ಎಇಇ ನೇಮಕ ಅಕ್ರಮದಲ್ಲಿ ಪ್ರಿಯಾಂಕ್ ಖರ್ಗೆಗೆ ಸಂಬಂಧವಿದೆ : ಎಚ್.ಡಿ.ಕುಮಾರಸ್ವಾಮಿ
ಹೊಸದಿಲ್ಲಿ : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್(ಎಇಇ) ಗ್ರೇಡ್ 1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ನಡೆದಿರುವ ಅಕ್ರಮದಿಂದ ಸಚಿವ ಪ್ರಿಯಾಂಕ್ ಖರ್ಗೆ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ರೆಸಾರ್ಟ್‍ನಲ್ಲಿ ಕೂರಿಸಿ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಓಎಂಆರ್ ಶೀಟ್‍ಗಳಲ್ಲಿ ಗುರುತು ಹಾಕಿಸಿರುವ ಅಕ್ರಮದಿಂದ ಅವರು ಪಾರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ನಡೆಯುವ ಎಲ್ಲ ವಿಷಯಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ ಸ್ವತಃ ತಾವೇ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ ಎಂದರೆ ಹೇಗೆ? ಇಂತಹ ಅತಿಯಾದ ಜಾಣತನ ಪ್ರದರ್ಶಿಸುವ ಅಗತ್ಯವಿಲ್ಲ. ಜನರು ಬಹಳ ಬುದ್ಧಿವಂತರಿದ್ದಾರೆ. ಎಲ್ಲ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗ್ರೇಡ್ 1 ಹುದ್ದೆ ಮತ್ತು ಪಶುವೈದ್ಯಾಧಿಕಾರಿಗಳ ಆಯ್ಕೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಬಹಿರಂಗವಾಗಿ ಯುವಜನರ ಜೊತೆ ಸಂವಾದ ನಡೆಸಬೇಕು. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ದೇಶದಲ್ಲಿಯೇ ಇದ್ದರೆ ಅವರು ತಕ್ಷಣವೇ ಬೆಂಗಳೂರಿಗೆ ಬಂದು ನಿರುದ್ಯೋಗಿ ಯುವಕರ ಮನವಿಗಳನ್ನು ಆಲಿಸಬೇಕು. ಆಗ ಅವರ ಅನುಭವ ಮತ್ತಷ್ಟು ವಿಸ್ತಾರಗೊಳ್ಳುತ್ತದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಕುಮಾರಸ್ವಾಮಿ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಲಿ ಎಂದು ಪ್ರಿಯಾಂಕ್ ಖರ್ಗೆ ಬಾಲಿಶ ಹೇಳಿಕೆ ನೀಡಿದ್ದಾರೆ. ನಾನು ಕೆಪಿಎಸ್‍ಸಿ ಹಗರಣಗಳ ಬಗ್ಗೆ ಚರ್ಚೆ ಮಾಡಿರುವ ಎಲ್ಲ ಸಂದರ್ಭಗಳಲ್ಲಿಯೂ ದಾಖಲೆಗಳನ್ನು ಮುಂದಿಟ್ಟೇ ಮಾತನಾಡಿದ್ದೇನೆ. ತನಿಖಾ ವರದಿ, ಕಾರ್ಬನ್'ನಿಂದ ತಿದ್ದಿದ ಓಎಂಆರ್ ಶೀಟ್'ಗಳು, ಸಬ್ ಕಮಿಟಿ ವರದಿ ಇತ್ಯಾದಿಗಳನ್ನು ಬಿಡುಗಡೆ ಮಾಡಿದ್ದೇನೆ. ಎಇಇ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿಯೆ ಸದನದಲ್ಲಿ ಉತ್ತರ ನೀಡಿದ್ದಾರೆ. ಇದಕ್ಕಿಂತ ಇನ್ನೇನು ದಾಖಲೆಗಳನ್ನು ಒದಗಿಸಬೇಕು? ಎಂದು ಅವರು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ನನಗೆ ಸವಾಲು ಹಾಕಿದ್ದಾರೆ. ನಾನು ಅವರ ರಾಜಕೀಯ ನಿವೃತ್ತಿ ಬಯಸುವುದಿಲ್ಲ. ಆದರೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂಬುದೇ ನನ್ನ ಆಗ್ರಹ. ಅಕ್ರಮ ನಡೆದಿರುವುದು ಪ್ರಿಯಾಂಕ್ ಖರ್ಗೆ ಸೇರಿ ಸರಕಾರದಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿತ್ತು ಎಂದು ಅವರು ದೂರಿದರು.