×
Ad

ರಾಜ್ಯಪಾಲರ ಸಂಚಾರದ ವೇಳೆ ಝೀರೊ ಟ್ರಾಫಿಕ್; ಕಾರಿನಲ್ಲೇ ಸಿಲುಕಿದ ಗರ್ಭಿಣಿ, ರಸ್ತೆಯಲ್ಲೇ ಪ್ರತಿಭಟನೆಗಿಳಿದ ಪತಿ : ತನಿಖೆಗೆ ಆದೇಶ

Update: 2026-06-02 00:16 IST

ಬೆಂಗಳೂರು : ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್‌ನಿಂದಾಗಿ ಗರ್ಭಿಣಿ ಪತ್ನಿ ರಸ್ತೆ ಮಧ್ಯೆ ಕಾರಿನಲ್ಲೇ ಸಿಲುಕಿಕೊಂಡಿದ್ದಾಳೆ ಎಂದು ಆರೋಪಿಸಿ ಪತಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ, ಈ ವಿಚಾರವಾಗಿ ತನಿಖೆಗೆ ಆದೇಶಿಸಲಾಗಿದೆ.

ಬೆಂಗಳೂರು ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೇ31ರ ರವಿವಾರ ಈ ಘಟನೆ ನಡೆದಿದೆ. ಗರ್ಭಿಣಿಯ ಪತಿ ಪ್ರತಿಭಟನೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೊಳಗಾದ ಬೆನ್ನಲ್ಲೇ, ಈ ಘಟನೆ ಕುರಿತು ಜೂ.1ರಂದು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೇ 31ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತೆರಳುತ್ತಿದ್ದ ವೇಳೆ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವ್ಯಾಪಕ ಸಂಚಾರ ದಟ್ಟಣೆ ಸೃಷ್ಟಿಯಾಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಮೊದಲೇ ಕಿರಿದಾಗಿದ್ದ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿತ್ತು. ಈ ಸಂಚಾರ ದಟ್ಟಣೆಯ ನಡುವೆ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಲಾಗದೆ ಆ ವ್ಯಕ್ತಿ ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರು.

ಸಾರ್ವಜನಿಕರಿಗೆ ಮಹತ್ವ ಯಾವಾಗ ಸಿಗಲಿದೆ?

ಘಟನೆಯ ಸಂಬಂಧ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಂಡ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ, ‘ಅಂಡರ್‌ಪಾಸ್ ಕಾಮಗಾರಿಯಿಂದ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಈಗಾಗಲೇ ತೀವ್ರ ದಟ್ಟಣೆಯಿದೆ. ರಾಜ್ಯಪಾಲರ ವಾಹನ ದಳದ ಸಂಚಾರಕ್ಕಾಗಿ ಸುಮಾರು 30 ನಿಮಿಷಗಳ ಕಾಲ ಸಂಪೂರ್ಣ ಟ್ರಾಫಿಕ್ ಸ್ಥಗಿತಗೊಳಿಸಲಾಯಿತು. ಗರ್ಭಿಣಿ ಪತ್ನಿಯನ್ನು ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಈ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು. ಸಾರ್ವಜನಿಕರ ಅನುಕೂಲಕ್ಕೂ ವಿಐಪಿಗಳ ಅನುಕೂಲದಷ್ಟೇ ಮಹತ್ವ ಯಾವಾಗ ಸಿಗಲಿದೆ? ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News