳ ಹಕ್ಕುಗಳ ಕ್ಷೇತ್ರವನ್ನೇ ನಾಶ ಮಾಡುವ ಬಹುದೊಡ್ಡ ಹುನ್ನಾರ ನಡೆದಿದೆ ಎಂದು ಅವರು ಆಪಾದಿಸಿದ್ದಾರೆ.

ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಪ್ರತಿಕ್ರಿಯಿಸಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಯಲ್ಲಿ ಮಾನದಂಡನೆ ಉಲ್ಲಂಘನೆ ಆಗಿರಬಹುದು. ಈ ಸಂಬಂಧ ಕಾನೂನು ಹೋರಾಟ ನಡೆಸಬೇಕು. ಮಕ್ಕಳ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಕತ್ತಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಆನಂತರ ಸಚಿವ ಸಂಪುಟ ವಿಜರ್ಸನೆ ಆಗಲಿದೆ ಎಂದು ಅರಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಉನ್ನತ ಅಧಿಕಾರಿಗಳು ತಮ್ಮಗೆ ಆಪ್ತರಾಗಿರುವ ವ್ಯಕ್ತಿಗಳನ್ನು ನೇಮಕ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ, ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕೂಡಲೇ ಆದೇಶ ರದ್ದುಗೊಳಿಸಿ ಅರ್ಹರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಯ ಸ್ಥಾಪಕನಿಗೂ ಸ್ಥಾನ?

ಆಯೋಗ ರಾಜ್ಯ ಮಟ್ಟದಲ್ಲಿ ಶಿಕ್ಷಣ ಹಕ್ಕಿನ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಸಾಂವಿಧಾನಿಕ ಜವಾಬ್ದಾರಿ ಹೊಂದಿರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ನಡೆಸಬೇಕಾಗಿದೆ. ಆದರೆ, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಸತ್ಯ ನಾರಾಯಣ ಶೆಟ್ಟಿ ಎಂಬಾತನ್ನು ಆಯೋಗದ ನೂತನ ಸದಸ್ಯ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಖಾಸಗಿ ಶಾಲೆಗಳನ್ನು ಪ್ರತಿನಿಧಿಸುವ ಸದಸ್ಯರಿಂದ ನಿಷ್ಪಕ್ಷವಾಗಿ ನ್ಯಾಯ ಒದಗಿಸಲು ಅಸಾಧ್ಯ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕದ ವಿಭಾಗೀಯ ಸಂಚಾಲಕ ಎ.ಮಂಜುನಾಥ್ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News