ಬೆಂಗಳೂರು : ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕನ್ನಡ ಪ್ರಾಧ್ಯಾಪಕಿ ಡಾ.ಮಲರ್ ವಿಳಿ.ಕೆ, ಭಾಷಾಂತರಕಾರರಾದ ಡಾ.ಸೂರ್ಯಕಾಂತ ಸುಜ್ಯಾತ್, ಡಾ.ನಾಗಣ್ಣ ಸಿ. ಹಾಗೂ ಡಾ.ಕೇಶವ ಶರ್ಮ ಕೆ. ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2026ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ವಾಂಸರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಾರ್ಷಿಕ ಗೌರವ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಯು 50 ಸಾವಿರ ರೂ. ನಗದು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಅನುವಾದ ವಿಭಾಗದಲ್ಲಿ ಪ್ರಮೋದ್ ಮುತಾಲಿಕ ಅವರ swan song ಕೃತಿ, ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದದಲ್ಲಿ ಕೆ.ಶ್ರೀನಾಥ್ ಅವರ ಅಘನಾಶಿನಿ ಭಾಗ-1 ಮತ್ತು ಭಾಗ-2 ಕೃತಿ, ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ವಿಭಾಗದಲ್ಲಿ ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಪಂಚತಂತ್ರ: ಮೂಲ ಶ್ಲೋಕಸಹಿತ ಕೃತಿ, ಕನಕರಾಜ್ ಆರನಕಟ್ಟೆ ಮತ್ತು ಅಶೋಕ್ ಕುಮಾರ್ ಎಂ. ಅವರ ಇಮೈಯಮ್ ಕಥೆಗಳು ಕೃತಿ ಹಾಗೂ ಕನ್ನಡದಿಂದ ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಗಳಿಗೆ ಅನುವಾದ ವಿಭಾಗದಲ್ಲಿ ಚಂದ್ರಶೇಖರ ಮದಭಾವಿ ಅವರ ಹೃದಯ ದೀಪ್ ಕೃತಿಯು 2025ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ. ಪುಸ್ತಕ ಬಹುಮಾನವು 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor