ಸೆ.20ರಂದು ಅರಸೀಕೆರೆ ಕೋರ್ಟ್ ಉದ್ಘಾಟನೆಗೆ ಕೆ.ಎಂ.ಶಿವಲಿಂಗೇಗೌಡ ನಿರ್ದೇಶನ
ಬೆಂಗಳೂರು : ಸೆ.20ರಂದು ಅರಸೀಕೆರೆ ಕೋರ್ಟ್ ಉದ್ಘಾಟನೆಗೆ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ನಿರ್ದೇಶನ ನೀಡಿದ್ದಾರೆ.
ನಗರದ ವಿಕಾಸ ಸೌಧದ ಸಭಾಂಗಣದಲ್ಲಿ ಸೋಮವಾರ ಅರಸಿಕೆರೆಯ ಹೊಸ ನ್ಯಾಯಾಲಯ ಸಂಕೀರ್ಣ ಮತ್ತು ಚನ್ನರಾಯಪಟ್ಟಣ ತಾಲೂಕು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಅರಸಿಕೆರೆ ಇತಿಹಾಸದಲ್ಲೇ ಒಂದು ಉತ್ತಮ ಕೋರ್ಟ್ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ. ಸೆ.6ರಂದು ಸಭೆ ಸೇರಿ ಉದ್ಘಾಟನಾ ಕಾರ್ಯಕ್ರಮಗಳ ಅಂತಿಮ ರೂಪುರೇಷೆಗಳನ್ನು ನಿರ್ಧರಿಸೋಣ ಎಂದು ತಿಳಿಸಿದರು.
ನ್ಯಾಯಾಂಗ ಶ್ರೇಷ್ಠ. ನ್ಯಾಯಮೂರ್ತಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಾಕಿಯಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕೆಲಸಗಳನ್ನು ಮಾಡಬೇಕು. ಈಗಾಗಲೇ ಸಾಕಷ್ಟು ತಡವಾಗಿದೆ. ವಿಳಂಬ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಿಳಿಸಿದರು.
ವಿದ್ಯುತ್ ಸಂಪರ್ಕ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಸಿದ್ಧನಿದ್ದೇನೆ ಎಂದರು.
ಇದೇ ವೇಳೆ, ಹಾಸನ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿದ್ದೇನೆ. ಪ್ರಮುಖವಾಗಿ ವಿಮಾನ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಮತ್ತಿತರ ಮಹತ್ವದ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದರು.
ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ನ್ಯಾಯವಾದಿಗಳ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.