×
Ad

ಬಿತ್ತನೆ ಬೀಜ, ರಸಗೊಬ್ಬರ ಅಕ್ರಮ ದಾಸ್ತಾನು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ : ಕೃಷಿ ಇಲಾಖೆ ಎಚ್ಚರಿಕೆ

Update: 2026-07-05 18:31 IST

ಬೆಂಗಳೂರು : ಬಿತ್ತನೆ ಬೀಜ, ರಸಗೊಬ್ಬರ ಮಾರಾಟಗಾರರು ನಿಯಮಬಾಹಿರವಾಗಿ ಅಕ್ರಮ ದಾಸ್ತಾನು ಮಾಡಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು ಎಂದು ಕೃಷಿ ಇಲಾಖೆಯು ಎಚ್ಚರಿಕೆ ನೀಡಿದೆ.

ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಇಲಾಖೆ, ‘ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು, ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ ಬಿತ್ತನೆಬೀಜ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದೆ.

ಅನಧಿಕೃತವಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ಮಾರಾಟ ನಿಯಂತ್ರಿಸಲು ಕೃಷಿ ಇಲಾಖೆ ಆಯುಕ್ತ ಡಾ.ಬಿ.ಸಿ.ಸತೀಶ್ ಸೂಚನೆ ಮೇರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆ ಸಾಲಗಾಮೆ ಹೋಬಳಿಯ ಕೊಂಡಜ್ಜಿಕೊಪ್ಪಲುವಿನ ಕಾರ್ತಿಕ ಟ್ರೇಡರ್ಸ್‍ನಲ್ಲಿ ಬೀಜ ಕಾಯ್ದೆ 1966 ಉಲ್ಲಂಘಿಸಿ ಅನುಮತಿ ಇಲ್ಲದೇ ದಾಸ್ತಾನು ಮಾಡಲಾಗಿದ್ದ ಸುಮಾರು 85ಸಾವಿರ ರೂ.ಮೌಲ್ಯದ 180 ಕೆ.ಜಿ.ಹೈಬ್ರೀಡ್ ಮೆಕ್ಕೆಜೋಳ ಬೀಜಗಳನ್ನು.

ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಪುಷ್ಪಗಿರಿ ಅಗ್ರೋ ಕೇಂದ್ರದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 12ಸಾವಿರ ರೂ.ಮೌಲ್ಯದ 30ಕೆ.ಜಿ.ಹೈಬ್ರಿಡ್ ಮೆಕ್ಕೆಜೋಳ ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಮದಿಹಳ್ಳಿಯ ವೆಂಕಟೇಶ್ವರ ಟ್ರೇಡರ್ಸ್‍ನಲ್ಲಿ ಕಾನೂನು ಉಲ್ಲಂಘಿಸಿ ದಾಸ್ತಾನು ಮಾಡಲಾಗಿದ್ದ ಸುಮಾರು 1.77ಲಕ್ಷ ಮೌಲ್ಯದ 88 ಚೀಲ ಯೂರಿಯಾ, ಪಾಸ್ಫೋ ಜಿಪ್ಸಮ್ ಗ್ರ್ಯಾನ್ಯುಲ್ಸ್ ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಗೇಶಿ ಹೋಬಳಿಯ ಹಸಿರು ಹೈಟೆಕ್ ಸೀಡ್ಸ್ ಕೇಂದ್ರದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 86ಸಾವಿರ ರೂ.ಮೌಲ್ಯದ 22ಲೀಟರ್ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ಮಂಡ್ಯ ತಾಲೂಕಿನ ಇಂದುವಾಳದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 300ಚೀಲ ಎನ್‍ಎಫ್‍ಎಲ್ ಯೂರಿಯಾವನ್ನು ಕೃಷಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News