×
Ad

ಶೌಚಗುಂಡಿ ಸ್ವಚ್ಛತೆಗೆ ಯಂತ್ರ ಬಳಸಲು ಸಚಿವ ಈಶ್ವರ ಖಂಡ್ರೆ ಸೂಚನೆ

Update: 2026-06-13 18:57 IST

ಬೆಂಗಳೂರು : ರಾಜ್ಯದಲ್ಲಿನ ಯಾವುದೇ ಶೌಚ(ಮಲ)ಗುಂಡಿಯ ಸ್ವಚ್ಛತೆಯನ್ನು ಕರ್ಮಚಾರಿಗಳ ಕೈಯಿಂದ ಮಾಡಿಸಿದರೆ ಕಾನೂನಿನ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು. ಯಂತ್ರಗಳ ಮೂಲಕವೇ ಶೌಚ ಗುಂಡಿಗಳ ಸ್ವಚ್ಛತೆ ಮಾಡಬೇಕೆಂದು ಸೂಚಿಸಿದ್ದು, ಇದಕ್ಕೆ ಅಗತ್ಯವಿರುವ ಜೆಟ್ಟಿಂಗ್, ಸಕ್ಕಿಂಗ್ ಯಂತ್ರ ಖರೀದಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಶನಿವಾರ ದೇವನಹಳ್ಳಿಯ ಜಿಲ್ಲಾ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ಮಲತ್ಯಾಜ್ಯ ಸಂಸ್ಕರಣಾ ಘಟಕ (ಎಫ್‍ಎಸ್‍ಟಿಪಿ) ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಪಂಚಾಯ್ತಿ ಮಟ್ಟದಲ್ಲೂ ಎಫ್‍ಎಸ್‍ಟಿಪಿ ನಿರ್ಮಿಸಲಾಗುವುದು ಎಂದರು.

ಜಿಯೋ ಟ್ಯಾಗ್: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯ್ತಿ ಸೃಜಿಸಿರುವ ಎಲ್ಲ ಸರಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡಬೇಕು. ಗ್ರಾಮಾಂತರ ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಪಂಚಾಯ್ತಿಯ ಯಾವುದೇ ಆಸ್ತಿ ಕಬಳಿಕೆ ಆಗದಂತೆ ಮತ್ತು ಗುಣಮಟ್ಟದ ಖಾತ್ರಿಗೆ ಜಿಯೋ ಟ್ಯಾಗ್ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಅವಧಿ ಮುಗಿದಿರುವ ಎಲ್ಲ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಇಲಾಖೆ ಈಗಾಗಲೇ ಕ್ರಮ ವಹಿಸಿದ್ದು, ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಯುತ್ತದೆ. ಅಧಿಕಾರ ವಿಕೇಂದ್ರೀಕರಣದ ಉದ್ದೇಶವನ್ನು ಸರಕಾರ ಈಡೇರಿಸುತ್ತದೆ ಎಂದ ಅವರು, ಜಲಜೀವನ್ ಮಿಷನ್ ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ಯಾರೇ ಗುತ್ತಿಗೆದಾರರು ವಿಳಂಬ ಮಾಡಿದ್ದರೆ, ನೋಟಿಸ್ ಜಾರಿ ಮಾಡಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗುವುದು ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News