27 ಆಹಾರ ನಿಗಮದ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ನಡೆಯುತ್ತಿದ್ದ ಅಕ್ರಮ ವಹಿವಾಟು ಮತ್ತು ವಂಚನೆಯನ್ನು ಪತ್ತೆಹಚ್ಚಿರುವ ಲೋಕಾಯುಕ್ತ ಪೊಲೀಸರು, ಬೆಂಗಳೂರು ನಗರದ 22 ಹಾಗೂ ಬೆಂಗಳೂರು ಗ್ರಾಮಾಂತರದ 5 ಸೇರಿದಂತೆ ಒಟ್ಟು 27 ಕಡೆಗಳಲ್ಲಿ ಏಕಕಾಲಕ್ಕೆ ಆಹಾರ ಸರಬರಾಜು ನಿಗಮದ ಗೋದಾಮುಗಳ ಮೇಲೆ ದಾಳಿ ಕೈಗೊಂಡು ಪರಿಶೀಲನೆ ನಡೆಸಲಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಶಾಂತಿನಗರದ ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿರುವ 50 ಕೆ.ಜಿ.ಯ ಸುಮಾರು 1,130 ಅಕ್ಕಿ ಮೂಟೆಗಳಿಗೂ ನೀಡಿರುವ ಲೆಕ್ಕಕ್ಕೂ ಸಂಬಂಧವೇ ಇಲ್ಲ ಎಂದು ಗೊತ್ತಾಗಿದೆ. ಈ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 5 ಜನ ಕಾರ್ಮಿಕರಿಗೆ ಯಾವುದೇ ಜೀವ ವಿಮೆ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ತಿಳಿದುಬಂದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬೆಂಗಳೂರು ದಕ್ಷಿಣದ ಬೊಬ್ಬನಹಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತ ದಾಳಿ ಮಾಡಿದ ವೇಳೆ ಉಸ್ತುವಾರಿ ಅಧಿಕಾರಿ ಅಚ್ಯುತ್ ಅವರು ಯಾವುದೇ ಮಾಹಿತಿ ನೀಡದೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಸ್ಥಳದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಶಿವಲಿಂಗಯ್ಯ ಸ್ವೀಕರಿಸಿದ ಅಕ್ಕಿ ಮೂಟೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಇದೇ ವೇಳೆಗೆ ನಿಯಮಬಾಹಿರವಾಗಿ ಲಾರಿಯೊಂದಕ್ಕೆ 25 ಟನ್ ಅಕ್ಕಿ ಮೂಟೆಗಳನ್ನು ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ. ಇಲ್ಲಿ ಕೆಲಸ ಮಾಡುವ 10 ಜನ ಕಾರ್ಮಿಕರಿಗೂ ಯಾವುದೇ ಜೀವ ವಿಮೆಯ ರಕ್ಷಣೆ ಇರಲಿಲ್ಲ ಎಂದು ಗೊತ್ತಾಗಿದೆ.
ಬಸವನಗುಡಿಯಲ್ಲಿರುವ ಆಹಾರ ಸರಬರಾಜು ನಿಗಮದ ಗೋದಾಮಿನಲ್ಲಿ ಅಧಿಕಾರಿಗಳು ನೀಡಿದ ಲಿಖಿತ ಲೆಕ್ಕಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ಅಕ್ಕಿ ಮೂಟೆಗಳು ಇರುವುದು ಪತ್ತೆಯಾಗಿದೆ. ದಾಳಿಯ ವೇಳೆ ಅಧಿಕಾರಿಗಳ ಬಳಿ ಇದ್ದ ನಗದಿಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ದಾಖಲೆ ನೀಡಿಲ್ಲ. ಇದರೊಂದಿಗೆ ಗೋದಾಮಿನ ಕಾರ್ಮಿಕರಿಗೆ ಜೀವ ವಿಮೆ, ಇಎಸ್‍ಐ ಹಾಗೂ ಪಿಎಫ್ ಸೌಲಭ್ಯಗಳನ್ನು ನೀಡದೆ ವಂಚಿಸಿರುವುದಾಗಿ ಲೋಕಾಯುಕ್ತ ಮೂಲಗಳಿಂದ ತಿಳಿದುಬಂದಿದೆ
ಹನುಮಂತನಗರದ ಗೋದಾಮಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಸಾಕಷ್ಟು ಅಕ್ರಮ ವಹಿವಾಟು ಬೆಳಕಿಗೆ ಬಂದಿದೆ. ಜೊತೆಗೆ, ಇಲ್ಲಿ ಕೆಲಸ ಮಾಡುವ ನಾಲ್ಕು ಜನ ಕಾರ್ಮಿಕರಿಗೂ ಜೀವ ವಿಮೆ, ಇಎಸ್‍ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಒದಗಿಸದೆ ಶೋಷಣೆ ಮಾಡಲಾಗುತ್ತಿತ್ತು ಎಂಬುದು ಲೋಕಾಯುಕ್ತ ಮೂಲಗಳಿಂದ ತಿಳಿದುಬಂದಿದೆ.