‘ಮಾಸ್ಟರ್ ಸ್ಟ್ರೋಕ್ ಎಂದರೆ ರೈತರನ್ನು ಒಕ್ಕಲೆಬ್ಬಿಸುವುದಲ್ಲ’ : ಪ್ರಿಯಾಂಕ್ ಖರ್ಗೆ ವಿರುದ್ಧ ಜೆಡಿಎಸ್ ಆಕ್ರೋಶ
ಬೆಂಗಳೂರು : ಮಾಸ್ಟರ್ ಸ್ಟ್ರೋಕ್ ಎಂದರೆ ರೈತರನ್ನು ಒಕ್ಕಲೆಬ್ಬಿಸುವುದಲ್ಲ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ. ‘ಇಷ್ಟವಿಲ್ಲದಿದ್ದರೆ ಹೋಗಬಹುದು’ ಎನ್ನುವ ನಿಮ್ಮ ಅಹಂಕಾರದ ಮಾತುಗಳೇ ಇದಕ್ಕೆ ಸಾಕ್ಷಿ ಎಂದು ಜೆಡಿಎಸ್ ಕಿಡಿಗಾರಿದೆ.
ಶನಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ಕಲಬುರಗಿಯಲ್ಲಿ ಬೆಳೆಹಾನಿಯಿಂದ ನೊಂದ ರೈತನೊಬ್ಬ ಕಷ್ಟ ಹೇಳಿಕೊಳ್ಳಲು ನಿಮ್ಮ ಮನೆ ಬಾಗಿಲಿಗೆ ಬಂದಾಗ ನಿಮ್ಮ ತಂದೆ ಆ ರೈತನಿಗೆ ಏನು ಹೇಳಿ ಕಳುಹಿಸಿದ್ದರು ಎಂಬುದು ಇಡೀ ರಾಜ್ಯಕ್ಕೆ ನೆನಪಿದೆ ಖರ್ಗೆಯವರೇ ಎಂದು ಹೇಳಿದೆ.
450 ದಿನಗಳಿಂದ ಹೋರಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದಲ್ಲ ಸಚಿವರೇ, ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿ ಭಾಗದ ರೈತರನ್ನು ವಿಧಾನಸೌಧಕ್ಕೆ ಕರೆಸಿ, ಅಹವಾಲು ಆಲಿಸಿ, ಅವರ ಮಾತಿಗೆ ಗೌರವ ಕೊಟ್ಟು ಯೋಜನೆಯನ್ನೇ ಕೈಬಿಟ್ಟಿದ್ದರು. ಈ ಇತಿಹಾಸ ನಿಮಗೊತ್ತಿಲ್ಲವೇ ಅಥವಾ ಜಾಣ ಕುರುಡೇ ? ಎಂದು ಜೆಡಿಎಸ್ ಪ್ರಶ್ನಿಸಿದೆ.
ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಅಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಸತ್ಯ ಶೋಧನಾ ಸಮಿತಿ ರಚಿಸಿತ್ತು. ಈ ಬಗ್ಗೆ ಕಾಂಗ್ರೆಸ್ಸಿಗರು ಯಾಕೆ ತುಟಿ ಬಿಚ್ಚುತ್ತಿಲ್ಲ ? ಶೇ.80ರಷ್ಟು ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದು, ಒಂದಿಂಚು ಭೂಸ್ವಾಧೀನಕ್ಕೂ ಒಪ್ಪಿಲ್ಲ. ಹೀಗಿರುವಾಗ ಟೌನ್ ಶಿಪ್ ಕುಮಾರಸ್ವಾಮಿಯವರ ಹಳೇ ಯೋಜನೆ ಎಂದು ನೆಪವೊಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವುದು ಕಾಂಗ್ರೆಸ್ಸಿಗರ ನಾಚಿಕೆಗೇಡು ರಾಜಕಾರಣ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಡಿ.ಕೆ.ಶಿವಕುಮಾರ್ ‘ಅಭಿವೃದ್ಧಿ' ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳುವ ಹಪಾಹಪಿತನವಾಗಿದ್ದು, ಈ ಯೋಜನೆಯಲ್ಲಿ ರೈತರು ಸಂತ್ರಸ್ತರಾಗುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ರೈತರ ಹಿತ ಮುಖ್ಯವೇ ಹೊರತು ರಿಯಲ್ ಎಸ್ಟೇಟ್ ದಂಧೆಯಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ.