ಹಿಮಾಚಲ ಪ್ರದೇಶದಲ್ಲಿ ಬೆಂಗಳೂರಿನ 7 ಮಂದಿ ಮೃತ್ಯು; ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ವಿಜಯೇಂದ್ರ ಆಗ್ರಹ
ಬೆಂಗಳೂರು : ಹಿಮಾಚಲ ಪ್ರದೇಶದ ಚಂಬಾದ ಸಚ್ ಪಾಸ್ ಬಳಿ ನಿನ್ನೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಬೆಂಗಳೂರಿನ ಎರಡು ಕುಟುಂಬಗಳ ಒಟ್ಟು 7 ಜನರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಪ್ರವಾಸಕ್ಕೆ ತೆರಳಿದ್ದ ಕುಟುಂಬಗಳು ಹೀಗೆ ದುರಂತ ಅಂತ್ಯ ಕಂಡಿರುವುದು ನಿಜಕ್ಕೂ ಅತ್ಯಂತ ದುಃಖದ ಸಂಗತಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸರಕಾರ ಹಿಮಾಚಲ ಪ್ರದೇಶ ಸರಕಾರದೊಂದಿಗೆ ಸಂಪರ್ಕ, ಸಮನ್ವಯ ಸಾಧಿಸಿ ಮೃತರ ಪಾರ್ಥಿವ ಶರೀರಗಳನ್ನು ಬೆಂಗಳೂರಿಗೆ ಮರಳಿ ತರುವುದೂ ಸೇರಿದಂತೆ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಶೋಕತಪ್ತ ಕುಟುಂಬಗಳ ಸದಸ್ಯರಿಗೆ ಈ ಅನಿರೀಕ್ಷಿತ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.